ಸಾರಾಂಶ
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮಾಲೀಕರು ಕೂಡಲೇ ದುರಸ್ಥಿ ಮಾಡಿಕೊಳ್ಳಬೇಕು
ಬೆಂಗಳೂರು : ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮಾಲೀಕರು ಕೂಡಲೇ ದುರಸ್ಥಿ ಮಾಡಿಕೊಳ್ಳಬೇಕು. ಇಂತಹ ಕಟ್ಟಡ ಗುರುತಿಸಿ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದು, ಮಾಲೀಕರು ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಧರ್ಮರಾಯಸ್ವಾಮಿ ದೇವಾಲಯದ ಬಳಿಯ ತಿಗಳರಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ದುರ್ಬಲ ಕಟ್ಟಡಗಳಿಂದ ಹಾನಿ ಉಂಟಾಗುತ್ತಿದೆ. ಹಾಗಂತ ಕೂಡಲೇ ದುರ್ಬಲ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ಥಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಮಾತ್ರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಹಲವು ಕಟ್ಟಡ ವಾಸಯೋಗ್ಯವಲ್ಲ:
ಎರಡು, ಮೂರು ಮಹಡಿಗಳನ್ನು ಕಟ್ಟುವ ಕಡೆಗಳಲ್ಲಿ ಎಂಟತ್ತು ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಇಂತಹ ಕಟ್ಟಡಗಳನ್ನು ಹೊಡೆದು ಹಾಕುವುದು ನಂತರದ ವಿಚಾರ. ಇದರ ಬಗ್ಗೆ ಮೊದಲು ಸಮೀಕ್ಷೆ ನಡೆಸಲಾಗುವುದು. ಇದು ಒಂದೇ ದಿನಕ್ಕೆ ಮುಗಿಯುವ ಕೆಲಸವಲ್ಲ. ವರ್ಷಗಟ್ಟಲೆ ಹಿಡಿಯುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಒಳಗೆ ಬಂದು ನೋಡಿದಾಗ ನನಗೆ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನ ಓಡಿ ಹೋಗುತ್ತಾರೆ. ಆಗ ಕಾಲ್ತುಳಿತ ಉಂಟಾಗಿಯೇ ಜನ ಸಾಯುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮೃತರಿಗೆ ತಲಾ
₹5 ಲಕ್ಷ ಪರಿಹಾರ
ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಗಳ ಕುಟುಂಬಸ್ಥರಿಗೆ 5 ಲಕ್ಷ ರು. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದರು.