ಸಾರಾಂಶ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಬದಲಿಗೆ ಮತ್ತೊಂದು ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಬದಲಿಗೆ ಮತ್ತೊಂದು ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಪ್ರಜ್ವಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ನ್ಯಾ.ಭಟ್ ಅವರ ಪೀಠದ ನ್ಯಾಯಾಲಯ ಬದಲಿಗೆ ಮತ್ತೊಂದು ಕೋರ್ಟ್‌ಗೆ ಪ್ರಕರಣ ವರ್ಗಾಯಿಸುವಂತೆ ಕೋರಲಾಗಿದೆ. ನ್ಯಾಯಾಲಯವು ತಮ್ಮ ಕಕ್ಷಿದಾರರನ್ನು ಲೇವಡಿ ರೂಪದಲ್ಲಿ ಹೇಳಿಕೆ ನೀಡಿದೆ. ‘ಎಲ್ಲಿ ಹೀರೋ’, ‘ಮಹಾತ್ಮ’ ಮತ್ತು ‘ಫಿಲಂ ಹೀರೋ...ವಿಡಿಯೋ ನೋಡೋಲ್ವಾ’ ಎಂಬುದಾಗಿ ಕರೆಯಲಾಗಿದೆ. ಇದು ವ್ಯಂಗ್ಯದಿಂದ ಕೂಡಿದ್ದು, ಆರೋಪಿ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಲ್ಲದೇ, ನ್ಯಾಯಯುತ ಕಾರಣಗಳಿಲ್ಲದೆ, ಪ್ರತಿವಾದಗಳನ್ನು ಖಂಡಿಸಿರುವಂತಹ ಘಟನೆಗಳು ನಡೆದಿವೆ. ಕೆಲವೊಂದು ಸಂದರ್ಭದಲ್ಲಿ ಪೂರ್ವಾಗ್ರಹ ವರದಿಗಳಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಲಾಗಿದೆ.