ಸಾರಾಂಶ
‘ನೌಕರರ ಬೇಡಿಕೆಯಂತೆ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ. ಕೇವಲ 14 ತಿಂಗಳ ಹಿಂಬಾಕಿ ನೀಡಲು ಸಿದ್ಧ’ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಿಸಿದರು.
ಬೆಂಗಳೂರು : ವೇತನ ಹೆಚ್ಚಳ ಹಿಂಬಾಕಿ, ವೇತನ ಪರಿಷ್ಕರಣೆ ಸಂಬಂಧ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರ ಸಂಘಟನೆಗಳು ಮತ್ತು ಸರ್ಕಾರದ ನಡುವೆ ಸೋಮವಾರ ನಡೆದ ಮಾತುಕತೆ ವಿಫಲವಾಗಿದೆ. ‘ನೌಕರರ ಬೇಡಿಕೆಯಂತೆ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ. ಕೇವಲ 14 ತಿಂಗಳ ಹಿಂಬಾಕಿ ನೀಡಲು ಸಿದ್ಧ’ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಿಸಿದರು.
ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ 2020ರ ಜನವರಿಯಿಂದ 2023ರ ಫೆಬ್ರವರಿವರೆಗಿನ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ 2024ರ ಜನವರಿಯಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡುವಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಪಟ್ಟು ಹಿಡಿದರು.
ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಗಮಗಳ ಆರ್ಥಿಕ ಪರಿಸ್ಥಿತಿ, ವೇತನ ಹೆಚ್ಚಳಕ್ಕೆ ಸಂಬಂಧಿಸಿ 2023ರ ಮಾರ್ಚ್‌ನಲ್ಲಿ ಹಿಂದಿನ ಸರ್ಕಾರ ಮಾಡಿರುವ ಆದೇಶದಲ್ಲಿನ ದೋಷಗಳ ಕುರಿತು ನೌಕರ ಸಂಘಟನೆ ಪ್ರಮುಖರಿಗೆ ತಿಳಿಸಿದರು.
ಜತೆಗೆ ಸಂಘಟನೆಗಳು ಕೇಳುತ್ತಿರುವಷ್ಟು ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸಾಧ್ಯವಿಲ್ಲ. 38 ತಿಂಗಳ ಬದಲು 14 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಲಾಗುವುದು ಎಂದು ಭರವಸೆ ನೀಡಿದರು. ಅಂದಾಜಿನ ಪ್ರಕಾರ 14 ತಿಂಗಳ ವೇತನ ಹಿಂಬಾಕಿಗೆ 718 ಕೋಟಿ ರು. ಬೇಕಾಗುತ್ತದೆ. 38 ತಿಂಗಳ ವೇತನ ಹಿಂಬಾಕಿಗೆ ಸುಮಾರು 2000 ಕೋಟಿ ರು. ಬೇಕಾಗುತ್ತದೆ.
ಮುಖ್ಯಮಂತ್ರಿ ಅವರ ಭರವಸೆಗೆ ಒಪ್ಪದ ಸಂಘಟನೆಗಳ ಪ್ರಮುಖರು, ತಮ್ಮ ಬೇಡಿಕೆಯಂತೆ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶಿಸಬೇಕು ಮತ್ತು ಆ ಬಗ್ಗೆ ಲಿಖಿತವಾಗಿ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಸತತ 2 ಗಂಟೆಗಳ ಕಾಲ ಈ ಹಗ್ಗ ಜಗ್ಗಾಟದ ನಂತರವೂ ಅಂತಿಮ ತೀರ್ಮಾನ ತೀರ್ಮಾನವೊಂದಕ್ಕೆ ಬರಲಾಗಲಿಲ್ಲ. ಹೀಗಾಗಿ ಸಭೆ ವಿಫಲವಾಯಿತು ಮತ್ತು ಮುಷ್ಕರ ನಡೆಸುವ ತಮ್ಮ ನಿಲುವನ್ನು ಬದಲಿಸುವುದಿಲ್ಲ ಎಂದು ಸಂಘಟನೆಗಳ ಪ್ರಮುಖರು ಪ್ರಕಟಿಸಿದರು.
