ಕೋಟಿ ಕೋಟಿ ಅನುದಾನ ಇದ್ದರೂ ಖರ್ಚು ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಕೂಡಲೇ ನೋಟಿಸ್‌ ನೀಡಿ, ಉತ್ತರ ಸಮರ್ಪಕವಾಗಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಹಾಗೂ ಇಲಾಖೆಯಡಿ ಬರುವ ವಿವಿಧ ನಿಗಮಗಳಲ್ಲಿ ಕೋಟಿ ಕೋಟಿ ಅನುದಾನ ಇದ್ದರೂ ಖರ್ಚು ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಕೂಡಲೇ ನೋಟಿಸ್‌ ನೀಡಿ, ಉತ್ತರ ಸಮರ್ಪಕವಾಗಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳು ಕೈಯಲ್ಲಿ ಸರ್ಕಾರದ ಅನುದಾನ ಇದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದಿರುವುದು, ನಿಗಮಗಳ ಯೋಜನೆಗಳಿಗೆ ಹಣ ಬಳಸದೆ ಇಟ್ಟುಕೊಂಡಿರುವುದು, ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸದೆ ಕೈಕಟ್ಟಿ ಕೂತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಫಲಾನುಭವಿಗಳಿಗೆ ಕೊಡಲು ಕೊಟ್ಟ ಹಣ ಇಟ್ಟುಕೊಂಡು ಕೂರುವುದಕ್ಕಾ ನೀವು ಇರೋದು ? ವರ್ಷದ ಕೊನೇ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಾರ್ಚ್‌ ಅಂತ್ಯದ ವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇಲಾಖೆಯ 739 ಕೋಟಿ ಉಳಿಕೆ: 2024-25ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿದ್ದ ₹5,377 ಕೋಟಿ ಅನುದಾನದ ಪೈಕಿ ಈವರೆಗೆ ₹3,631 ಕೋಟಿ ಬಿಡುಗಡೆಯಾಗಿದೆ. ₹2,892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಇನ್ನೂ ₹739 ಕೋಟಿ ಹಾಗೇ ಉಳಿದಿದೆ. ಅಂಬೇಡ್ಕರ್‌ ನಿಗಮದಲ್ಲಿ ₹900 ಕೋಟಿ, ಭೋವಿ ನಿಗಮದಲ್ಲಿ ₹107 ಕೋಟಿ ಸೇರಿ ಎಲ್ಲ ನಿಗಮಗಳಲ್ಲೂ ನೂರಾರು ಕೋಟಿ ಹಣ ಯಾಕೆ ಖರ್ಚು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೆಪ್ಟಂಬರ್‌ ಒಳಗೆ ವಿದ್ಯಾರ್ಥಿವೇತನ: ಇನ್ನು ಮುಂದೆ ಪ್ರತಿ ವರ್ಷ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನವನ್ನು ಸೆಪ್ಟೆಂಬರ್‌ ಅಂತ್ಯದೊಳಗೆ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್‌ ಅಂತ್ಯದ ಒಳಗಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಆಧಾರ್‌ ಮತ್ತಿತರರ ಕಾರಣಗಳಿಂದ ವಿದ್ಯಾರ್ಥಿ ವೇತನದಲ್ಲಿ ವಿಳಂಬವಾಗಬಾರದು ಎಂದು ಸೂಚಿಸಿದರು,

