ಕೋಗಿಲು ಅಕ್ರಮ ಮನೆಗಳ ತೆರವು ಕಾರಣದಿಂದ ಸಂತ್ರಸ್ಥರಾಗಿರುವವರ ಪೈಕಿ ಸರ್ಕಾರದಿಂದ ನೀಡಲಾಗುವ ಮನೆಗಳಿಗೆ 37 ಜನರು ಮಾತ್ರ ಅರ್ಹತೆ ಹೊಂದಿದ್ದಾರೆ ಎನ್ನುವ ವಿವರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅವರಿಗೆ ನೀಡಿದ್ದಾರೆ.

 ಬೆಂಗಳೂರು : ಯಲಹಂಕದ ಕೋಗಿಲು ಪ್ರದೇಶದಲ್ಲಿ ಅಕ್ರಮ ಮನೆಗಳ ತೆರವು ಕಾರಣದಿಂದ ಸಂತ್ರಸ್ಥರಾಗಿರುವವರ ಪೈಕಿ ಸರ್ಕಾರದಿಂದ ನೀಡಲಾಗುವ ಮನೆಗಳಿಗೆ 37 ಜನರು ಮಾತ್ರ ಅರ್ಹತೆ ಹೊಂದಿದ್ದಾರೆ ಎನ್ನುವ ವಿವರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅವರಿಗೆ ನೀಡಿದ್ದಾರೆ.

ಅಕ್ರಮ ಮನೆಗಳ ತೆರವಿಗೆ ವಿವಿಧೆಡೆಯಿಂದ ತೀವ್ರ ವಿರೋಧ

ಅಕ್ರಮ ಮನೆಗಳ ತೆರವಿಗೆ ವಿವಿಧೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪರ್ಯಾಯ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಸೂಚಿಸಿದ್ದ ಹಿನ್ನೆಲೆಯಲ್ಲಿ ಜಿಬಿಎ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಮನೆ ಕಳೆದುಕೊಂಡವರ ಸರ್ವೇ ನಡೆಸಿ ದಾಖಲೆಗಳು, ಮಾಹಿತಿಯನ್ನು ಸಂಗ್ರಹಿಸಿದ್ದರು.

ಒಟ್ಟು 119 ಕುಟುಂಬಗಳನ್ನು ಸರ್ವೇಗೆ ಒಳಪಡಿಸಲಾಗಿದೆ

ಒಟ್ಟು 119 ಕುಟುಂಬಗಳನ್ನು ಸರ್ವೇಗೆ ಒಳಪಡಿಸಲಾಗಿದೆ. ಅಕ್ರಮವಾಗಿ ನಿರ್ಮಿಸಿದ್ದ ಒಟ್ಟು 82 ಮನೆಗಳನ್ನು ಕೆಡವಲಾಗಿದೆ. ಒಟ್ಟು 118 ಕುಟುಂಬಗಳು ಆಧಾರ್ ಕಾರ್ಡ್ ಹೊಂದಿವೆ. 102 ಕುಟುಂಬಗಳು ಮತದಾರರ ಗುರುತಿನ ಚೀಟಿ ಹೊಂದಿವೆ. 77 ಕುಟುಂಬಗಳ ಬಳಿ ರೇಷನ್ ಕಾರ್ಡ್ ಇವೆ. 63 ಜನರು ಆದಾಯ ಪ್ರಮಾಣ ಪತ್ರ ಮತ್ತು 56 ಜನ ಜಾತಿ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ. 37 ಮಂದಿಯ ಕುಟುಂಬಗಳು ಮಾತ್ರ ಬೆಂಗಳೂರಿನ ವಾಸಿಗಳು ಎಂದು ಸರ್ವೇ ನಡೆಸಿದ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಅರ್ಹ ಫಲಾನುಭವಿಗಳ ದಾಖಲೆಗಳನ್ನು ಮತ್ತೊಂದು ಸುತ್ತು ಪರಿಶೀಲಿಸಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ಷರತ್ತುಗಳ ಅನ್ವಯ ಅರ್ಹರಿಗೆ ಗುರುವಾರದ ವೇಳೆಗೆ ಮನೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಕಂದಾಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. 82 ಮನೆಗಳನ್ನು ಕೆಡವಿದ್ದರೂ, 262 ಜನರು ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದರು.