ಭಟ್ಕಳ ಮನೆಯಲ್ಲೇ ಬಾಂಬ್‌ ತಯಾರಿಸಿದ್ದ ವೈದ್ಯ! ಪಾಕ್‌ಗೆ ತೆರಳಿ ಬಾಂಬ್‌ ತಯಾರಿ ತರಬೇತಿ

| Published : Dec 19 2024, 11:48 AM IST

terrorist

ಸಾರಾಂಶ

 ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ದೇಶ ಪ್ರಮುಖ ನಗರಗಳಲ್ಲಿ ಇಂಡಿಯನ್‌ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಭಟ್ಕಳದ ತನ್ನ ಮನೆಯಲ್ಲೇ ಸ್ಫೋಟಕ ವಸ್ತುಗಳನ್ನು ತಯಾರಿಸಿ ಪೂರೈಸಿ ನೂರಾರು ಜನರನ್ನು ಬಲಿ ಪಡೆದಿದ್ದ ಸಂಗತಿಯನ್ನು ಹೋಮಿಯೋಪತಿ ವೈದ್ಯ ಬಹಿರಂಗಪಡಿಸಿದ್ದಾನೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ದೇಶ ಪ್ರಮುಖ ನಗರಗಳಲ್ಲಿ ಇಂಡಿಯನ್‌ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಭಟ್ಕಳದ ತನ್ನ ಮನೆಯಲ್ಲೇ ಸ್ಫೋಟಕ ವಸ್ತುಗಳನ್ನು ತಯಾರಿಸಿ ಪೂರೈಸಿ ನೂರಾರು ಜನರನ್ನು ಬಲಿ ಪಡೆದಿದ್ದ ಸಂಗತಿಯನ್ನು ಹೋಮಿಯೋಪತಿ ವೈದ್ಯ ಬಹಿರಂಗಪಡಿಸಿದ್ದಾನೆ.

2014ರಲ್ಲಿ ಸ್ಫೋಟಕ ವಸ್ತು ಸಂಗ್ರಹಣೆ ಪ್ರಕರಣದಲ್ಲಿ ಭಟ್ಕಳದ ವೈದ್ಯ ಹಾಗೂ ಐಎಂ ಶಂಕಿತ ಉಗ್ರ ಸೈಯದ್‌ ಇಸ್ಮಾಯಿಲ್ ಅಫಾಕ್‌ ನನ್ನು ಸಿಸಿಬಿ ಬಂಧಿಸಿತ್ತು. ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ.

ಈತನ ತಪ್ಪೊಪ್ಪಿಗೆ ಹೇಳಿಕೆ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದ್ದು, ಇದರಲ್ಲಿ ತನ್ನ ಉಗ್ರ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ.

ತಪ್ಪೊಪ್ಪಿಗೆಯಲ್ಲಿ ಹೇಳಿದ್ದೇನು?:

ನಾನು ಬೆಳಗಾವಿಯ ಎ.ಎಂ.ಶೇಖ್‌ ಕಾಲೇಜ್‌ನಲ್ಲಿ ವಿಎಚ್‌ಎಂಎಸ್ (ಬ್ಯಾಚುಲರ್ ಆಫ್ ಹೋಮಿಯೋಪತಿ ಮೆಡಿಸನ್ & ಸರ್ಜರಿ) ಓದಿ ಭಟ್ಕಳದಲ್ಲಿ ಸ್ವಂತ ಕ್ಲಿನಿಕ್ ನಡೆಸಿಕೊಂಡಿದ್ದೆ. ಆಗ ಪಿಎಫ್ಐ ಮತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆ (ಐಎಂ) ಜತೆ ಜಿಹಾದಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. 2013ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದೆ.

