ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು

| N/A | Published : Aug 23 2025, 11:18 AM IST

Vikas
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಸರ್ಕಾರಕ್ಕೊಂದು ಬಹಿರಂಗ ಪತ್ರ , ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು

 -ವಿಕಾಸ್ ಪುತ್ತೂರು, ಲೇಖಕರು ಮತ್ತು ಬಿಜೆಪಿ ಮುಖಂಡರು.

ಸನ್ಮಾನ್ಯರೇ,

ಅಕ್ಟೋಬರ್‌ 9, 2012ರಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾ*ರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಸಿಬಿಐ, ರಾಜ್ಯದ ಪೊಲೀಸರು ಹಾಗೂ ರಾಜ್ಯ ಗೃಹ ಇಲಾಖೆಯ ಅಪರಾಧ ತನಿಖಾ ದಳವು ಪ್ರತ್ಯೇಕ ತನಿಖೆಗಳನ್ನು ನಡೆಸಿವೆಯಾದರೂ, ಅಪರಾಧವನ್ನು ನಿರೂಪಿಸುವಲ್ಲಿ ವಿಫಲರಾದ ಕಾರಣ ಪ್ರಕರಣವು ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯ ಕಾಣದೆ ಬಿದ್ದುಹೋಗುತ್ತದೆ. ಇದರ ಬೆನ್ನಲ್ಲೇ, ಅದಾಗಲೇ ರೂಪುಗೊಂಡಿದ್ದ ‘ಜಸ್ಟೀಸ್‌ ಫಾರ್‌ ಸೌಜನ್ಯʼ ಹೋರಾಟವೂ ತೀವ್ರ ಸ್ವರೂಪ ಪಡೆದುಕೊಂಡು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಲಾರಂಭಿಸುತ್ತದೆ. ಇಷ್ಟು ಸಾಲದ್ದಕ್ಕೆ ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೌರಕಾರ್ಮಿಕನಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಶ್ರೀ ಕ್ಷೇತ್ರದ ಪರಿಸರದಲ್ಲಿ 2014ರ ಪೂರ್ವದಲ್ಲಿ ನೂರಾರು ಶವಗಳನ್ನು ಹೂತಿದ್ದೆ ಎಂದು ದೂರು ಸಲ್ಲಿಸಿರುವ ‘ಬುರುಡೆʼ ಪ್ರಕರಣ ಹಾಗೂ ಶ್ರೀ ಕ್ಷೇತ್ರದ ಪರಿಸರದಲ್ಲಿ ಸುಜಾತಾ ಭಟ್‌ ಎಂಬಾಕೆಯ ಮಗಳು 2003ರಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿರುವ ‘ಅನನ್ಯ ಭಟ್‌ʼ ಪ್ರಕರಣಗಳು, ಸೌಜನ್ಯಳ ಹತ್ಯೆಯ ಪ್ರಕರಣದೊಂದಿಗೆ ತಳಕುಹಾಕಿಕೊಂಡು ಸಮಾಜದಲ್ಲಿ ಗೊಂದಲ ನಿರ್ಮಿಸಿರುವುದಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆಗೆ ಚ್ಯುತಿ ತಂದು ಧಾರ್ಮಿಕ ಭಾವನೆಗಳಿಗೂ ಘಾಸಿಯುಂಟು ಮಾಡುತ್ತಿದೆ. ಇವೆಲ್ಲವೂ ಒಂದು ವ್ಯವಸ್ಥಿತ ಷಡ್ಯಂತ್ರವೆಂದು ಖುದ್ದು ರಾಜ್ಯದ ಉಪಮುಖ್ಯಮಂತ್ರಿಗಳೇ ಒಪ್ಪಿದ್ದಾರಾದರೂ ಪ್ರಸ್ತುತ ಸಾಮಾಜಿಕ ಬೆಳವಣಿಗೆಗಳನ್ನು ಹಾಗೂ ಸರಕಾರದ ನಡೆಗಳನ್ನು ಗಮನಿಸಿದಾಗ, ಸರಕಾರ ಈ ಷಡ್ಯಂತ್ರದ ಸೂತ್ರಧಾರಿ ಎಂಬಂತೆ ಜನಸಾಮಾನ್ಯರಿಗೆ ತೋರಿರುವುದು ಮಾತ್ರವಲ್ಲ ಅವರಲ್ಲಿ ಹತ್ತು ಹಲವು ಪ್ರಶ್ನೆಗಳನ್ನೂ ಮೂಡಿಸಿದೆ.

