ಎಚ್‌ಎಂಪಿವಿ ಅಪಾಯಕಾರಿಯಲ್ಲ, ಹೆಚ್ಚು ಜನ ಜಾಗೃತಿ ಮೂಡಿಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

| Published : Jan 08 2025, 10:27 AM IST

Siddaramaiah

ಸಾರಾಂಶ

ಹ್ಯೂಮನ್‌ ಮೆಟಾನ್ಯೂಮೋ ವೈರಸ್‌ (ಎಚ್‌ಎಂಪಿವಿ) ಮಾರಣಾಂತಿಕ ಅಥವಾ ಅಪಾಯಕಾರಿ ಅಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ, ಆರೋಗ್ಯ ತಜ್ಞರು ಹೇಳಿರುವುದರಿಂದ ಈ ಬಗ್ಗೆ ಜನ ಆತಂಕಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು : ಹ್ಯೂಮನ್‌ ಮೆಟಾನ್ಯೂಮೋ ವೈರಸ್‌ (ಎಚ್‌ಎಂಪಿವಿ) ಮಾರಣಾಂತಿಕ ಅಥವಾ ಅಪಾಯಕಾರಿ ಅಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ, ಆರೋಗ್ಯ ತಜ್ಞರು ಹೇಳಿರುವುದರಿಂದ ಈ ಬಗ್ಗೆ ಜನ ಆತಂಕಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರಾಜ್ಯಕ್ಕೂ ಕಾಲಿಟ್ಟಿರುವ ಎಚ್‌ಎಂಪಿವಿ ಹರಡುವಿಕೆಯ ತೀವ್ರತೆ, ಅದರಿಂದ ಅಪಾಯ ಎಷ್ಟು ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಅಧಿಕಾರಿಗಳು, ಎಚ್‌ಎಂಪಿವಿ ಪ್ರತೀ ವರ್ಷ ಹರಡುವ ಸಾಮಾನ್ಯ ವೈರಸ್‌. ಇದು ಅಪಾಯಕಾರಿಯಲ್ಲ, ಮಾರಣಾಂತಿಕವೂ ಅಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಹೆಚ್ಚಿನ ಜನ ಜಾಗೃತಿ ಮೂಡಿಸಲು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಕೆಲ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ವೈರಸ್‌ ಬಗ್ಗೆ ಬರುತ್ತಿರುವ ವರದಿಗಳಿಂದ ಜನ ಆತಂಕಗೊಳ್ಳುತ್ತಿದ್ದಾರೆ. ಇದರ ಲಾಭವನ್ನು ಕೆಲ ಪ್ರಯೋಗಾಲಯಗಳು ಪಡೆಯುತ್ತಿವೆ. ಬಿಸಿನೀರು ಸೇವನೆಯಿಂದ ಹೋಗುವ ವೈರಸ್‌ ಬಗ್ಗೆ ಆತಂಕಗೊಂಡು ಜನ ಎಚ್‌ಎಂಪಿವಿ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಿಗೆ ಹೋಗುತ್ತಿದ್ದಾರೆ. ಕೆಲ ಲ್ಯಾಬ್‌ಗಳಲ್ಲಿ ಪರೀಕ್ಷೆಗೆ 10ರಿಂದ 15 ಸಾವಿರ ರು. ವರೆಗೆ ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.

ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಿ. ಜೊತೆಗೆ ವೈರಸ್‌ ಹರಡುವಿಕೆ ತಡೆಗೆ ಕ್ರಮ ವಹಿಸಿ ಹಾಗೂ ಇದರ ರೂಪಾಂತರಗಳ ಮೇಲೆ ನಿಗಾ ಇಡಿ. ಜನರಲ್ಲಿ ಆತಂಕ ಸೃಷ್ಟಿಸಿ ಪರೀಕ್ಷೆಗೆ ಲ್ಯಾಬ್‌ಗಳಲ್ಲಿ ಹೆಚ್ಚು ಹಣ ಪಡೆಯುತ್ತಿರುವುದನ್ನು ತಡೆಯಲು ಕೂಡ ಕ್ರಮ ವಹಿಸಿ ಎಂದು ಸೂಚನೆ ನೀಡಿದರು ಎಂದು ಸಭೆಯಲ್ಲಿದ್ದ ಉನ್ನತ ಮೂಲಗಳು ಖಚಿತಪಡಿಸಿವೆ.

ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಆಯುಕ್ತ ಶಿವಕುಮಾರ್ ಕೆ.ಬಿ. ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂಗೆ ಅಧಿಕಾರಿಗಳು ಏನು ಹೇಳಿದರು?

- ಬಿಸಿನೀರಿನಿಂದ ಹೋಗುವ ವೈರಸ್‌ ಬಗ್ಗೆ ಆತಂಕ

- ಜನ ಖಾಸಗಿ ಆಸ್ಪತ್ರೆ, ಲ್ಯಾಬ್‌ಗೆ ಹೋಗುತ್ತಿದ್ದಾರೆ

- ಟೆಸ್ಟ್‌ಗೆ 10-15 ಸಾವಿರ ಟೆಸ್ಟ್‌ಗೆ ಶುಲ್ಕ ವಿಧಿಸ್ತಿದ್ದಾರೆ