ಸಾರಾಂಶ
ಶಾಲಾ ಮಾನ್ಯತೆ ನವೀಕರಣಕ್ಕಿರುವ ಕಠಿಣ ಮಾನದಂಡಗಳು, ಅಧಿಕಾರಿಗಳ ದೌರ್ಜನ್ಯ, ಲಂಚ ಬೇಡಿಕೆಯಿಂದ ಶಾಲೆಗಳನ್ನು ನಡೆಸುವುದು ಕಷ್ಟವಾಗಿದ್ದು, ಈ ಸಮಸ್ಯೆಯನ್ನು ಗಮನಕ್ಕೆ ತಂದರೂ ಸರ್ಕಾರ ಪರಿಹರಿಸದೇ ಇರುವುದನ್ನು ಖಂಡಿಸಿ, ವಿವಿಧ ಖಾಸಗಿ ಶಾಲಾ ಸಂಘಟನೆಗಳು ಆ. 15ರಂದು ಕರಾಳ ದಿನ ಆಚರಣೆಗೆ ತೀರ್ಮಾನಿಸಿವೆ.
ಬೆಂಗಳೂರು : ಶಾಲಾ ಮಾನ್ಯತೆ ನವೀಕರಣಕ್ಕಿರುವ ಕಠಿಣ ಮಾನದಂಡಗಳು, ಅಧಿಕಾರಿಗಳ ದೌರ್ಜನ್ಯ, ಲಂಚ ಬೇಡಿಕೆಯಿಂದ ಶಾಲೆಗಳನ್ನು ನಡೆಸುವುದು ಕಷ್ಟವಾಗಿದ್ದು, ಈ ಸಮಸ್ಯೆಯನ್ನು ಗಮನಕ್ಕೆ ತಂದರೂ ಸರ್ಕಾರ ಪರಿಹರಿಸದೇ ಇರುವುದನ್ನು ಖಂಡಿಸಿ, ವಿವಿಧ ಖಾಸಗಿ ಶಾಲಾ ಸಂಘಟನೆಗಳು ಆ. 15ರಂದು ಕರಾಳ ದಿನ ಆಚರಣೆಗೆ ತೀರ್ಮಾನಿಸಿವೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ಖಾಸಗಿ ಶಾಲಾ ಬೋಧಕ, ಬೋಧಕೇತರ ವರ್ಗಗಳ ಸಮ್ವಯನ ಸಮಿತಿಯ (ಕೆಪಿಎಂಟಿಸಿಸಿ) ಸಂಚಾಲಕ ಡಿ.ಶಶಿಕುಮಾರ್, ಹೊಸ ಶಾಲೆಗಳನ್ನು ಆರಂಭಿಸಲು ಜಾರಿಗೆ ತಂದಿರುವ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಯಂತಹ ಅನೇಕ ನಿಯಮಗಳನ್ನು ಈಗ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಶಾಲೆಗಳಿಗಳಿಗೂ ಸರ್ಕಾರ ಅನ್ವಯಿಸುತ್ತಿದೆ. ಇದರ ವಿರುದ್ಧ ಶಾಲೆಗಳು ಕಾನೂನು ಹೋರಾಟ ನಡೆಸಿದಾಗ ನ್ಯಾಯಾಲಯಗಳು ಸರ್ಕಾರಕ್ಕೆ ಅನೇಕ ನಿರ್ದೇಶನಗಳನ್ನು ನೀಡಿದ್ದರೂ ಸರ್ಕಾರ, ಶಿಕ್ಷಣ ಇಲಾಖೆ ಅದನ್ನೂ ಪಾಲಿಸುತ್ತಿಲ್ಲ. ಮತ್ತೊಂದೆಡೆ ಸರ್ಕಾರದ ನಿಯಮಗಳ ಅನುಷ್ಠಾನದ ಹೆಸರಲ್ಲಿ ಬಿಇಒ, ಡಿಡಿಪಿಐಗಳ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ. ಇದರಿಂದ ರಾಜ್ಯದಲ್ಲಿ ಶಾಸಗಿ ಶಾಲೆಗಳನ್ನು ನಡೆಸಲು ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಹಾಗಾಗಿ ಒಟ್ಟು ಒಂಬತ್ತು ಖಾಸಗಿ ಶಾಲಾ ಸಂಘಟನೆಗಳು ಸೇರಿ ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ‘ಕರಾಳ ಸ್ವಾತಂತ್ರ್ಯ ದಿನ’ವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಅಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಭಿತ್ತಿಪತ್ರ, ಪೋಸ್ಟರ್ ಹಂಚುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಮೇಲಾಧಿಕಾರಿಗಳು, ಶಿಕ್ಷಣ ಮಂತ್ರಿಗಳು ಡಿಡಿಪಿಐ, ಬಿಇಒಗಳ ವರ್ಗಾವಣೆಗೆ 25ರಿಂದ 30 ಲಕ್ಷ ರು. ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವರ್ಗಾವಣೆಗೆ ನೀಡಿದ ಹಣ ಹೊಂದಿಸಲು ಅಧಿಕಾರಿಗಳು ಖಾಸಗಿ ಶಾಲೆಯವರ ಜೀವ ಹಿಂಡುತ್ತಿದ್ದಾರೆ. ಅದರಲ್ಲೂ ಬಜೆಟ್ ಶಾಲೆಗಳ ಮೇಲೆ ಅವರ ದೌರ್ಜನ್ಯ ಮಿತಿ ಮೀರಿದೆ. ಹೀಗೇ ಮುಂದುವರೆದರೆ ಶಾಲೆಗಳ ಬಾಗಿಲು ಹಾಕದೆ ಬೇರೆ ಮಾರ್ಗವಿಲ್ಲ ಎಂದು ಶಾಲಾ ಆಡಳಿತ ಮಂಡಳಿಯವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ಹೋರಾಟ ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಿದೆ. ಕರಾಳ ದಿನ ಆಚರಣೆ ವೇಳೆ ನಮ್ಮ ಮುಂದಿನ ಹೋರಾಟದ ಸ್ವರೂಪದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಸ್ಮಾ, ಮಿಕ್ಸಾ, ಮಾಸ್, ಕುಮ್ಸಾ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಾದ ಸತ್ಯಮೂರ್ತಿ, ಎಂ.ಎ.ಆನಂದ್, ಡಾ. ಅಹಮದ್, ಡಾ.ಸುಪ್ರೀತ್ ಇತರರು ಇದ್ದರು.