ಸೌಜನ್ಯಳಿಗೆ ನ್ಯಾಯ ಸಿಗಲಿದೆಯೇ?

ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸಂತೋಷ್‌ ರಾವ್‌ನನ್ನು ಅಪರಾಧಿ ಎಂದು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾದ ಹಿನ್ನೆಲೆಯಲ್ಲಿ ಆತನನ್ನು ಖುಲಾಸೆಗೊಳಿಸುವಂತೆ ಸೆಷನ್ಸ್ ನ್ಯಾಯಾಲಯವು ಜೂನ್‌ 16, 2023ರಂದು ಆದೇಶಿಸುತ್ತದೆ. ಇದರ ಬೆನ್ನಲ್ಲೇ ಆರೋಪಿಯ ಖುಲಾಸೆಯನ್ನು ಸಿಬಿಐ ಪ್ರಶ್ನಿಸಿತು, ಮಾತ್ರವಲ್ಲ ಸೌಜನ್ಯಳ ತಂದೆ ಚೆನ್ನಪ್ಪ ಗೌಡ ಕೂಡ ಪ್ರಕರಣದ ಮರುತನಿಖೆ ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ಕೈಗೊಂಡ ನ್ಯಾಯಾಲಯವು ತನ್ನ ಆದೇಶ ನೀಡುವ ಮೊದಲು ರಾಜ್ಯ ಸರಕಾರದ ಅಧಿಕೃತ ಪ್ರತಿಕ್ರಿಯೆಯನ್ನೂ ಕೇಳಿತು. ಆದರೆ ನ್ಯಾಯಾಲಯವನ್ನು ಮನವರಿಕೆ ಮಾಡಲು ವಕೀಲರು ವಿಫಲವಾದ್ದರಿಂದ ಮೇಲ್ಮನವಿ ತಿರಸ್ಕೃತಗೊಳ್ಳುತ್ತದೆ. ಹೀಗಾಗುತ್ತಲೇ, ಒಂದು ಜವಾಬ್ದಾರಿಯುತ ಸರಕಾರ, ಪ್ರಕರಣದ ಮರುತನಿಖೆಯನ್ನು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಿತ್ತು ಅಥವಾ ಶಾಸಕಾಂಗದಲ್ಲಿರುವ ಇತರೆ ಅವಕಾಶಗಳನ್ನು ಬಳಸಿ ಸೌಜನ್ಯಳಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿತ್ತು. ಆದರೆ ಸರಕಾರ ಮಾತ್ರ ದಿವ್ಯಮೌನಕ್ಕೆ ಶರಣಾಯಿತು. ಸಾಮಾಜಿಕ ಮುಖಂಡರು ಮಾತ್ರವಲ್ಲ, ಪ್ರತಿಪಕ್ಷದ ಶಾಸಕರು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಹಲವು ಬಾರಿ ಭೇಟಿಯಾಗಿ ಆಗ್ರಹಪಡಿಸಿದರಾದರೂ ಸರಕಾರ ಕಿವಿಕೊಡಲಿಲ್ಲ. ಇಷ್ಟುಮಾತ್ರವಲ್ಲದೆ ತನಿಖೆಯ ಹಾದಿತಪ್ಪಿಸಿದ ಸರಕಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ 2023ರ ನ್ಯಾಯಾಲಯದ ಆದೇಶದಲ್ಲಿ ಸೂಚಿಸಲಾಗಿದ್ದರೂ ಈವರೆಗೂ ಯಾವೊಬ್ಬ ಅಧಿಕಾರಿಯ ವಿಚಾರಣೆಯೂ ನಡೆದಿಲ್ಲ. ಇವೆಲ್ಲವೂ ಸರಕಾರದ ನಿರ್ಲಕ್ಷ್ಯವಲ್ಲ, ಬದಲಿಗೆ ಕುತಂತ್ರ. ವಾಸ್ತವದಲ್ಲಿ, ಸೌಜನ್ಯಳ ಪ್ರಕರಣವನ್ನು ಜೀವಂತವಿಟ್ಟು ಆ ಮೂಲಕ ಸಮಾಜದಲ್ಲಿ ಬಿರುಕು ಮೂಡಿಸಿ, ಧಾರ್ಮಿಕ ಶ್ರದ್ಧೆಗೂ ಘಾಸಿಯುಂಟುಮಾಡಿ, ತಮ್ಮ ಸಿದ್ಧಾಂತವನ್ನು ಬಿತ್ತಬೇಕೆಂಬ ಹುನ್ನಾರವನ್ನು ಎಡಪಂಥೀಯರ ಒಂದು ಕೂಟ ವ್ಯವಸ್ಥಿತವಾಗಿ ನಡೆಸಿದೆ. ಸರಕಾರ ಹಾಗೂ ಕಾಂಗ್ರೆಸ್‌ ನಿರ್ಣಾಯಕ ಹುದ್ದೆಗಳಲ್ಲಿ ನುಸುಳಿರುವ ಆ ಕೂಟದ ಕೆಲ ಸದಸ್ಯರು, ಆ ಮೂಲಕ ಸರಕಾರವನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡು ಸೌಜನ್ಯಳ ಪ್ರಕರಣವನ್ನು ಮರುತನಿಖೆಗೆ ಬಾರದಂತೆ ತಡೆಯಲು ಷಡ್ಯಂತ್ರ ಹೆಣೆದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸೌಜನ್ಯಪರ ಹೋರಾಟಗಾರರ ದಿಕ್ಕನ್ನೂ ಸಂಪೂರ್ಣವಾಗಿ ತಪ್ಪಿಸಿ ತಮ್ಮ ಬಲೆಯಲ್ಲಿ ಸಿಲುಕಿಸಿದೆ. ಪ್ರಕರಣದ ಮರುತನಿಖೆಯಾಗದೆ ಸೌಜನ್ಯಳಿಗೆ ನ್ಯಾಯ ಸಿಗುವುದು ಮರೀಚಿಕೆ. ಹೀಗಿರುವಾಗ ಸರಕಾರದ ಮುಂದಿನ ನಡೆಯೇನು?

