ಸಾರಾಂಶ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನು ಪರಿಸರ ಸ್ನೇಹಿ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ 2025-26ನೇ ಸಾಲಿನಲ್ಲಿ 14,750 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನು ಪರಿಸರ ಸ್ನೇಹಿ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ 2025-26ನೇ ಸಾಲಿನಲ್ಲಿ 14,750 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಸಾರಿಗೆ ನಿಗಮಗಳಿಗೆ ಹೆಚ್ಚಿನ ಬಸ್‌ಗಳ ಸೇರ್ಪಡೆ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರಲ್ಲೂ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. 2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್, ಪಿಎಂ ಇ-ಬಸ್ ಸೇವಾ ಅಡಿಯಲ್ಲಿ ಆರ್ಥಿಕ ನೆರವು ಪಡೆದು 14,750 ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳಿಗೆ ಸೇರ್ಪಡೆ ಮಾಡುವುದಾಗಿ ತಿಳಿಸಿದೆ.
ಅದರಲ್ಲಿ ಬಿಎಂಟಿಸಿ ಒಂದಕ್ಕೇ 9 ಸಾವಿರ ಎಲೆಕ್ಟ್ರಿಕ್ ಬಸ್ ಸೇರ್ಪಡೆ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಅದರ ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಜಿಸಿಸಿ ಮಾದರಿಯಲ್ಲಿ 1 ಸಾವಿರ ಡೀಸೆಲ್ ಬಸ್‌ಗಳನ್ನು ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದೂ ಭರವಸೆ ನೀಡಿದೆ.
ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು:
ಕಳೆದ 12 ವರ್ಷಗಳ ಹಿಂದೆ ರೂಪಿಸಲಾಗಿದ್ದ ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಗೆ ಮರುಜೀವ ನೀಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರಂತೆ ಮೆಜೆಸ್ಟಿಕ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿದೆ. ಅದರ ಜತೆಗೆ, ಕೆಆರ್ ಪುರದಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.
ವಾಹನಗಳ ಮೇಲೆ ನಿಗಾಯಿಡಲು ಎಐ ಕ್ಯಾಮರಾ:
ರಾಜ್ಯದಲ್ಲಿ ವಾಹನ ಸಂಚಾರದ ಮೇಲೆ ನಿಗಾವಹಿಸಿ ಸಂಚಾರ ಮತ್ತು ಸಾರಿಗೆ ನಿಯಮ ಉಲ್ಲಂಘಿಸುವವರ ಪತ್ತೆಗಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮರಾ ಅಳವಡಿಸಲು ಉದ್ದೇಶಿಸಲಾಗಿದೆ. ಅದರಂತೆ ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳ 60 ಸ್ಥಳಗಳಲ್ಲಿ 50 ಕೋಟಿ ರು. ವೆಚ್ಚದಲ್ಲಿ ಎಐ ಕ್ಯಾಮರಾ ಅಳವಡಿಸುವುದಾಗಿ ಘೋಷಿಸಲಾಗಿದೆ.
* 2025-26ನೇ ಸಾಲಿಗೆ ‘ಶಕ್ತಿ’ ಯೋಜನೆಗಾಗಿ 5,300 ಕೋಟಿ ರು. ಘೋಷಣೆ.
* ಹೊನ್ನಾವರ, ಚಾಮರಾಜನಗರ, ಚಿತ್ರದುರ್ಗದಲ್ಲಿ ಸ್ವಯಂ ಚಾಲಿತ ಪರೀಕ್ಷಾ ಪಥ ಸ್ಥಾಪನೆಗೆ 12 ಕೋಟಿ ರು.
* 5 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ ದಾಖಲೆಗಳ ಡಿಜಿಟಲೀಕರಣಕ್ಕೆ 25 ಕೋಟಿ ರು.
* ಮೈಸೂರಿನ ಬನ್ನಿಮಂಟಪದಲ್ಲಿ 120 ಕೋಟಿ ರು.ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ.
ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಖಾಸಗಿ ವಲಯಕ್ಕೆ ನೀಡುವಂತಹ ಹುನ್ನಾರ ರಾಜ್ಯ ಬಜೆಟ್‌ನಲ್ಲಿ ಗೋಚರವಾಗಿದೆ. ಜಿಸಿಸಿ ಮಾದರಿ ಹಾಗೂ ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯುವುದರಿಂದ ಖಾಸಗಿಯವರ ಹಿಡಿತ ಉಂಟಾಗಲಿದೆ. ಇದು ಭವಿಷ್ಯದಲ್ಲಿ ಸಾರಿಗೆ ನಿಗಮಗಳು ಸ್ವಂತ ಬಸ್‌ಗಳನ್ನು ಹೊಂದದಂತಾಗಲಿದೆ. ಅದರ ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಮಾಡುವುದಾಗಿ ತಿಳಿಸಲಾಗಿದೆ. ಒಟ್ಟಾರೆ ಸಾರಿಗೆ ಇಲಾಖೆಯ ಯೋಜನೆಗಳೆಲ್ಲವೂ ಖಾಸಗಿ ಸಂಸ್ಥೆಗಳ ಸಹಕಾರದ ಮೇಲೆ ನಿಂತಿದೆ.
- ವಿನಯ್ ಶ್ರೀನಿವಾಸ್, ಬಸ್ ಪ್ರಯಾಣಿಕರ ವೇದಿಕೆ.
ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಜಲಸಾರಿಗೆ
ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ, ರಾಯಚೂರು ಮತ್ತು ಮೈಸೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ಯೋಜನೆಗಳಿಗೆ 600 ಕೋಟಿ ರು. ಸೇರಿದಂತೆ ರಾಜ್ಯದ ಮೂಲಸೌಕರ್ಯ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಲಾಗಿದೆ.
ವಿಜಯಪುರದಲ್ಲಿ 348 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣವನ್ನು 2025-26ನೇ ಸಾಲಿನಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಲಾಗಿದೆ. ಒಟ್ಟು 219 ಕೋಟಿ ರು. ಅಂದಾಜು ವೆಚ್ಚದ ರಾಯಚೂರು ವಿಮಾನ ನಿಲ್ದಾಣಕ್ಕೆ ಈವರೆಗೆ 53 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣದ ಭೂ-ಸ್ವಾಧೀನ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತದೆ.
ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಭೂಸ್ವಾಧೀನಕ್ಕಾಗಿ 319 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರನ್‌ವೇ ಜಾಗದಲ್ಲಿರುವ ವಿದ್ಯುತ್ ಕಂಬಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ರೈಲ್ವೆ ಯೋಜನೆಗಳಿಗೆ 600 ಕೋಟಿ ರು.:
2025-26ನೇ ಸಾಲಿನಲ್ಲಿ ರೈಲ್ವೆ ಯೋಜನೆಗಳಿಗೆ 600 ಕೋಟಿ ರು. ಒದಗಿಸಲಾಗಿದೆ. ರೈಲ್ವೆ ಇಲಾಖೆಯೊಂದಿಗೆ 50:50 ಅನುಪಾತದಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಏಳು ಯೋಜನೆಗಳ ಭೂಸ್ವಾಧೀನದ ಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಒಟ್ಟಾರೆ 16,235 ಕೋಟಿ ರು. ವೆಚ್ಚದ ಈ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ 9,847 ಕೋಟಿ ರು. ವೆಚ್ಚಗೊಳಿಸಲಾಗುತ್ತದೆ. ವಾಹನ ದಟ್ಟಣೆ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ರಸ್ತೆ ಮೇಲ್ಸೇತುವೆ/ಕೆಳಸೇತುವೆ ನಿರ್ಮಿಸಲು, ಅನುಮೋದನೆ ನೀಡಿರುವ ಕಾಮಗಾರಿಗಳ ಅನುಷ್ಠಾನಕ್ಕೆ 50 ಕೋಟಿ ರು. ಒದಗಿಸಲಾಗಿದೆ ಎಂದು ಹೇಳಲಾಗಿದೆ.
