ಗೋವಾ ಸಿಎಂ ಮಹದಾಯಿ ಯೋಜನೆ ಹೇಗೆ ತಡೀತಾರೋ ನೋಡ್ತೀನಿ: ಡಿ.ಕೆ.ಶಿವಕುಮಾರ್‌

| N/A | Published : Jul 25 2025, 07:28 AM IST

Karnataka Deputy Chief Minister DK Shivakumar (File photo/ANI)
ಗೋವಾ ಸಿಎಂ ಮಹದಾಯಿ ಯೋಜನೆ ಹೇಗೆ ತಡೀತಾರೋ ನೋಡ್ತೀನಿ: ಡಿ.ಕೆ.ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ಮಾಹಿತಿ ಇಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದಾರೆ.

 ಬೆಂಗಳೂರು : ‘ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ಮಾಹಿತಿ ಇಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದಾರೆ. ಯೋಜನೆಗೆ ಈಗಾಗಲೇ ಟೆಂಡರ್‌ ಕರೆದಿದ್ದು, ಏನೇ ಆಗಲಿ ನಾವು ಕಾಮಗಾರಿ ಪ್ರಾರಂಭಿಸುತ್ತೇವೆ. ಬೇಕಿದ್ದರೆ ಗೋವಾ ಸಿಎಂ ಅದನ್ನು ತಡೆಯಲಿ, ನಾವೂ ನೋಡುತ್ತೇವೆ.’ಹೀಗಂತ ಗೋವಾ ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್‌ ಅವರು, ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಹೇಳಿಕೆಯನ್ನು ಖಂಡಿಸಿದರು. ಗೋವಾದವರಿಗೆ ಕರ್ನಾಟಕ ರಾಜ್ಯಕ್ಕೆ ನೋಟಿಸ್‌ ನೀಡುವ ಹಕ್ಕಿಲ್ಲ. ಏನೇ ನೋಟಿಸ್‌ ನೀಡಿದರೂ ನಾವು ಯೋಜನೆ ಕಾಮಗಾರಿ ಪ್ರಾರಂಭಿಸುತ್ತೇವೆ. ಅವರು ಅದನ್ನು ತಡೆಯಲಿ, ನಾನೂ ನೋಡುತ್ತೇನೆ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ನಾವು ಸಲ್ಲಿಸಿರುವ ಅರ್ಜಿ ಹಿಂಪಡೆದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಯೋಜನೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಕೆಲಸ ಶುರು ಮಾಡಬೇಕಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ನಾವು ಕೆಲಸ ಮಾಡುತ್ತೇವೆ. ನಮ್ಮದು ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಇಲ್ಲಿ ಅಂತರ್‌ ರಾಜ್ಯಗಳ ನಡುವಣ ಸಂಬಂಧ ಹೇಗಿರಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ಕಿಡಿಕಾರಿದರು.

 ನಮ್ಮ ನೆಲ, ನಮ್ಮ ಯೋಜನೆ: ಇದು ನಮ್ಮ ನೆಲ, ನಮ್ಮ ಯೋಜನೆ, ನಾವು ಮಾಡುತ್ತೇವೆ. ಇದನ್ನು ಪ್ರಶ್ನಿಸುವುದು ಅವರ ಹಕ್ಕಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣದ ತೀರ್ಪು ಹೊರಬಿದ್ದಿದೆ. ಯೋಜನೆ ಜಾರಿಗೆ ಸಂಬಂಧಿಸಿ ಟೆಂಡರ್ ಕರೆಯಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು, ಸ್ಥಳೀಯ ಸಂಸದರು ಹಾಗೂ ಕೇಂದ್ರದ ಹಾಲಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಯೋಜನೆ ಜಾರಿಯಾಗಲಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು ಎಂದು ಶಿವಕುಮಾರ್‌ ಹೇಳಿದರು.