ಅನನ್ಯ ಭಟ್, ಬುರುಡೆ ರಹಸ್ಯವೇನು?

ಜುಲೈ 11ರಂದು ನ್ಯಾಯಾಲಯದ ಮುಂದೆ ಪ್ರತ್ಯಕ್ಷನಾದ ಆಗಂತುಕ ವ್ಯಕ್ತಿಯೊರ್ವ ತಾನು ಶವಗಳನ್ನು ಹೂಳಿರುವ ಹೇಳಿಕೆಯನ್ನು ದಾಖಲಿಸುತ್ತಾನೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಆತ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ, ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತಾರೆ. ಏತನ್ಮಧ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌.ಐ.ಟಿ) ರಚಿಸುವಂತೆ ಮಹಿಳಾ ಆಯೋಗ ಹಾಗೂ ಇನ್ನಿತರೆ ಕೆಲ ಸಂಸ್ಥೆಗಳು ಮುಖ್ಯಮಂತ್ರಿಗಳಲ್ಲಿ ಕೇಳಿದ ಹಿನ್ನೆಲೆಯಲ್ಲಿ ಜುಲೈ 18ರಂದು ಅವರು ಮಾತನಾಡುತ್ತಾ ಯಾವುದೇ ಕಾರಣಕ್ಕೂ ಎಸ್‌ಐಟಿ ರಚಿಸುವುದಿಲ್ಲವೆಂದು ಕಡ್ಡಿಮುರಿದಂತೆ ಗುಡುಗಿದ್ದರು. ಗೃಹ ಸಚಿವರೂ ಜುಲೈ 19ರಂದು ಬೆಳಗ್ಗೆ ಮಾತನಾಡುತ್ತಾ ಎಸ್‌ಐಟಿಯನ್ನು ರಚಿಸಲೇಬೇಕೆಂದರೆ ಸ್ಥಳೀಯ ಇಲಾಖೆ ಇರುವುದೇಕೆ ಎಂದು ಖಾರವಾಗಿಯೇ ಪ್ರಶ್ನಿಸಿದ್ದರು. ಆದರೆ ಸಂಜೆಯಾಗುವಷ್ಟರಲ್ಲಿ ಎಸ್‌ಐಟಿ ರಚನೆಯಾಗಿರುವುದರ ಆದೇಶ ಹೊರಬೀಳುತ್ತದೆ! ಏನಿದರ ಮರ್ಮ? ಜುಲೈ 21ರಂದು ಆಗುಂತಕನ ಮಂಪರು ಪರೀಕ್ಷೆ ನಡೆಸುವ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿತ್ತು. ಅಂದು ಆತ ಪರೀಕ್ಷೆಗೆ ಒಪ್ಪಿದ್ದರೂ ಅಥವಾ ನಿರಾಕರಿಸಿದ್ದರೂ ಸತ್ಯಾಂಶ ಹೊರಬೀಳುತ್ತಿತ್ತು. ಆದರೆ ತರಾತುರಿಯಲ್ಲಿ ಎಸ್ಐಟಿ ರಚಿಸಿ ಮಂಪರು ಪರೀಕ್ಷೆಯ ಅವಕಾಶ ಕಸಿದಿರುವುದರ ಹಿಂದೆ ಯಾವ ಕೈ ಕಮಾಂಡ್‌ ಮಾಡಿದೆ? ಇದಿಷ್ಟೇ ಅಲ್ಲದೆ ಆಗುಂತಕನ ಪರ ವಕೀಲರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯಾರನ್ನು ಎಸ್ಐಟಿಯ ಮುಖ್ಯಸ್ಥರನ್ನಾಗಿಸಬೇಕೆಂದು ಆಗ್ರಹಿಸಿದ್ದರೋ ಅವರನ್ನೇ ಸರಕಾರ ಮುಖ್ಯಸ್ಥರನ್ನಾಗಿಸಿದೆ. ಇದು ಯಾವುದರ ಸಂಕೇತ?

ಎಡಪಂಥೀಯ ಸಂಘಟನೆಗಳ ತೀವ್ರ ಒತ್ತಡದ ಕಾರಣಕ್ಕೆ ಎಸ್ಐಟಿ ರಚಿಸಲಾಯಿತು ಎಂಬುದನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮಗಳ ಎದುರು ಒಪ್ಪಿದ್ದರು. ಮಾತ್ರವಲ್ಲ ಆಗುಂತಕ ತೋರಿಸಿದ ಅಷ್ಟೂ ಸ್ಥಳಗಳ ಉತ್ಖನನ ನಡೆದು ಯಾವುದೇ ಸೂಕ್ತ ಕಳೇಬರ ದೊರಕದೇ ಹೋದಾಗ ಆಗಸ್ಟ್‌ ೧೩ರಂದು ಮತ್ತೊಮ್ಮೆ ಮಾಧ್ಯಮದವರ ಮುಂದೆ ಬಂದು, ‘ಅವರುʼ ಹೇಳಿದ ಸ್ಥಳಗಳನ್ನು ನೋಡಿಯಾಗಿದೆ, ಬಹಳ ದೊಡ್ಡದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಅವರುʼ ಅದನ್ನು ಬಿಂಬಿಸಿದರು, ಸಾಕ್ಷಿ ಆಧಾರಗಳು ಇಲ್ಲದೆಯೇ, ಪ್ರಪಂಚದಲ್ಲೆಲ್ಲೂ ನಡೆಯದೆ ಇರುವ ರೀತಿಯಲ್ಲಿ ‘ಅವರುʼ ಅದನ್ನ ವೈಭವೀಕರಿಸಿದರು. ಹೀಗೆ ಅವರು, ಅವರು ಎನ್ನುತ್ತಲೇ ಇದೊಂದು ‘ಅವರುʼ ನಡೆಸಿರುವ ಷಡ್ಯಂತ್ರ ಎಂಬುದನ್ನು ಒಪ್ಪಿದರು. ಹಾಗಾದರೆ ‘ಅವರುʼ ಯಾರು, ಎಡಪಂಥೀಯ ಸಂಘಟನೆಗಳೇ? ಅಥವಾ ತಮ್ಮ ಸರಕಾರದ ಭಾಗವಾಗಿರುವ ಪ್ರಭಾವಿ ಎಡಪಂಥೀಯರೇ? ಎಂಬುದನ್ನು ಸರಕಾರ ಯಾಕೆ ಹೇಳುತ್ತಿಲ್ಲ?

