ಸಾರಾಂಶ
ಕಸ ಸಂಗ್ರಹ ಮತ್ತು ವಿಲೇವಾರಿ ಕಾರ್ಯದಲ್ಲಿ ಜವಾಬ್ದಾರಿ ಹಂಚಿಕೆ ವಿಚಾರದಲ್ಲಿ ಬಿಬಿಎಂಪಿ ಹಾಗೂ ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್) ಅಧಿಕಾರಿಗಳ ನಡುವಿನ ಗೊಂದಲದಿಂದ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ತಲೆದೂರುವ ಲಕ್ಷಣ ಕಾಣುತ್ತಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಕಸ ಸಂಗ್ರಹ ಮತ್ತು ವಿಲೇವಾರಿ ಕಾರ್ಯದಲ್ಲಿ ಜವಾಬ್ದಾರಿ ಹಂಚಿಕೆ ವಿಚಾರದಲ್ಲಿ ಬಿಬಿಎಂಪಿ ಹಾಗೂ ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್) ಅಧಿಕಾರಿಗಳ ನಡುವಿನ ಗೊಂದಲದಿಂದ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ತಲೆದೂರುವ ಲಕ್ಷಣ ಕಾಣುತ್ತಿದೆ.
ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ, ‘ಘನತ್ಯಾಜ್ಯ ನಿರ್ವಹಣಾ ಕಂಪನಿ’ (ಬಿಎಸ್‌ಡಬ್ಲ್ಯೂಎಂಎಲ್) ಸ್ಥಾಪಿಸಿದೆ. ಕಳೆದ ಜೂನ್‌ನಿಂದ ನಗರದ ಪ್ರತಿ ಮನೆಯಿಂದ ಕಸ ಸಂಗ್ರಹ ಮತ್ತು ವಿಲೇವಾರಿ ಜವಾಬ್ದಾರಿಯನ್ನು ಕಂಪನಿಗೆ ವಹಿಸಿದೆ. ಆದರೆ, ಕಂಪನಿಯು ಗುತ್ತಿಗೆದಾರರಿಗೆ ಪಾವತಿಸುವ ಬಿಲ್‌ನಲ್ಲಿ ಜಿಎಸ್‌ಟಿ ಪಾವತಿ ಮಾಡುವ ವಿಚಾರ ಸೇರಿ ಮೊದಲಾದ ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದಲೇ ಗುತ್ತಿಗೆದಾರರಿಗೆ ಬಿಲ್ ಪಾವತಿ ಹೊಣೆಗಾರಿಕೆ ನೀಡಲಾಗಿದೆ. ಇದೇ ರೀತಿ ಬಿಬಿಎಂಪಿಯ ಅಧಿಕಾರಿಗಳು ಮತ್ತು ಬಿಎಸ್‌ಡಬ್ಲ್ಯೂಎಂಎಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲದಿಂದ ನಗರದಲ್ಲಿ ಮತ್ತೆ ಕಸ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ, ಬ್ಲಾಕ್ ಸ್ಪಾಟ್ ಸಂಖ್ಯೆ ಸಹ ಹೆಚ್ಚಾಗಿವೆ.
ಮನೆ ಮನೆಗೆ ಕಸ ಸಂಗ್ರಹಕ್ಕೆ ಬರುತ್ತಿದ್ದ ಆಟೋಗಳು ಸಹ ಸರಿಯಾಗಿ ಬರುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಸಾರ್ವಜನಿಕರು ಕಸವನ್ನು ತೆಗೆದುಕೊಂಡು ಬಂದು ಮತ್ತೆ ರಸ್ತೆ ಬದಿ ಎಸೆಯುವುದಕ್ಕೆ ಆರಂಭಿಸಿದ್ದಾರೆ. ಮನೆ ಮನೆಗೆ ಬಾರದ ಕಸ ಸಂಗ್ರಹಿಸುವ ಆಟೋಗಳು, ಬ್ಲಾಕ್ ಸ್ಪಾಟ್‌ಗಳ ಬಳಿ ಹೋಗಿ ಕಸವನ್ನು ತುಂಬಿಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ.
