ಡ್ರಗ್‌ ಕೇಸ್‌ : ನಟಿ ರಾಗಿಣಿ, ಪ್ರಶಾಂತ್ ಮೇಲಿನ ಕೇಸ್‌ ರದ್ದು -ಡ್ರಗ್‌ ಮಾಫಿಯಾ ಜತೆ ಕೈಜೋಡಿಸಿದ ಆರೋಪ

| Published : Jan 16 2025, 11:56 AM IST

Ragini Dwivedi

ಸಾರಾಂಶ

  ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಬೆಂಗಳೂರು : ಡ್ರಗ್ ಮಾಫಿಯಾ ಜೊತೆ ಕೈ ಜೋಡಿಸಿ ಉದ್ಯಮಿ, ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಸಿ ಅಕ್ರಮವಾಗಿ ಹಣ ಗಳಿಕೆ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಂಕ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ನಟಿ ರಾಗಿಣಿ ಮತ್ತು ಪ್ರಶಾಂತ್ ರಂಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಆರೋಪಪಟ್ಟಿಯಲ್ಲಿ ಸಾಕ್ಷ್ಯಾಧಾರ ಮತ್ತು ಇತರೆ ಆರೋಪದ ಹೇಳಿಕೆ ಹೊರತುಪಡಿಸಿದರೆ ಅರ್ಜಿದಾರರು ಪಾರ್ಟಿ ಆಯೋಜಿಸಿರುವ ಬಗ್ಗೆ, ಮಾದಕ ವಸ್ತು ಮಾರಾಟ ಮಾಡಿರುವ ಸಂಬಂಧ ತನಿಖಾಧಿಕಾರಿಗಳು ಯಾವುದೇ ಸಾಕ್ಷ್ಯಧಾರಗಳನ್ನು ಒದಗಿಸಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರೆಯುವುದು ಕಾನೂನಿನ ದುರ್ಬಳಕೆಯಾದಂತಾಗಲಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪಾರ್ಟಿ ಆಯೋಜಿಸಿ ಅಲ್ಲಿಗೆ ಆಗಮಿಸಿದವರಿಗೆ ಮಾದಕ ದ್ರವ್ಯ ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬ ಮಾಹಿತಿ ಆಧಾರದಲ್ಲಿ ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತಿತರರ ಮತ್ತಿತರರ ವಿರುದ್ಧ 2020ರ ಸೆ.4ರಂದು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ 2021ರ ಜೂನ್ 8ರಂದು ಆರೋಪ ಪಟ್ಟಿ ಸಲ್ಲಿಸಿದ್ದರು.