ಬ್ರಾಹ್ಮಣರ ಸಂಖ್ಯೆ ಇಳಿಕೆ - ಸಂತಾನ, ಸಂಸ್ಕಾರ ಹೀನತೆ ಅಪಾಯಕಾರಿ : ರಾಘವೇಂದ್ರ ಶ್ರೀ ಆತಂಕ

| Published : Jan 20 2025, 11:36 AM IST

Raghaveshwara swamiji_KP

ಸಾರಾಂಶ

ಸಂತಾನಹೀನತೆ ಮತ್ತು ಸಂಸ್ಕಾರಹೀನತೆ ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಬ್ರಾಹ್ಮಣರು ಸಂತಾನ ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.

ಬೆಂಗಳೂರು : ಸಂತಾನಹೀನತೆ ಮತ್ತು ಸಂಸ್ಕಾರಹೀನತೆ ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಬ್ರಾಹ್ಮಣರು ಸಂತಾನ ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಮ್ಮೇಳನದ ಸುವರ್ಣ ಸಂಭ್ರಮದ ಧರ್ಮ ಸಭೆಯಲ್ಲಿ ಭಾನುವಾರ ಮಾತನಾಡಿದರು.

ಇತ್ತೀಚೆಗೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಿದ್ದ ಸಂತಾನ ಹೆಚ್ಚಳ ಹೇಳಿಕೆಯನ್ನು ಪುನರುಚ್ಛರಿಸಿದ ಶ್ರೀಗಳು, ಬ್ರಾಹ್ಮಣರ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಧ್ವನಿ ಇಲ್ಲದಂತಾಗುತ್ತಿದೆ. ಬ್ರಾಹ್ಮಣ ಸಮುದಾಯದ ಯಾವುದೇ ಉಪ ಪಂಗಡದ ದಂಪತಿ ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದರೆ ಆ ಮಕ್ಕಳ ವಿದ್ಯಾಭ್ಯಾಸ ಸೇರಿ ಸಂಪೂರ್ಣ ವೆಚ್ಚವನ್ನು ಶ್ರೀ ಮಠವೇ ಭರಿಸುತ್ತದೆ ಎಂದು ಭರವಸೆ ನೀಡಿದರು.

ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಬ್ರಾಹ್ಮಣರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಈ ಬಗ್ಗೆ ಇಡೀ ಸಮುದಾಯ ಜಾಗೃತವಾಗಬೇಕು. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಬಂದೊದಗಿದ ಸ್ಥಿತಿ ನಮಗೆ ಬರಬಾರದು. ನೀವು ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಮುಳಬಾಗಿಲಿನ ಶ್ರೀಪಾದರಾಜ ಮಠದ ಸುಜಯನಿಧಿ ತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಶಾರದಾ ಮಠದ ಅಭಿನವ ಶಂಕರಭಾರತೀ ಸ್ವಾಮೀಜಿ, ತುಮಕೂರಿನ ರಾಮಕೃಷ್ಣ ಮಠದ ವೀರೇಶಾನಂದ ಭಾರತೀ ಸ್ವಾಮೀಜಿ, ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತೀ ಸ್ವಾಮೀಜಿ, ನ್ಯಾ.ಕೃಷ್ಣ ಎಸ್‌.ದೀಕ್ಷಿತ್‌, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ, ಉದ್ಯಮಿ ಮೋಹನದಾಸ್‌ ಪೈ, ಮಹಾಸಭೆ ಅಧ್ಯಕ್ಷ ಅಶೋಕ ಹಾರನಹಳ್ಳಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಉಪಸ್ಥಿತರಿದ್ದರು.