ಸಾರಾಂಶ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೀವ್ರ ಬೆನ್ನು ನೋವಿಂದ ಬಳಲುತ್ತಿದ್ದು, ಬುಧವಾರ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದರು. ಮುಂದಿನ ವಾರ ವೈದ್ಯರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಸಾಧ್ಯತೆ ಇದೆ.
ಮೈಸೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೀವ್ರ ಬೆನ್ನು ನೋವಿಂದ ಬಳಲುತ್ತಿದ್ದು, ಬುಧವಾರ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದರು. ಮುಂದಿನ ವಾರ ವೈದ್ಯರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಸಾಧ್ಯತೆ ಇದೆ.
ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡಿದ್ದ ದರ್ಶನ್ ಅವರು, ಡಾ. ಅಜಯ್ ಹೆಗ್ಡೆ ಅವರ ಬಳಿ ಚಿಕಿತ್ಸೆಗಾಗಿ ನಟ ಧನ್ವೀರ್ ಜೊತೆ ಆಗಮಿಸಿದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಪಡೆಯುವ ನರ್ವ್ ರೂಟ್ ಬ್ಲಾಕ್, ಎಪಿಡ್ಯೂರಲ್ ಇಂಜೆಕ್ಷನ್ ಪಡೆದರು.
L5 - S1 ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಗೆ ಈ ಇಂಜೆಕ್ಷನ್ ಕೆಲಸ ಮಾಡದಿದ್ದರೆ ಮೂರು ದಿನಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸ್ಟ್ರೆಂಥನಿಂಗ್ ವರ್ಕೌಟ್ ಶುರುಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ದೇಹದ ಮೇಲ್ಭಾಗಕ್ಕೆ ಮಾತ್ರ ವರ್ಕೌಟ್ ಮಾಡಲು ತಿಳಿಸಿದ್ದಾರೆ.
ಈ ಮಧ್ಯೆ, ದರ್ಶನ್ ಅವರು ಕುಟುಂಬ ಸಮೇತ ಬುಧವಾರ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಶ್ರೀ ಅಹಲ್ಯದೇವಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರನೊಂದಿಗೆ ಆಗಮಿಸಿದ ದರ್ಶನ್, ಗರ್ಭಗುಡಿ ಬಳಿ ತೆರಳಿ ದೋಷ ನಿವಾರಣಾ ಪೂಜೆ ಸಲ್ಲಿಸಿ ನಂತರ ತಡೆ ಹೊಡೆಸಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅಪಾರ ಪ್ರಮಾಣ ಅಭಿಮಾನಿಗಳು ಇದ್ದರು.