ಸಭೆಯಲ್ಲಿ ಸಾರಿಗೆ ನೌಕರರ ಪರ ಮಾತನಾಡಿದ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್, ವೇತನ ಪರಿಷ್ಕರಣೆ ನಿಯಮದಂತೆ 2020ರ ಜನವರಿಯಿಂದಲೇ ವೇತನ ಹೆಚ್ಚಳವಾಗಬೇಕಿತ್ತು. ಅದಕ್ಕೆ ತಕ್ಕಂತೆ 2023ರಲ್ಲಿ ಪೂರ್ವಾನ್ವಯವಾಗುವಂತೆ ಮೂಲವೇತನಕ್ಕೆ ಶೇ.15ರಷ್ಟು ಪರಿಷ್ಕರಿಸಿ ಅಂದಿನ ಸರ್ಕಾರ ಆದೇಶಿಸಿತ್ತು. ಹೀಗಾಗಿ 38 ತಿಂಗಳ ಹಿಂಬಾಕಿ ನೀಡಲೇಬೇಕು. ಅದರೊಂದಿಗೆ ಇದೀಗ ವೇತನ ಹೆಚ್ಚಿಸಿದರೆ 18 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಸೇರಿ ಒಟ್ಟು 56 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಶ್ರೀನಿವಾಸಮೂರ್ತಿ ಸಮಿತಿ ವರದಿಯನ್ನು ಪ್ರಸ್ತಾಪಿಸಿ, ಈ ವರದಿಯನ್ನು ಸರ್ಕಾರ ಮತ್ತು ಸಂಘಟನೆ ಒಪ್ಪಿಕೊಂಡಿವೆ. ಅದರ ಶಿಫಾರಸಿನಂತೆ 2022ರ ಜ.1ರಿಂದ 2023ರ ಫೆಬ್ರವರಿವರೆಗಿನ ವೇತನ ಹೆಚ್ಚಳ ಹಿಂಬಾಕಿ ಪಾವತಿಸಲಾಗುವುದು. ಉಳಿದಂತೆ ಹೊಸದಾಗಿ ವೇತನ ಹೆಚ್ಚಳ ಬೇಡಿಕೆ ಕುರಿತು ಮುಂಗಾರು ಅಧಿವೇಶನದ ನಂತರ ಮತ್ತೊಮ್ಮೆ ಸಭೆ ನಡೆಸಿ ಇತ್ಯರ್ಥಪಡಿಸಲಾಗುವುದು. ಹೀಗಾಗಿ ಸದ್ಯಕ್ಕೆ ಮುಷ್ಕರ ಮಾಡದಂತೆ ಮನವಿ ಮಾಡಿದರು.
ಅದಕ್ಕೊಪ್ಪದ ಸಂಘಟನೆಯ ಪ್ರಮುಖರು, ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಈಗ ಮತ್ತೆ ಕಾಲಾವಕಾಶ ಕೇಳುವುದು ಸರಿಯಲ್ಲ. ಶಕ್ತಿ ಯೋಜನೆ ಯಶಸ್ಸಿನ ಹಿಂದೆ ಸಾರಿಗೆ ನೌಕರರಿದ್ದಾರೆ. ಅವರ ಶ್ರೇಯಸ್ಸಿಗಾಗಿ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಸಭೆಯಲ್ಲಿ ಯಾವುದೇ ನಿರ್ಧಾರವೂ ಬರಲಾಗದೆ ವಿಫಲವಾಯಿತು.
------
ಬೇಡಿಕೆ ಈಡೇರುವವರೆಗೆ ಮುಷ್ಕರ
ಜನರಿಗೆ ಸಮಸ್ಯೆಯನ್ನುಂಟು ಮಾಡುವುದು ಸಾರಿಗೆ ನೌಕರರ ಉದ್ದೇಶವಲ್ಲ. ಕಳೆದ ಡಿ.31ರಿಂದಲೇ ಮುಷ್ಕರ ನಡೆಸಲು ನಿರ್ಧರಿಸಲಾಗಿತ್ತು. ಸರ್ಕಾರ ಮನವಿ ಮಾಡಿದ್ದರಿಂದ, ಕೈಬಿಡಲಾಯಿತು. ಈಗ ಮತ್ತೆ ಅದನ್ನೇ ಸರ್ಕಾರ ಹೇಳುತ್ತಿದೆ. ಸಾರಿಗೆ ನೌಕರರ ನೈಜ ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲಾಗುವುದು.
ಎಚ್.ವಿ. ಅನಂತಸುಬ್ಬರಾವ್, ಅಧ್ಯಕ್ಷ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ
-----
ಬೇಡಿಕೆ ಬಗ್ಗೆ ನೌಕರರಲ್ಲೇ ಸ್ಪಷ್ಟತೆ ಇಲ್ಲ
ಮುಖ್ಯಮಂತ್ರಿಗಳು 14 ತಿಂಗಳ ವೇತನ ಹಿಂಬಾಕಿ ನೀಡುವುದಾಗಿ ತಿಳಿಸಿದ್ದಾರೆ. ಅದಕ್ಕೆ 718 ಕೋಟಿ ರು. ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ನೌಕರ ಸಂಘಟನೆಗಳಲ್ಲಿಯೇ ಬಣಗಳಿವೆ. ಅದರಲ್ಲಿ ಒಂದು ಬಣ ಅದನ್ನು ಒಪ್ಪಲು ಸಿದ್ಧವಿಲ್ಲ. ಸರ್ಕಾರ ಮತ್ತು ನೌಕರರು ಒಟ್ಟಿಗೆ ಸಾಗಿದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ.
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
---
- ವೇತನ ಹೆಚ್ಚಳ ಹಿಂಬಾಕಿ, ವೇತನ ಪರಿಷ್ಕರಣೆಗೆ ಪಟ್ಟು
- 2024ರ ಆರಂಭದಿಂದ ಅನ್ವಯ ಆಗುವಂತೆ ವೇತನ ಹೆಚ್ಚಳ
- 2020ರ ಜನವರಿಯಿಂದ 38 ತಿಂಗಳ ಹಿಂಬಾಕಿಗೆ ಬೇಡಿಕೆ
- ಈ ಬಗ್ಗೆ ಸಿಎಂ ಜತೆ 2 ತಾಸು ಸಾರಿಗೆ ನೌಕರರ ಚರ್ಚೆ
- ಯಾವುದೇ ತೀರ್ಮಾನಕ್ಕೆ ಬರಲಾಗದೆ ಸಭೆ ವಿಫಲ