2004-08 ವರೆಗೆ ಭಟ್ಕಳದಲ್ಲಿ ಐಎಂನ ರಿಯಾಜ್ ಭಟ್ಕಳ್‌, ಇಕ್ಬಾಲ್ ಭಟ್ಕಳ್‌, ಅಪೀಫ್‌, ಸುಲ್ತಾನ್‌ರನ್ನು ಭೇಟಿಯಾಗಿದ್ದೆ. ಆಗ ಅವರ ಮನೆಯಲ್ಲೇ ನಡೆಯುತ್ತಿದ್ದ ಜಿಹಾದಿ ತರಬೇತಿಗೆ ನಾನು ಹೋಗುತ್ತಿದ್ದೆ. ಅಲ್ಲಿ ಇಸ್ಮಾಯಿಲ್‌ ಅಂಕಲ್‌ ಅಲಿಯಾಸ್ ವೈಟ್ ಅಂಕಲ್ ಸಹ ಬೋಧಕರಿದ್ದರು. ಕುರಾನ್, ಮುಸ್ಲಿಂ ರಾಷ್ಟ್ರಗಳ ವಿದ್ಯಮಾನಗಳ ಕುರಿತು ಚರ್ಚೆಸುತ್ತಿದ್ದರು. ವಿದ್ಯಾರ್ಥಿಗಳನ್ನು ಜಿಹಾದ್ ಚಟುವಟಿಕೆಗೆ ಆರಿಸುತ್ತಿದ್ದರು. ನಾನು ಪ್ರಭಾವಿತನಾಗಿದ್ದೆ.

2005ರಲ್ಲಿ ನಾನು ಪಾಕಿಸ್ತಾನದ ಕರಾಚಿ ಮೂಲದ ಯುವತಿ ಜತೆ ಮದುವೆಯಾದ ನಾಲ್ಕು ವರ್ಷಗಳ ಬಳಿಕ ಪ್ರಥಮ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಅಲ್ಲಿಂದ ದುಬೈಗೆ ತೆರಳಿ ಭಟ್ಕಳದ ಮೂಲ ಅಪೀಫ್‌, ಶಫಿ, ಸುಲ್ತಾನ್, ಫಾರ್, ಜಾಸಿಂ, ಅಬ್ದುಲ್ ವಾಹಿದ್, ಅನ್ವರ್ (ಜಿಹಾದಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಪ್ರಕರಣಗಳು ದಾಖಲಾಗಿದ್ದವು) ಭೇಟಿಯಾದೆ. ದುಬೈನಿಂದ ವಾಪಸಾದ ಬಳಿಕ ಮತ್ತೆ ಶಾರ್ಜಾಗೆ ಹೋಗಿ ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್‌ನನ್ನು ಭೇಟಿಯಾದೆ. ಅಲ್ಲಿ ಭಾರತದಲ್ಲಿ ಬಾಂಬ್ ಸ್ಫೋಟಗೊಳಿಸಿ ಜಿಹಾದ್ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯಿತು.

ನನಗೆ ಸ್ಫೋಟಕ ಸಾಮಗ್ರಿ ಸಂಗ್ರಹ ಹಾಗೂ ಸರಬರಾಜು ಹೊಣೆಯನ್ನು ವಹಿಸಿದರು. ಇದಕ್ಕಾಗಿ ಮೊಬೈಲ್‌, ಇಂಟರ್‌ನೆಟ್‌ಗಳಲ್ಲಿ ಚಾಟಿಂಗ್ ಹಾಗೂ ಹವಾಲ ದಂಧೆ ಬಗ್ಗೆ ಭಟ್ಕಳ್ ಸೋದರರು ತಿಳಿಸಿದರು.

10 ಕೇಜಿ ಅಮೋನಿಯಂ ನೈಟ್ರೇಟ್‌: ನನಗೆ 200 ಜಿಲೆಟಿನ್ ಕಡ್ಡಿಗಳು ಹಾಗೂ ಅಮೋನಿಯಂ ನೈಟ್ರೇಟ್ ಸಂಗ್ರಹಿಸುವಂತೆ ರಿಯಾಜ್ ಸೂಚಿಸಿದ್ದ. ಆಗ ಕುಂದಾಪುರದಲ್ಲಿ ಸ್ನೇಹಿತ ಜೈನುಲ್ಲಾಬುದ್ದೀನ್‌ಗೆ ₹25-30 ಸಾವಿರ ಹಣ ನೀಡಿ 150 ಜಿಲೆಟಿನ್‌ ಕಡ್ಡಿಗಳು ಹಾಗೂ 10 ಕೆ.ಜಿ. ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದೆ. ಇದಕ್ಕೆ ನನಗೆ ₹50 ಸಾವಿರ ಸಿಕ್ಕಿತ್ತು.

