ಸಾರಾಂಶ
ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಗೂ ಆ ಪ್ರಕರಣಗಳ ತನಿಖೆ ಸಲುವಾಗಿ ಪ್ರತ್ಯೇಕವಾಗಿ ಸ್ಥಾಪಿಸಿರುವ ಸೈಬರ್ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಬೆಂಗಳೂರು : ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಗೂ ಆ ಪ್ರಕರಣಗಳ ತನಿಖೆ ಸಲುವಾಗಿ ಪ್ರತ್ಯೇಕವಾಗಿ ಸ್ಥಾಪಿಸಿರುವ ಸೈಬರ್ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಈ ಘಟಕದ ಡಿಐಜಿಯಾಗಿ ಭೂಷಣ್ ಬೊರೆಸೆ ಅವರು ನೇಮಕಗೊಂಡಿದ್ದು, ಹಂತ ಹಂತವಾಗಿ ಐಜಿಪಿ ಹಾಗೂ ಎಸ್ಪಿ ಸೇರಿದಂತೆ ಅಧಿಕಾರಿ-ಸಿಬ್ಬಂದಿ ನಿಯೋಜಿಸಲು ಸರ್ಕಾರ ಮುಂದಾಗಿದೆ. ಘಟಕದ ಮುಖ್ಯಸ್ಥರಾಗಿ ಪ್ರಣವ್ ಮೊಹಂತಿ ಅವರಿಗೆ ಹೊಣೆಗಾರಿಕೆ ನೀಡಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಬೇಕಿದೆ.
ಸೈಬರ್ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪಿಸುವಂತೆ ಸರ್ಕಾರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಘಟಕದ ವ್ಯಾಪ್ತಿಗೆ ರಾಜ್ಯದ ಎಲ್ಲ ಸಿಇಎನ್ ಠಾಣೆಗಳು ಬರಲಿದ್ದು, ಐಜಿಪಿ ವಲಯಕ್ಕೆ ಓರ್ವ ಎಸ್ಪಿ ನೇಮಕವಾಗಲಿದ್ದಾರೆ. ಈಗಾಗಲೇ ಸಿಇಎನ್ ಠಾಣೆಗಳಿಗೆ ಡಿವೈಎಸ್ಪಿ ಮುಖ್ಯಸ್ಥರಾಗಿದ್ದು, ಸೈಬರ್ ಪ್ರಕರಣಗಳ ತನಿಖೆಗೆ ತ್ವರಿತವಾಗಿ ಮುಗಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ.
₹72 ಕೋಟಿ ಅನುದಾನ ಕೋರಿಕೆ
ಸೈಬರ್ ತನಿಖಾ ಘಟಕಕ್ಕೆ ಸ್ಥಾಪನೆಗೆ ₹72 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆ ಕೋರಿಕೆ ಸಲ್ಲಿಸಿದೆ. ಆದರೆ ಮೊದಲ ಹಂತದಲ್ಲಿ ಘಟಕಕ್ಕೆ ಕೇವಲ ₹5 ಕೋಟಿ ಮಾತ್ರ ಬಿಡುಗಡೆಗೆ ಸರ್ಕಾರ ಸಮ್ಮಿತಿಸಿದೆ. ಸೈಬರ್ ಲ್ಯಾಬ್, ತಾಂತ್ರಿಕ ಉಪಕರಣಗಳ ಖರೀದಿ ಹಾಗೂ ಕಚೇರಿ ಸ್ಥಾಪನೆ ಹೀಗೆ ಮೂಲಭೂತ ಸೌಲಭ್ಯಕ್ಕಾಗಿ ₹72 ಕೋಟಿ ಆರ್ಥಿಕ ನೆರವು ಕೋರಿದೆ ಎಂದು ತಿಳಿದು ಬಂದಿದೆ.