ಬಿಜೆಪಿ ನಾಯಕರು ಬಾಯ್ಬಿಡಲಿ: ರಾಜ್ಯದ ಗೌರವ ಉಳಿಸಲು ಎಲ್ಲಾ ಸಂಸದರು ಒಟ್ಟಾಗಿ ಹೋರಾಡಬೇಕು. ಈ ವಿಚಾರವಾಗಿ ರಾಜ್ಯದ ಎಲ್ಲಾ ಸಂಸದರನ್ನು ಭೇಟಿ ಮಾಡುತ್ತೇನೆ. ಇದು ನಮ್ಮ ರಾಜ್ಯದ ಸ್ವಾಭಿಮಾನದ ಪ್ರಶ್ನೆ. ಈ ವಿಚಾರದಲ್ಲಿ ನಮ್ಮ ಸಂಸದರು ಬಾಯಿ ಮುಚ್ಚಿಕೊಂಡಿರುವುದೇ ದೊಡ್ಡ ತಪ್ಪು. ನಮ್ಮ ರಾಜ್ಯದ 28 ಲೋಕಸಭೆ ಸದಸ್ಯರು, 12 ರಾಜ್ಯಸಭೆ ಸದಸ್ಯರು ಒಗ್ಗಟ್ಟಿನಿಂದ ಹೋರಾಡಿ ರಾಜ್ಯದ ಗೌರವ ಕಾಪಾಡಬೇಕಾಗಿದೆ. ಗೋವಾದ ಕೇವಲ ಒಬ್ಬ ಸಂಸದರಿಗಾಗಿ ನಮ್ಮ ಕರ್ನಾಟಕವನ್ನು ಮಾರಿಕೊಳ್ಳಲು ಸಾಧ್ಯವಿಲ್ಲ. ಇನ್ನಾದರೂ ಬಿಜೆಪಿ ನಾಯಕರು ಬಾಯ್ಬಿಡಲಿ ಎಂದು ಶಿವಕುಮಾರ್‌ ಆಗ್ರಹಿಸಿದರು.

ಕೇಂದ್ರಕ್ಕೆ ನಿಯೋಗ: ಈ ವಿಚಾರವಾಗಿ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರ್ಕಾರದ ಸಚಿವರು ಹಾಗೂ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕಬೇಕು. ನಾನು ಕೂಡ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೇಳುತ್ತೇನೆ. ಎಲ್ಲಾ ಸಂಸದರ ಸಭೆ ಕರೆದು ನಿಯೋಗವನ್ನು ಕರೆದೊಯ್ಯುವ ಪ್ರಯತ್ನ ಮಾಡುತ್ತೇನೆ. ಯಾರು ಬರುತ್ತಾರೋ ಬಿಡುತ್ತಾರೋ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ಕೇಂದ್ರ ಜಲಶಕ್ತಿ ಸಚಿವರು ಮಹದಾಯಿ ವಿಚಾರದಲ್ಲಿ ನಿಷ್ಪಕ್ಷಪಾತವಾಗಿದ್ದಾರೆ. ಈ ವಿಚಾರದಲ್ಲಿ ಅವರು ರಾಜಕೀಯ ಮಾಡುವುದಿಲ್ಲ. ನಾನು ಅವರನ್ನು ಐದಾರು ಬಾರಿ ಈ ವಿಚಾರಕ್ಕಾಗಿ ಭೇಟಿ ಮಾಡಿದ್ದೇನೆ. ಕೇಂದ್ರ ಅರಣ್ಯ ಸಚಿವರು ಕೂಡ ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬೆಂಬಲವಾಗಿದ್ದಾರೆ.

- ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

ಬಿಜೆಪಿಯಿಂದ ಅಷ್ಟು ಮಂದಿ ಸಂಸದರು ಗೆದ್ದಿದ್ದರೂ ಮಹದಾಯಿ ವಿಚಾರವಾಗಿ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಈ ಬಗ್ಗೆ ಬಾಯಿ ಬಿಡದ ಬಿಜೆಪಿಗೆ ಜನರೇ ಇವರಿಗೆ ಬುದ್ಧಿ ಕಲಿಸಬೇಕು.

- ರಾಮಲಿಂಗಾರೆಡ್ಡಿ, ಸಚಿವರು

Read more Articles on