1,300ಕ್ಕೂ ಅಧಿಕ ಬ್ಲಾಕ್ ಸ್ಪಾಟ್
ಬಿಬಿಎಂಪಿಯ 8 ವಲಯದಲ್ಲಿ 1300ಕ್ಕೂ ಅಧಿಕ ಬ್ಲಾಕ್ ಸ್ಪಾಟ್‌ಗಳಿವೆ. ಈ ಪೈಕಿ 1289 ಬ್ಲಾಕ್ ಸ್ಪಾಟ್‌ನಲ್ಲಿ ಪ್ರತಿ ದಿನ ಕಸವನ್ನು ಸಾರ್ವಜನಿಕರು ಎಸೆಯುತ್ತಾರೆ. ಈ ಬ್ಲಾಕ್ ಸ್ಪಾಟ್‌ಗಳನ್ನು ಬಿಬಿಎಂಪಿಯ ಸಿಬ್ಬಂದಿ ಪ್ರತಿ ದಿನ ಸ್ವಚ್ಛಗೊಳಿಸುತ್ತಾರೆ. ಇವುಗಳನ್ನು ಹೊರತು ಪಡಿಸಿ ಸುಮಾರು 30ಕ್ಕೂ ಅಧಿಕ ಶಾಶ್ವತ ಬ್ಲಾಕ್ ಸ್ಪಾಟ್‌ಗಳಿವೆ. ಇವುಗಳನ್ನು ಪ್ರತಿ ದಿನ ಸ್ವಚ್ಛಗೊಳಿಸುವುದಕ್ಕೆ ಬಿಬಿಎಂಪಿಯಿಂದ ಸಾಧ್ಯವಾಗುತ್ತಿಲ್ಲ.
ಒಂದೂವರೆ ತಿಂಗಳಲ್ಲಿ 7000 ದೂರು
ಕಂಪನಿ ಮತ್ತು ಬಿಬಿಎಂಪಿಯ ಅಧಿಕಾರಿಗಳ ನಡುವೆ ಕಸ ವಿಲೇವಾರಿ ಗೊಂದಲ ಆರಂಭಗೊಂಡ ನಂತರ ಕಳೆದ ಆ.1ರಿಂದ ಸೆ.18ರ ಅವಧಿಯಲ್ಲಿ 7000ಕ್ಕೂ ಅಧಿಕ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಸಹಾಯವಾಣಿ ಕೇಂದ್ರಕ್ಕೆ ದೂರು ದಾಖಲಾಗಿವೆ. ಈ ಪೈಕಿ ಪೂರ್ವ ವಲಯ, ದಕ್ಷಿಣ ವಲಯ, ಮಹದೇವಪುರದಲ್ಲಿ 1000ಕ್ಕೂ ಅಧಿಕ ದೂರು ದಾಖಲಾಗಿವೆ.
ಕಸ ಕುರಿತು ದೂರು ಮತ್ತು ಬ್ಲಾಕ್ ಸ್ಪಾಟ್ ವಿವರ
ವಲಯ ದೂರು ಸಂಖ್ಯೆ(ಆ.1-ಸೆ.18) ತಾತ್ಕಾಲಿಕ ಬ್ಲಾಕ್ ಸ್ಪಾಟ್
ಬೊಮ್ಮನಹಳ್ಳಿ 923 81
ದಾಸರಹಳ್ಳಿ 194 86
ಪೂರ್ವ 1440 254
ಮಹದೇವಪುರ 1050 232
ದಕ್ಷಿಣ 1314 161
ಆರ್‌ಆರ್‌ನಗರ 713 144
ಪಶ್ಚಿಮ 502 235
ಯಲಹಂಕ 742 96
ಒಟ್ಟು 6,878 1,289