ಪ್ರತಿ ತಾಲೂಕಿನಲ್ಲಿಯೂ ಪಿಯು ವಸತಿ ಕಾಲೇಜು

ರಾಜ್ಯದ ಎಲ್ಲ ಹೋಬಳಿಗಳಲ್ಲಿ ವಸತಿ ಶಾಲೆಗಳ ಸ್ಥಾಪನೆ ಮತ್ತು ಪ್ರತಿ ತಾಲೂಕಿಗೊಂದು ಪಿಯು ವಸತಿ ಕಾಲೇಜು ಸ್ಥಾಪಿಸುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಬಾಕಿ ಇರುವ 92 ಹೋಬಳಿ ಹಾಗೂ ಬಾಕಿ ಇರುವ ತಾಲೂಕುಗಳಲ್ಲಿ ಇನ್ನೆರಡು ವರ್ಷದಲ್ಲಿ ವಸತಿ ಶಾಲೆ ಮತ್ತು ಪಿಯು ಕಾಲೇಜುಗಳ ಸ್ಥಾಪನೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ವಸತಿ ಪಿಯು ಕಾಲೇಜುಗಳ ಸಂಖ್ಯೆ 70 ಇದೆ. ಹಾಗಾಗಿ ಉಳಿದೆಲ್ಲ ಹೋಬಳಿ, ತಾಲೂಕುಗಳಲ್ಲಿ ವಸತಿ ಶಾಲೆ, ಕಾಲೇಜು ಆರಂಭಕ್ಕೆ ಕ್ರಮ ವಹಿಸಿ, ನಿರ್ಮಾಣ ಹಂತದಲ್ಲಿರುವ 90 ವಸತಿ ಶಾಲಾ ಕಟ್ಟಡಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ. ಈ ಶಾಲೆಗಳಿಗೆ ಎಲ್ಲಾ ಮಂಜೂರಾದ ಹುದ್ದೆಗಳನ್ನು ಭರ್ತಿ, ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಕೌಶಲ್ಯ ತರಬೇತಿ, ಶಿಕ್ಷಕರಿಗೆ ನಿರಂತರ ತರಬೇತಿ ನೀಡಲು ಕ್ರಮ ವಹಿಸಿ. ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸುವ ಬಗ್ಗೆ ಪರಿಶೀಲಿಸುವಂತೆಯೂ ಸೂಚಿಸಿದರು.

ನಿವೇಶನ ಲಭ್ಯವಿರುವ 63 ಕಡೆ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಎಲ್ಲ ವಸತಿ ಶಾಲೆಗಳಲ್ಲಿ ಊಟದ ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಸಿಗೆ ಸೇರಿ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳ ಆರೋಗ್ಯ, ಪೌಷ್ಟಿಕಾಂಶಗಳ ತಪಾಸಣೆ ನಿಯಮಿತವಾಗಿ ನಡೆಸಬೇಕು ಎಂದು ತಿಳಿಸಿದರು.

ಬೋರ್‌ವೆಲ್‌ ಸಂಖ್ಯೆ ಹೆಚ್ಚಳ, ಮನೆ ನಿರ್ಮಾಣ ವೆಚ್ಚ ಪರಿಷ್ಕರಣೆ ಪರಿಶೀಲಿಸಿ

ವಿವಿಧ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ ಕೊರೆಯುವ ಸಂಖ್ಯೆ ಹೆಚ್ಚಿಸುವ ಕುರಿತು ಹಾಗೂ ವಸತಿ ನಿರ್ಮಾಣಕ್ಕೆ ನೀಡುವ ಯೂನಿಟ್‌ ವೆಚ್ಚ ಪರಿಷ್ಕರಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಇದೇ ವೇಳೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ನಿಗಮಗಳಿಗೆ ಬಜೆಟ್‌ನಲ್ಲಿ ಈ ವರ್ಷ 446 ಕೋಟಿ ರು. ಒದಗಿಸಲಾಗಿದ್ದು, ಈವರೆಗೆ 260 ಕೋಟಿ ವೆಚ್ಚ ಮಾಡಲಾಗಿದೆ. ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯಲ್ಲಿ ವೆಚ್ಚ ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಸತಿ ನಿರ್ಮಾಣಕ್ಕೆ ಲಭ್ಯವಿರುವ ಅನುದಾನದಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಆರಂಭಿಸಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಿ. ಇದಕ್ಕಾಗಿ ಮನೆ ನಿರ್ಮಾಣದ ಯೂನಿಟ್‌ ವೆಚ್ಚವನ್ನು ಪರಿಷ್ಕರಿಸುವ ಕುರಿತು ಪರಿಶೀಲನೆ ಮಾಡಿ. ಕಳೆದ ಆಯವ್ಯದಲ್ಲಿ ಘೋಷಿಸಲಾಗಿರುವ, ಬೆಂಗಳೂರಿನಲ್ಲಿ 500 ಮಂದಿ ಸಾಮರ್ಥ್ಯದ ನಿರಾಶ್ರಿತರ ಶಿಬಿರ ಆರಂಭಿಸಲು ತಕ್ಷಣ ಜಮೀನು ಗುರುತಿಸಿ, ಕಾರ್ಯಾರಂಭಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.