ಸಾರಾಂಶ
ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು : ಮೈಸೂರು ದಸರಾ ಉದ್ಘಾಟನೆ ವಿಷಯ ಇತಿಹಾಸದಲ್ಲಿ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲು ಏರಿದೆ. ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂಗಳು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಾಡಹಬ್ಬ ದಸರಾ ಆಚರಿಸುತ್ತಾರೆ. ಆದರೆ, ಬಾನು ಮುಷ್ತಾಕ್ ಅವರು ಹಿಂದೂ ಪದ್ಧತಿಗಳಿಗೆ ವ್ಯತಿರಿಕ್ತ ನಿಲುವು ಹೊಂದಿದ್ದಾರೆ. ಅವರು ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ, ಸಾರ್ವಜನಿಕರು, ದಸರಾ ಕಾರ್ಯಕ್ರಮ ಜರುಗುವ ಮೈಸೂರು ಅರಮನೆಯ ರಾಜ ವಂಶಸ್ಥರು, ಅನೇಕ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸುವುದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ. ಬದಲಿಗೆ ದುಷ್ಟ ಶಕ್ತಿಗಳ ವಿರುದ್ಧದ ದೈವಿಕ ಶಕ್ತಿಯ ಗೆಲುವಿನ ಪ್ರತೀಕವಾಗಿ ನಾಡದೇವತೆ ಚಾಮುಂಡೇಶ್ವರಿ ದೇವಿ ಪೂಜಿಸುವ ಮೂಲಕ ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಶತಮಾನಗಳಿಂದಲೂ ದಸರಾ ಹಬ್ಬದ ಆಚರಣೆಯನ್ನು ಹಿಂದೂ ಸಮುದಾಯದವರು ಮಾಡಿಕೊಂಡು ಬರುತ್ತಿದ್ದಾರೆ. ನಿರ್ದಿಷ್ಟ ವಿಧಿ ವಿಧಾನಗಳು, ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಾ ಅನೇಕ ತಲೆಮಾರುಗಳಿಂದ ಪದ್ಧತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಬಾನು ಮುಷ್ತಾಕ್ ಅವರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಲಕ್ಷಾಂತರ ಹಿಂದೂಗಳು ನಂಬಿಕೊಂಡು ಬಂದಿರುವ ಸಂಪ್ರದಾಯಗಳು, ಆಚರಣೆಗಳು, ನಂಬಿಕೆಗಳಿಗೆ ವ್ಯತಿರಿಕ್ತವಾಗಿವೆ. ಸಂವಿಧಾನದ 26ನೇ ವಿಧಿಯು ಧಾರ್ಮಿಕ ನಂಬಿಕೆ ಕುರಿತ ಹಕ್ಕುಗಳನ್ನು ರಕ್ಷಿಸುವುದನ್ನು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯಬೇಕು ಎಂದು ಪ್ರತಾಪ್ ಸಿಂಹ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿಯ ವಿಚಾರಣೆ ಮುಂದಿನ ವಾರ ಬರುವ ಸಾಧ್ಯತೆ ಇದೆ.
ಪ್ರತಾಪ್ ವಾದವೇನು?
- ಧಾರ್ಮಿಕ ವಿಧಿಗಳೊಂದಿಗೆ ಹಿಂದುಗಳಿಂದ ದಸರಾ ಆಚರಣೆ
- ಆದರೆ ಬಾನು ನಿಲುವುಗಳು ಹಿಂದು ಪದ್ಧತಿಗಳಿಗೆ ವ್ಯತಿರಿಕ್ತ
- ಹೀಗಾಗಿ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ಬೇಡ
- ಸಂವಿಧಾನದ 26ನೇ ವಿಧಿಯಡಿ ಧಾರ್ಮಿಕ ಭಾವನೆಗೆ ರಕ್ಷಣೆ
- ಅವರು ನಾಡಹಬ್ಬ ಉದ್ಘಾಟಿಸಿದರೆ ಹಿಂದು ಭಾವನೆಗೆ ಧಕ್ಕೆ