ರೈಲ್ವೆ ದ್ವಿಪಥೀಕರಣ ಈ ವರ್ಷ ಪೂರ್ಣ:
ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಗಳಡಿ 70 ಕಿ.ಮೀ ರೈಲ್ವೆ ಮಾರ್ಗಗಳ ದ್ವಿಪಥೀಕರಣಗೊಳಿಸಲು 812 ಕೋಟಿ ರು. ಅಂದಾಜು ಮಾಡಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ 406 ಕೋಟಿ ರು. ಒದಗಿಸಲಾಗುತ್ತಿದೆ. ಈ ಎರಡು ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲೇ ಲೋಕಾರ್ಪಣೆ ಮಾಡಲಾಗುತ್ತದೆ.
ದೇವನಹಳ್ಳಿಯಲ್ಲಿ 407 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಪಾಲಿನ ಅನುದಾನದಲ್ಲಿ 50 ಕೋಟಿ ರು. ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಉಪ ನಗರ ರೈಲು 2 ಟೆಂಡರ್:
15,767 ಕೋಟಿ ರು. ಅಂದಾಜು ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯು 58 ರೈಲ್ವೆ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೆ ಜಾಲವನ್ನು ಹೊಂದಿದೆ. 4 ಕಾರಿಡಾರ್‌ಗಳ ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‌ಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
- ವಿಜಯಪುರ ವಿಮಾನ ನಿಲ್ದಾಣ 2025-26ನೇ ಸಾಲಿನಲ್ಲಿ ಕಾರ್ಯಾರಂಭ ಮಾಡುವ ಗುರಿ.
- 2025-26ನೇ ಸಾಲಿನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲು 600 ಕೋಟಿ ರು.
- ರಾಯಚೂರು ವಿಮಾನ ನಿಲ್ದಾಣಕ್ಕೆ ಈವರೆಗೆ 53 ಕೋಟಿ ರು. ಅನುದಾನ ಬಿಡುಗಡೆ.
- ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆ ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆ.
ಉಪನಗರ ರೈಲಿಗೆ ಆದ್ಯತೆ ಇಲ್ಲ
ಬೆಂಗಳೂರಿನ 1.4 ಕೋಟಿ ಜನರ ಸಂಚಾರಕ್ಕೆ ವೇಗ ನೀಡಿ, ರಸ್ತೆಗಳ ಮೇಲೆ ದಟ್ಟಣೆ, ಒತ್ತಡ ತಪ್ಪಿಸಿ, ಪರಿಸರ ಸಂರಕ್ಷಿಸಿ, ಜನರ ಸಮಯ ತಗ್ಗಿಸುವ ಮಹತ್ವಾಕಾಂಕ್ಷೆಯ ಉಪನಗರ ರೈಲು ಯೋಜನೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕಿತ್ತು. 2 ಮಾರ್ಗಗಳ ಟೆಂಡರ್ ಕರೆಯುವ ವಿಚಾರ ಬಿಟ್ಟರೇ ಬೇರೇನೂ ಇಲ್ಲ. ಈಗಾಗಲೇ ವಿಳಂಬವಾಗಿರುವ ಈ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವ ಯಾವುದೇ ಟೈಮ್‌ಲೈನ್ ಇಲ್ಲ. ಅನುದಾನದ ಬಗ್ಗೆಯು ಸ್ಪಷ್ಟಪಡಿಸಿಲ್ಲ. ಅಗತ್ಯ ಇರುವ ಕಡೆ ವಿಮಾನ ನಿಲ್ದಾಣ, ರೈಲ್ವೆ ದ್ವಿಪಥೀಕರಣ ಯೋಜನೆಗಳು ಸ್ವಾಗತಾರ್ಹವಾಗಿವೆ.
- ರಾಜಕುಮಾರ್ ದುಗಾರ್, ಕಾರ್ಯಕರ್ತ, ಸಮೂಹ ಸಾರಿಗೆ ಯೋಜನೆಗಳ ಜಾರಿ