ಪುಣೆ ಜರ್ಮನ್ ಸ್ಫೋಟಕ್ಕೂ ನನ್ನದೇ ಬಾಂಬ್: ರಿಯಾಜ್‌ ಸೂಚನೆ ಮೇರೆಗೆ ಸೈಯದ್‌ ಮೂಲಕ 6-7 ಡಿಟೋನೇಟರ್‌ಗಳು ಹಾಗೂ ಅಮೋನಿಯಂ ನೈಟ್ರೇಟನ್ನು ಕಳುಹಿಸಿದೆ. ನನ್ನಿಂದ ತೆಗೆದುಕೊಂಡು ಹೋದ ಈ ಸ್ಫೋಟಕಗಳನ್ನು ಅಫೀಪ್‌, ರಿಯಾಜ್ ಹಾಗೂ ಇಕ್ಬಾಲ್‌ ಎಲ್ಲೆಲ್ಲಿ ಉಪಯೋಗಿಸಿದ್ದಾರೆಂಬುದು ನಿಖರವಾಗಿ ಗೊತ್ತಿಲ್ಲ. ಈ ಸ್ಫೋಟಕಗಳನ್ನು ಕೊಟ್ಟ ಬಳಿಕ ಮಹಾರಾಷ್ಟ್ರದ ಪುಣೆಯ ಜರ್ಮನ್ ಬೇಕರಿ ಮತ್ತು ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸ್ಫೋಟವಾಗಿದ್ದವು.

2011ರಲ್ಲಿ ನನಗೆ ಕರಾಚಿಗೆ ಬರುವಂತೆ ಅಫೀಫ್‌ ಸೂಚಿಸಿದ. ಅದರಂತೆ ನಾನು ಕರಾಚಿಗೆ ಹೋದಾಗ ಬಾಂಬ್‌ಗೆ ಬಳಸುವ ಎಲೆಕ್ಟ್ರಾನಿಕ್‌ ಸರ್ಕೀಟ್‌ಗಳನ್ನು ತಯಾರಿಸುವುದು ಹಾಗೂ ಎಕೆ-47 ಬಳಕೆ ಕುರಿತು ಹೇಳಿಕೊಟ್ಟ. ಕರಾಚಿಯಿಂದ ಮರಳಿದ ನಂತರ ಪಾಕಿಸ್ತಾನದಿಂದ ನನಗೆ ಸರ್ಕೀಟ್‌ ಬೋರ್ಡ್ ನ ಲೇಔಟ್‌ ಸಾಫ್ಟ್ ಕಾಫಿ ಕಳುಹಿಸಿದ್ದ. ಆಗ ಎಲೆಕ್ಟ್ರಾನಿಕ್ ಸರ್ಕೀಟ್‌ ಬೋರ್ಡ್ ತಯಾರಿಕೆಗೆ ಪಿಸಿಬಿ (ಪ್ರಿಂಟೆಡ್ ಸರ್ಕೀಟ್‌ ಬೋರ್ಡ್) ಬೇಕಾಗಿದ್ದರಿಂದ ಸ್ನೇಹಿತ ಅಬ್ದುಲ್ಲಾ ನೆರವು ಕೋರಿದೆ.