ಇದಿಷ್ಟರ ನಡುವೆ ಆಗುಂತಕನ ಪರ ವಕೀಲರೊಬ್ಬರು ಪ್ರಕರಣದ ತನಿಖೆಯಲ್ಲಿ ಕೇರಳ ಪೊಲೀಸರನ್ನು ತೊಡಗಿಸಿಕೊಳ್ಳುವಂತೆ ಹಾಗೂ ಕೇರಳ ಸರಕಾರ ಮಧ್ಯಪ್ರವೇಶಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಕೇರಳ ವಿಧಾನಸಭೆಯಲ್ಲಿ ನಿರ್ಣಯಿಸಬೇಕೆಂದು ಒತ್ತಾಯಿಸಿದ್ದರು. ರಾಜ್ಯದ ಪೊಲೀಸರ ಹಾಗೂ ನಾಡಘನತೆಗೆ ಈ ಮೂಲಕ ಅಪಚಾರ ಎಸಗಲಾಯಿತಾದರೂ ಸರಕಾರ ತುಟಿ ಬಿಚ್ಚಲಿಲ್ಲ. ಇದಿಷ್ಟೇ ಅಲ್ಲದೆ ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್‌ ಪಕ್ಷದ ನೇತಾರರಾಗಿರುವ ಕೇರಳದ ಸಂಸದ ಸಂತೋಷ್‌ ಕುಮಾರ್‌ ಅವರೂ ಧರ್ಮಸ್ಥಳದ ಕುರಿತು ಪತ್ರವನ್ನು ಬರೆಯುತ್ತಾರೆ. ಕೇರಳದ ಕಮ್ಯುನಿಸ್ಟ್‌ ಸಂಸದ, ಕೇರಳ ಸರಕಾರ, ಕೇರಳ ಪೊಲೀಸ್ ಹೀಗೆ ರಾಜ್ಯಕ್ಕೆ ಸಂಬಂಧಿಸದವರೆಲ್ಲರ ನಂಟು ಆರಂಭವಾಯಿತಾದರೂ ಸರಕಾರ ಮಾತ್ರ ಆ ಬಗ್ಗೆ ಯಾವುದೇ ರೀತಿಯಲ್ಲಿಯು ಪ್ರತಿಕ್ರಿಯಿಸದೆ ಮೌನವಹಿಸಿತ್ತು.

ಕೇರಳ ಕನೆಕ್ಷನ್‌ ಹಿಂದಿನ ಅಸಲಿಯತ್ತೇನು?

