ಕೋವಿಡ್ ಅಕ್ರಮ: 2 ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್‌

| N/A | Published : May 03 2025, 09:02 AM IST

COVID ALERT
ಕೋವಿಡ್ ಅಕ್ರಮ: 2 ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕೋವಿಡ್ ನಿರ್ವಹಣೆಯಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ 2 ಅಧಿಕಾರಿಗಳಿಗೆ ನೋಟಿಸ್‌

 ಬೆಂಗಳೂರು : ನಗರದ ಕೋವಿಡ್ ನಿರ್ವಹಣೆಯಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ ಆರೋಗ್ಯಧಿಕಾರಿಗಳಾದ ಡಾ.ಎಸ್.ಕೆ.ಸವಿತಾ ಹಾಗೂ ಡಾ.ಜಿ.ಶ್ರೀನಿವಾಸ್‌ಗೆ ನಗರಾಭಿವೃದ್ಧಿ ಇಲಾಖೆ ನೋಟಿಸ್ ಜಾರಿ ಮಾಡಿದ್ದು, 15 ದಿನದಲ್ಲಿ ವಿಚಾರಣೆ ಹಾಜರಾಗಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ನಂದಕುಮಾರ್‌ ಅವರು ಡಾ.ಎಸ್‌.ಕೆ.ಸವಿತಾ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಈ ನೋಟಿಸ್‌ನಲ್ಲಿ ‘ಆರ್‌ಆರ್‌ ನಗರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಆರೋಗ್ಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ತಮ್ಮ ಪುತ್ರ ಸಿ.ಸಿದ್ದರಾಜು ಚಿರಾಗ್ ಒಡೆತನದ ನಕಲಿ ಎವಿಎಸ್ ಎಂಟರ್‌ಪ್ರೆಸಸ್‌ ಸಂಸ್ಥೆಗೆ ಅಕ್ರಮವಾಗಿ ಕಾರ್ಯಾದೇಶ ಪತ್ರ ನೀಡಿದ್ದೀರಿ. ನಿಯಮದ ಪ್ರಕಾರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಯಾವುದೇ ಕಂಪನಿ ಪರವಾಗಿ ವ್ಯವಹಾರ ಮಾಡಲು ಅವಕಾಶ ಇರುವುದಿಲ್ಲ. ಆದರೆ, ಈ ನಿಯಮ ಉಲ್ಲಂಘಿಸಿ ತಮ್ಮ ಪುತ್ರ ಒಡೆತನದ ಕಂಪನಿಗೆ 20ಕ್ಕೂ ಅಧಿಕ ಕಾರ್ಯದೇಶ ಪತ್ರ ನೀಡಿರುವುದು ಗಂಭೀರ ಕರ್ತವ್ಯ ಲೋಪವಾಗಿರುತ್ತದೆ’ ಎಂದು ತಿಳಿಸಲಾಗಿದೆ.

ಕುಟುಂಬದ ಸದಸ್ಯರ ಖಾತೆಗೆ ಹಣ ವರ್ಗವಾಣೆ:

ಇನ್ನು ಡಾ.ಜಿ.ಶ್ರೀನಿವಾಸ್‌ ಅವರಿಗೆ ನೀಡಲಾದ ನೋಟಿಸ್‌ನಲ್ಲಿ ‘ಆರೋಗ್ಯ ಇಲಾಖೆಯಿಂದ ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಆರೋಗ್ಯ ವೈದ್ಯಾಧಿಕಾರಿ (ಶಾಂತಿನಗರ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ, ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸ್ವಾಬ್ ಸಂಗ್ರಹ, ಗಣಕಯಂತ್ರ ನಿರ್ವಾಹಕರಗಳ ಹೆಸರಿನಲ್ಲಿ ಬಿಬಿಎಂಪಿ ನೌಕರರ ಮತ್ತು ಅವರ ಕುಟುಂಬದ ಸದಸ್ಯರ ಖಾತೆಗೆ ಅಕ್ರಮವಾಗಿ ಲಕ್ಷಾಂತರ ಹಣ ವರ್ಗವಾಣೆ ಮಾಡಿದ್ದೀರಿ. ಕ್ಯಾನ್ಸರ್ ಕೇರ್ ಇಂಡಿಯಾ ಟ್ರಸ್ಟ್ ನಿಂದ ನೇಮಿಸಿಕೊಂಡಿದ್ದ ಸಿಬ್ಬಂದಿ ನಿಯೋಜಿಸುವ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅರ್ಹತೆ ಹೊಂದಿರುವ ಬಗ್ಗೆ ಪರಿಶೀಲಿಸದೆ ಬೇಜವಾಬ್ದಾರಿತನದದಿಂದ ಕರ್ತವ್ಯ ಲೋಪ ಎಸಗಿರುತ್ತಾರೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ತಮ್ಮ ಪ್ರತಿವಾದದ ಹೇಳಿಕೆಯನ್ನು 15 ದಿನದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಲಿಖಿತ ರೂಪದಲ್ಲಿ ಸಲ್ಲಿಸುವುದು. ಪ್ರತಿವಾದ ಹೇಳಿಕೆ ಸಲ್ಲಿಸುವ ವೇಳೆ ತಾವು ಒಪ್ಪಿಕೊಳ್ಳದೇ ಇರುವ ಆರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಲಾಗುವುದು. ಹೀಗಾಗಿ, ಪ್ರತಿ ಆರೋಪವನ್ನೂ ನೀವು ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು ಅಥವಾ ನಿರಾಕರಿಸಬೇಕು. ನಿಗದಿತ ಅವಧಿಯಲ್ಲಿ ಪ್ರತಿರಕ್ಷಣಾ ಹೇಳಿಕೆ ಲಿಖಿತ ರೂಪದಲ್ಲಿ ಸಲ್ಲಿಸದಿದ್ದರೆ ನೀವು ಪ್ರತಿ ವಾದಿಸುವಂತಹ ವಿಷಯಗಳು ಏನು ಇಲ್ಲವೆಂದು ಭಾವಿಸಿ ಕರ್ನಾಟಕ ನಾಗರಿಕ ಸೇವೆ ನಿಯಮದ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಸೂಚನೆ ನೀಡಲಾಗಿದೆ.