ಕೋಗಿಲು ಕ್ರಾಸ್ ನಿರಾಶ್ರಿತರಲ್ಲಿ ರಾಜ್ಯ ಮೂಲದವರಿಗೆ ಮೊದಲ ಆದ್ಯತೆ ನೀಡುವುದು ಮತ್ತು ಫಕೀರ್ ಕಾಲೋನಿಯ 25ರಿಂದ 30 ಕುಟುಂಬಗಳಿಗೆ ಗುರುವಾರದೊಳಗೆ ಮನೆ ನೀಡಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರು : ಕೋಗಿಲು ಕ್ರಾಸ್ ನಿರಾಶ್ರಿತರಲ್ಲಿ ರಾಜ್ಯ ಮೂಲದವರಿಗೆ ಮೊದಲ ಆದ್ಯತೆ ನೀಡುವುದು ಮತ್ತು ಫಕೀರ್ ಕಾಲೋನಿಯ 25ರಿಂದ 30 ಕುಟುಂಬಗಳಿಗೆ ಗುರುವಾರದೊಳಗೆ ಮನೆ ನೀಡಲು ಸರ್ಕಾರ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಸೋಮವಾರ ಕೋಗಿಲು ಕ್ರಾಸ್ ನಿರಾಶ್ರಿತರಿಗೆ ವಸತಿ ಹಂಚಿಕೆ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ವಸತಿ ಸಚಿವ ಜಮೀರ್ ಅಹಮದ್‌ಖಾನ್ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯದ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ಮೊದಲ ಆದ್ಯತೆ
ಈ ವೇಳೆ, ರಾಜ್ಯದ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೆ, ಫಕೀರ್ ಕಾಲೋನಿಯ ಎಲ್ಲ 35 ಮಂದಿಗೆ ಮನೆ ನೀಡಬೇಕಿದ್ದು, ಗುರುವಾರದೊಳಗೆ 25ರಿಂದ 30 ಕುಟುಂಬಕ್ಕೆ ಮನೆ ನೀಡುವುದು, ನಂತರ ಹಂತಹಂತವಾಗಿ ಉಳಿದ ಅರ್ಹರಿಗೆ ಮನೆ ನೀಡಬೇಕು. ಉಳಿದವರಿಗೆ ಹಂತಹಂತವಾಗಿ ಮನೆ ನೀಡಬೇಕು ಎಂದು ನಿರ್ಧರಿಸಲಾಯಿತು.
ಸರ್ಕಾರಿ ಭೂಮಿ ಒತ್ತುವರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ
ಸಭೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ಅಲೆಮಾರಿಗಳಾದರೆ ಭೂ ಒತ್ತುವರಿ ಮಾಡುವುದಿಲ್ಲ. ಅವರು ಬರುತ್ತಾರೆ, ಹೋಗುತ್ತಾರೆ. ಆದರೆ ಅಕ್ರಮವಾಗಿ ಬೇಕೆಂದೇ ಭೂ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು, ಸರ್ಕಾರಿ ಭೂಮಿಯಲ್ಲಿ ಶೆಡ್ ಹಾಕಿದ ಕೂಡಲೇ ಅವರಿಗೆ ಮನೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರಿ ಭೂಮಿ ಒತ್ತುವರಿಗೆ ನಾವೇ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಎಷ್ಟೋ ಜನ ಸರ್ಕಾರಿ ಮನೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ಈಗ ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ಸರಿಯಲ್ಲ.
ಮನೆ ಕೊಡುವುದಿದ್ದರೂ ಕಾನೂನು ಬದ್ಧವಾಗಿ ನೀಡಬೇಕು ಎಂದರು.ಉತ್ತರ ಪ್ರದೇಶ, ಬಿಹಾರದ ಕುಟುಂಬಗಳು ಅಲ್ಲಿವೆ ಎಂಬ ಮಾಹಿತಿಯಿದೆ. ಅದರ ಬಗ್ಗೆ ತನಿಖೆಯಾಗಬೇಕು. ಅರ್ಹರಿಗೆ ಮಾತ್ರ ಮನೆ ನೀಡಬೇಕು. ಕರ್ನಾಟಕದ ಬೇರೆ ಭಾಗಗಳಿಂದ ಬಂದು ನೆಲೆಸಿದ್ದರೆ ಅವರಿಗೆ ಆದ್ಯತೆ ಮೇರೆಗೆ ಮನೆ ನೀಡಲು ಪರಿಗಣಿಸಬೇಕು ಹಾಗೂ ಕನ್ನಡಿಗರಾಗಿದ್ದು ಕೋಗಿಲು ಲೇಔಟ್‌ನಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿರುವವರಿಗೆ ಮನೆ ನೀಡುವುದು ಸೂಕ್ತ. ಮಾತೃ ಭಾಷೆ ಬೇರೆಯಿದ್ದರೆ, ಅವರ ಮೂಲ ತಾಲೂಕು, ಊರು ಯಾವುದು ಎಂಬುದನ್ನು ಗ್ರಾಮ ಲೆಕ್ಕಿಗ ಮತ್ತು ದಫೇದಾರ್ ಮೂಲಕ ಪರಿಶೀಲಿಸಿದ ನಂತರವೇ ಮನೆ ಕೊಡಬೇಕು ಎಂದು ಹೇಳಿದರು.
ಅಂತಿಮವಾಗಿ ಸಭೆಯಲ್ಲಿ, ಮನೆ ನೀಡುವಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಒಂದು ಪಡಿತರ ಚೀಟಿಗೆ ಒಂದು ಮನೆ ಆಧಾರವನ್ನು ಇಟ್ಟುಕೊಳ್ಳಬೇಕು. ಹೊರ ರಾಜ್ಯದವರನ್ನು ಹುಡುಕುವ ಸಲುವಾಗಿ ಕನ್ನಡಿಗರಿಗೆ ಮನೆ ನೀಡಲು ತಡ ಮಾಡುವುದು ಸರಿಯಲ್ಲ. ಅರ್ಹರಿಗೆ ಮೊದಲ ಹಂತವಾಗಿ ಮನೆ ನೀಡುವ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