ಯಾರದ್ದೋ ಒಂದು ಬುರುಡೆಯೊಂದಿಗೆ ಪ್ರತ್ಯಕ್ಷನಾಗಿದ್ದ ಆಗುಂತಕನ ವಿಚಾರಣೆಯನ್ನೂ ಎಸ್ಐಟಿ ಮಾಡದೆ, ಆ ಬುರುಡೆಯನ್ನು ಎಲ್ಲಿಂದ ಉತ್ಖನನ ಮಾಡಲಾಗಿದೆ ಎಂಬ ವಿವರವನ್ನೂ ಪಡೆಯದೆ ಹಾಗೂ ಆ ಸ್ಥಳದ ಮಹಜರನ್ನೂ ಮಾಡದೆ ಆತ ತೋರಿಸಿದ ಹದಿನೇಳು ಸ್ಥಳಗಳನ್ನು ಮಾತ್ರ ಉತ್ಖನನ ಮಾಡಲು ಮುಂದಾಗಿದ್ದರ ಉದ್ದೇಶ ಏನು? ಇನ್ನು ಆತನನ್ನು ವಶಕ್ಕೆ ಏಕೆ ಪಡೆಯಲಿಲ್ಲವೆಂಬ ಪ್ರಶ್ನೆಗೆ ಆತ ‘ಸಾಕ್ಷಿದೂರುದಾರʼ ಎಂಬ ಹಾರಿಕೆಯ ಉತ್ತರ ಸರಕಾರದಿಂದ ಬಂದಿದೆ. ಹಾಗಾದರೆ ಸಾಕ್ಷಿದಾರುದಾರನಾದವ ತನಿಖೆಯ ದಿಕ್ಕುತಪ್ಪಿಸುತ್ತಿದ್ದರೂ, ಆತ ತೋರಿಸಿದ ಅಷ್ಟೂ ಸ್ಥಳಗಳಲ್ಲಿ ಆತ ಹೇಳಿದ ರೀತಿಯಲ್ಲಿ ಯಾವುದೇ ಪುರಾವೆಗಳು ದೊರೆಯದಿದ್ದರೂ, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವ ಅವಕಾಶವಿದ್ದರೂ ಸರಕಾರ ಈ ಪ್ರಕ್ರಿಯೆ ಮಾಡದೆಯೇ ಆತನ ತಾಳಕ್ಕೆ ತಕ್ಕಂತೆ ಇಂದಿಗೂ ಕುಣಿಯುತ್ತಿರುವುದರ ಮರ್ಮವೇನು? ಆತನ ಮಂಪರು ಪರೀಕ್ಷೆ ನಡೆಸುವಂತೆ ಈವರೆಗೂ ಮುಂದಾಗದಿರುವ ರಹಸ್ಯವಾದರೂ ಏನು?

ಜನರ ಧಾರ್ಮಿಕ ಶ್ರದ್ಧೆಗೆ ಘಾಸಿಯುಂಟು ಮಾಡುವ ಮೂಲಕ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದು ಎಡಪಂಥೀಯರ ಹಳೇ ಕುತಂತ್ರ. ಇದನ್ನು ಅವರು ಹತ್ತಾರು ದಶಕಗಳಿಂದಲೂ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ‌ಈ ಪ್ರಯೋಗ ಶಬರಿಮಲೆ, ತಿರುಪತಿ, ಶನಿಶಿಂಗಾಪುರ, ಈಶ ಪ್ರತಿಷ್ಠಾನ, ಕಂಚಿ ಮಠ ಹೀಗೆ ಹಲವಾರು ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಜರುಗಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ಧರ್ಮಸ್ಥಳದ ಮೇಲೂ ಇಂತಹ ದಾಳಿ ನಡೆಸಲು ಬಹು ಸಮಯದಿಂದ ಕಾಯುತ್ತಿದ್ದ ಎಡಪಂಥೀಯರಿಗೆ ಸೌಜನ್ಯ ಪ್ರಕರಣ ದಾರಿಯಾಯಿತು, ಆದರೆ ಅದ್ಯಾವಾಗ ವಿಫಲವಾಗತೊಡಗಿತೋ ಬುರುಡೆ ತೆಗೆಯಲು ಹೊರಟರು, ಹುಟ್ಟದ ಅನನ್ಯಳನ್ನು ಧರೆಗಿಳಿಸಿ ಮಣ್ಣಾಗಿಸಿಯೂ ಬಿಟ್ಟರು.

ಸತ್ಯಕ್ಕೆ ದೂರವಾಗಿರುವ ಈ ಎರಡೂ ಪ್ರಕರಣಗಳನ್ನು ಸೌಜನ್ಯ ಹತ್ಯೆ ಪ್ರಕರಣದೊಂದಿಗೆ ದುರುದ್ದೇಶಪೂರಿತವಾಗಿ ತಳುಕು ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಅಪಪ್ರಚಾರ ನಡೆಸಲಾಯಿತು. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುವ ಮೊದಲೇ ಷಡ್ಯಂತ್ರಕ್ಕೆ ಪೂರಕವಾಗುವ ಆಖ್ಯಾನಗಳನ್ನು ಸೃಷ್ಟಿಸಲಾಯಿತು. ಲಕ್ಷಾಂತರ ರುಪಾಯಿಗಳನ್ನು ವ್ಯಯಮಾಡಿ ಎಐ ವಿಡಿಯೋಗಳನ್ನು ನಿರ್ಮಿಸಿ ಯೂಟ್ಯೂಬ್‌ನ ಮುಖಾಂತರ ಹರಡಿಸಲಾಯಿತು. ಯೂಟ್ಯೂಬ್‌ನಲ್ಲಿ ಪ್ರಸಾರವಾದ ವಿಡಿಯೋಗಳ ಕೊಂಡಿಗಳನ್ನು ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಂಡು ಕೋಟ್ಯಂತರ ಹಣ ಖರ್ಚು ಮಾಡಿ ‘ಸ್ಪಾನ್ಸರ್‌ʼ ಮಾಡುವ ಮೂಲಕ ಕೋಟಿಗಟ್ಟಲೇ ವೀಕ್ಷಣೆಗಳಾಗುವಂತೆ ಮಾಡಲಾಯಿತು. ಭಾರತ ವಿರೋಧಿ ಹಾಗೂ ಹಿಂದೂ ವಿರೋಧಿ ಮಾನಸಿಕತೆಯ ಮಾಧ್ಯಮಗಳು ಈ ಪ್ರಸಾರಿತ ಸುಳ್ಳುಗಳನ್ನೇ ಆಧಾರವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಮಾನಹರಣ ಮಾಡಿದರು. ಈವರೆಗೂ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಠಿ ನಡೆಸದ ಎಸ್‌ಐಟಿಯನ್ನೂ ಎಳೆತಂದು ತಮ್ಮ ಸುಳ್ಳನ್ನು ಎಸ್‌ಐಟಿಯಿಂದ ಬಂದ ಮಾಹಿತಿ ಎಂಬಂತೆ ಪ್ರಸಾರ ಮಾಡಿದರೂ ಸರಕಾರ ಅಂತವರ ಮೇಲೆ ಈವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಷಡ್ಯಂತ್ರಕ್ಕೆ ಹಣ ಹರಿದು ಬಂದದ್ದು ಎಲ್ಲಿಂದ ಎಂಬ ತನಿಖೆಗೂ ಸರಕಾರ ಮುಂದಾಗಲಿಲ್ಲ. ಇವೆಲ್ಲವನ್ನೂ ನೋಡಿದರೆ, ಸರಕಾರವೇ ಈ ಷಡ್ಯಂತ್ರದ ಭಾಗವಾಗಿರಬಹುದೆಂಬ ಜನಾಭಿಪ್ರಾಯ ಮೂಡಿದೆ. ಇದಕ್ಕೆ ಪೂರಕವಾಗಿ ಎಡವಿಚಾರಗಳನ್ನೇ ಸದಾ ಪ್ರತಿಪಾದಿಸುವ, 2023ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಪ್ರಚಾರಭಿಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಇದೀಗ ರಾಜ್ಯ ಸರಕಾರದ ಮೇಲೆ ಅತೀವ ನಿಯಂತ್ರಣ ಹೊಂದಿರುವ ತಮಿಳುನಾಡಿನ ಕಾಂಗ್ರೆಸ್‌ ಸಂಸದರೊಬ್ಬರ ಪಾತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದೆಡೆ ತೀವ್ರ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ ಮುಖ್ಯಮಂತ್ರಿಗಳ ಸುತ್ತ ತೀವ್ರವಾದಿ ಎಡಪಂಥೀಯರೇ ಕಾಣಸಿಗುತ್ತಾರೆ ಎಂಬ ಆರೋಪವೂ ಇದೆ.

ಇದೆಲ್ಲದರ ನಡುವೆ ಧರ್ಮಸ್ಥಳದ ಘನತೆಯನ್ನು ಈ ಸರಕಾರ ಉಳಿಸಿ ಷಡ್ಯಂತ್ರಕಾರರನ್ನು ಶಿಕ್ಷಿಸಲಿದೆ ಎಂಬುದನ್ನು ಕನ್ನಡಿಗರು ನಂಬುವುದಾದರೂ ಹೇಗೆ?

Read more Articles on