ಸಾರಾಂಶ
ದೆಹಲಿಯಲ್ಲಿ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶೆಲ್ಟರ್ ನಿರ್ಮಾಣ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಬೆಂಗಳೂರು : ದೆಹಲಿಯಲ್ಲಿ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶೆಲ್ಟರ್ ನಿರ್ಮಾಣ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿ ನಾಯಿಗಳಿಗೆ ನಗರದಲ್ಲಿ ಸದ್ಯ ಒಂದೆರಡು ನಿಗಾ ಘಟಕಗಳಿವೆ. ಇದೀಗ ಐದು ನಗರ ಪಾಲಿಕೆ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನಗರ ಪಾಲಿಕೆ ರಚನೆ ಬಳಿಕ ಯೋಜನೆ ರೂಪಿಸಿ ಹೊಸ ನಿಗಾ ಘಟಕ ಮತ್ತು ಶೆಲ್ಟರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬೀದಿ ನಾಯಿಗಳ ಹಸಿವಿನಿಂದ ದಾಳಿ ಮಾಡುತ್ತವೆ. ಆಹಾರ ನೀಡಿದರೆ ನಾಯಿ ದಾಳಿ ತಡೆಗಟ್ಟಬಹುದೆ ಎಂಬ ಕಾರಣಕ್ಕೆ ಆಹಾರ ನೀಡಲು ಟೆಂಡರ್ ಆಹ್ವಾನಿಸಲಾಗಿದೆ, ಟೆಂಡರ್ ಇನ್ನೂ ಅಂತಿಮಗೊಂಡಿಲ್ಲ ಎಂದು ಮಾಹಿತಿ ನೀಡಿದರು.
ಬೀದಿ ನಾಯಿಯಿಂದ ಮೃತಪಟ್ಟ ವೃದ್ಧ ಸೀತಪ್ಪ ಅವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದಾಳಿ ನಡೆಸಿದ ಬೀದಿ ನಾಯಿಗಳನ್ನು ಹಿಡಿಯಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಸ್ತೆ ಗುಂಡಿ ಮುಚ್ಚಲು ಕ್ರಮ
ನಗರದಲ್ಲಿ ಮಳೆ ಬರುತ್ತಿರುವುದರಿಂದ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗುತ್ತಿದೆ. ತ್ವರಿತವಾಗಿ ಗುಂಡಿ ಮುಚ್ಚುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೂಚಿಸಿದ್ದಾರೆ. ನಗರ ಸಂಚಾರಿ ಪೊಲೀಸರು ರಸ್ತೆ ಗುಂಡಿ ಕುರಿತು ಪಟ್ಟಿ ನೀಡಿದ್ದಾರೆ. ಎಲ್ಲವನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ವರ್ಷ ಮರ ಗಣತಿ ಪೂರ್ಣ
ನಗರದಲ್ಲಿ ಮರ ಗಣತಿ ನಡೆಸಲಾಗುತ್ತಿದೆ. ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.