ಬೆಂಗಳೂರಿನಲ್ಲಿ ಮಾಡುವುದಾಗಿ ತಿಳಿಸಿದ ಆತನಿಗೆ ಕರಾಚಿಯಿಂದ ಬಂದಿದ್ದ ಪ್ರಿಂಟ್‌ ಔಟ್‌ ಜತೆ ₹10 ಸಾವಿರ ನೀಡಿದೆ. ಕೆಲ ದಿನಗಳಾದ ನಂತರ ನನಗೆ 200 ಪಿಸಿಬಿಗಳನ್ನು ಪಾರ್ಸೆಲ್ ಮೂಲಕ ಆತ ಕಳುಹಿಸಿದ. ಆಗಾಗ್ಗೆ ಬೆಂಗಳೂರಿಗೆ ಬಂದು ಎಸ್‌ಪಿ ರಸ್ತೆಯಲ್ಲಿ ಸರ್ಕೀಟ್‌ ಬೋರ್ಡ್‌ ತಯಾರಿಕೆಗೆ ಅಗತ್ಯವಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿದ್ದೆ. ಇದಕ್ಕೆ ಅಗತ್ಯವಾದ ಟೈಮಟನ್ನು ಭಟ್ಕಳದ ನನ್ನ ಸ್ನೇಹಿತನ ಅಂಗಡಿಯಿಂದ (ಅಲಾರಂ ಕ್ಲಾಕ್‌ನ 5-6 ಟೈಮರ್‌) ಖರೀದಿಸಿದೆ. ನನ್ನ ಮನೆಯಲ್ಲಿ 4-5 ಸರ್ಕೀಟ್‌ ಬೋರ್ಡ್‌ಗಳನ್ನು ಸಿದ್ಧಗೊಳಿಸಿದ್ದೆ. ಇದಾಗಿ ಒಂದೆರಡು ದಿನಗಳಲ್ಲಿ ರಿಯಾಜ್ ಭಟ್ಕಳ್‌ನ ಸೂಚನೆಯಂತೆ 150 ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ಸ್‌ಗಳ ಸರ್ಕೀಟ್‌ ಬೋರ್ಡ್‌ಗಳನ್ನು ಮಂಗಳೂರಿನಲ್ಲಿ ಅಪರಿಚಿತನಿಗೆ ತಲುಪಿಸಿದೆ. ತಿಂಗಳಲ್ಲೇ ಮುಂಬೈನಲ್ಲಿ ಬಾಂಬ್ ಸ್ಫೋಟವಾಗಿದ್ದವು. ಆಗಲೂ ನನಗೆ ₹50 ಸಾವಿರ ಸಂದಾಯವಾಗಿತ್ತು.

ಪುಣೆ ಬ್ಲಾಸ್ಟ್‌ ಕೇಸ್: 2012ರ ಜೂನ್‌ನಲ್ಲಿ ನನಗೆ ರಿಯಾಜ್‌ನಿಂದ 100 ಜಿಲಿಟನ್‌ ಕಡ್ಡಿಗಳು ಹಾಗೂ ಸರ್ಕೀಟ್‌ ಬೋರ್ಡ್‌ ಒಟ್ಟು 100 ಡಿಟೋನೇಟರ್ಸ್‌ಗಳಿಗೆ ಬೇಡಿಕೆ ಬಂತು. ಆಗ ಸಿದ್ದಾಪುರದಲ್ಲಿ 100 ಜಿಲೆಟಿನ್ ಕಡ್ಡಿಗಳನ್ನು ₹20 ಸಾವಿರಕ್ಕೆ ಖರೀದಿಸಿದೆ. ನಂತರ ರಿಯಾಜ್‌ ಸೂಚನೆಯಂತೆ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಗೆ 100 ಜಿಲಿಟಿನ್ ಸ್ಟಿಕ್, ಟೈಮರ್ಸ್‌ ಸೇರಿ 10-12 ಡಿಟೋನೇಟರ್ಸ್ ಗಳನ್ನು ತಲುಪಿಸಿದೆ. ಕೆಲ ದಿನಗಳಲ್ಲಿ ಪುಣೆಯಲ್ಲಿ ಬಾಂಬ್ ಸಿಡಿಯಿತು. 2013ರಲ್ಲಿ ಜನವರಿಯಲ್ಲಿ ರಿಯಾಜ್ ಸೂಚನೆ ಮೇರೆಗೆ ಮತ್ತೆ 100 ಜಿಲೆಟನ್‌ ಸಂಗ್ರಹಿಸಿ ಮಂಗಳೂರಿನಲ್ಲಿ ಮತ್ತೊಬ್ಬನಿಗೆ ಕೊಟ್ಟ ಕೆಲವೇ ದಿನಗಳಲ್ಲಿ ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟವಾಯಿತು.