ಪರಂ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ : ಕೈ ನಾಯಕರಿಂದ ಪರಂಗೆ ಬೆಂಬಲ

| N/A | Published : May 23 2025, 08:18 AM IST

Home Minister dr g Parameshwar
ಪರಂ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ : ಕೈ ನಾಯಕರಿಂದ ಪರಂಗೆ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

  ಪರಮೇಶ್ವರ್‌ ಅವರು ನಟಿ ರನ್ಯಾ ರಾವ್‌ ಅವರಿಗೆ ಹಣ ನೀಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ.

  ಬೆಂಗಳೂರು : ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳ ದಾಳಿ ಹಾಗೂ ಪರಮೇಶ್ವರ್‌ ಅವರು ನಟಿ ರನ್ಯಾ ರಾವ್‌ ಅವರಿಗೆ ಹಣ ನೀಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರೇ ಇ.ಡಿ. ದಾಳಿ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ನಮ್ಮ ಬಳಿ ಎಲ್ಲಾ ದಾಖಲೆಗಳೂ ಇವೆ. ಇದೊಂದು ರಾಜಕೀಯ ದಾಳಿ ಮಾತ್ರ. ಇದನ್ನು ನಾನು ಕಾನೂನಾತ್ಮಕವಾಗಿಯೇ ಎದುರಿಸುತ್ತೇನೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಡಾ.ಜಿ. ಪರಮೇಶ್ವರ್‌ ಅವರು ವಿಶ್ವಾಸ ವ್ಯಕ್ತಪಡಿಸಿದರು ಎಂದು ಎನ್ನಲಾಗಿದೆ.

ಈ ವೇಳೆ ಕೆಲ ಸಚಿವರು ಡಿ.ಕೆ.ಶಿವಕುಮಾರ್‌ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಕೈ ನಾಯಕರಿಂದ ಪರಂಗೆ ಬೆಂಬಲ

ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ದಾಳಿ ನಡೆಸಿದ ಬೆನ್ನಲ್ಲೇ ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕರು ಪರಮೇಶ್ವರ್‌ರ ನಿವಾಸಕ್ಕೆ ಭೇಟಿ ನೀಡಿದ್ದು, ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಚಿವರಾದ ಸತೀಶ್‌ ಜಾರಕಿಹೊಳಿ, ದಿನೇಶ್‌ ಗುಂಡೂರಾವ್‌, ಚಲುವರಾಯಸ್ವಾಮಿ, ವಿಧಾನಪರಿಷತ್‌ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್‌, ಶಾಸಕ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಪರಮೇಶ್ವರ್‌ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂಬ ಸಿಎಂರ ಹೇಳಿಕೆಯ ಪರ ನಾನು ನಿಂತಿದ್ದೇನೆ ಎಂದರು.

ಪರಮೇಶ್ವರ್ ಭೇಟಿಯಾದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದೊಂದು ರಾಜಕೀಯ ಪ್ರೇರಿತ ಇ.ಡಿ. ದಾಳಿಯಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಪರ ನಾನು ನಿಂತಿದ್ದೇನೆ. ಈ ದಾಳಿ ಖಂಡಿಸಿ ದೇಶಾದ್ಯಂತ ಹೋರಾಟ ಮಾಡುತ್ತೇವೆ. ಸೋನಿಯಾ ಗಾಂಧಿ ಕೇಸ್‌ನಿಂದ ಹಿಡಿದು ಎಲ್ಲಾ ವಿಚಾರವಾಗಿ ನಿತ್ಯ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ ಎಂದರು.

ಇ.ಡಿ, ದಾಳಿಯ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ದೆಹಲಿಯ ಇ.ಡಿ. ಅಧಿಕಾರಿಗಳು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾಲೇಜುಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಏನೇ ದಾಖಲೆಗಳನ್ನು ಕೇಳಿದರೂ ಕೊಡುವಂತೆ ಸೂಚಿಸಿದ್ದೇನೆ. ಅಧಿಕಾರಿಗಳ ಆದೇಶ ಏನೆಂಬುದು ಗೊತ್ತಿಲ್ಲ. ಹಿಂದಿನ ವರ್ಷದ ಅಕೌಂಟ್ಸ್‌ ಮಾಹಿತಿ ಕೇಳಿದರೂ ಕೊಡುವಂತೆ ಹೇಳಿದ್ದು, ಈ ವರ್ಷದ್ದು ಇನ್ನೂ ಆಡಿಟ್ ಆಗಿಲ್ಲ ಎಂದು ತಿಳಿಸಿದರು.

ಗುರುವಾರವೂ ಇ.ಡಿ. ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದೇವೆ,‌ ಕೊಡುತ್ತೇವೆ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಸಂಸ್ಥೆಯ ಕಾಲೇಜುಗಳ ಮೇಲೆ ಇ.ಡಿ. ದಾಳಿ ವೈಯಕ್ತಿಕ ವಿಚಾರವಲ್ಲ.‌‌ ಸಂಸ್ಥೆ ಎಲ್ಲ ರೀತಿಯ ಸಹಕಾರ ಕೊಡುತ್ತದೆ. ಅಧಿಕಾರಿಗಳು ಮುಂದೆ ಏನು ಪ್ರಶ್ನೆ ಕೇಳುತ್ತಾರೆಯೋ ಅದಕ್ಕೆಲ್ಲ ಸಹಕರಿಸುತ್ತೇವೆ‌. ಇ.ಡಿ. ವರದಿ ಬರುವವರೆಗೂ ಏನೂ ಹೇಳಲು ಹೋಗುವುದಿಲ್ಲ ಎಂದು ಹೇಳಿದರು.

ಪರಂರ ಶಿಕ್ಷಣ ಸಂಸ್ಥೆಗಳ  ಮೇಲೆ ಇ.ಡಿ. ದಾಳಿ ಅಂತ್ಯ 

ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಬುಧವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಶೋಧ ಕಾರ್ಯ ಮುಗಿಸಿ, ದಾಖಲಾತಿಗಳ ಸಮೇತ ತೆರಳಿದ್ದಾರೆ.

ಬುಧವಾರ ಬೆಳಗ್ಗೆ 9.30ರಿಂದ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಿ, ಮಧ್ಯಾಹ್ನ1 ಗಂಟೆವರೆಗೂ ಕಡತ, ದಾಖಲಾತಿಗಳ ಪರಿಶೀಲನೆ ನಡೆಸಿದರು. ಸುಮಾರು 27 ಗಂಟೆಗಳ ಕಾರ್ಯಾಚರಣೆ ವೇಳೆ ಸಂಸ್ಥೆಯ ಆರ್ಥಿಕ ವ್ಯವಹಾರಗಳ ಮಾಹಿತಿ ಕಲೆ ಹಾಕಿ, ಶೋಧ ಕಾರ್ಯ ಮುಕ್ತಾಯಗೊಳಿಸಿದರು. ಬಳಿಕ, ಮಹತ್ವದ ದಾಖಲೆಗಳೊಂದಿಗೆ ಕಾಲೇಜಿನ ಹಿಂಬದಿ ಗೇಟ್‌ ನಿಂದ ನಿರ್ಗಮಿಸಿದರು.

ದಾಳಿ ವೇಳೆ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ, ಹಣದ ವಹಿವಾಟಿನ ಬಗ್ಗೆ ಹಾಗೂ ಮೆಡಿಕಲ್‌ ಸೀಟುಗಳು, ಎಂಜಿನಿಯರಿಂಗ್ ಸೀಟುಗಳ ಬಗ್ಗೆ ಮಾಹಿತಿ ಪಡೆಯಿತು. ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ಟಿ.ಬೇಗೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಲ ತಿಂಗಳ ಹಿಂದೆಯಷ್ಟೆ ಮಂಚಕಲ್ ಕುಪ್ಪೆ ಬಳಿ ಖರೀದಿಸಿದ ಎಚ್ಎಂಎಸ್ಐಟಿ ಕಾಲೇಜಿನಲ್ಲಿ ನಿರಂತರವಾಗಿ ಶೋಧ ಕಾರ್ಯ ನಡೆಯಿತು.

ತಮ್ಮ ಮಗಳ ಮದುವೆ ನಿಮಿತ್ತ ರಜೆಯಲ್ಲಿದ್ದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಚಂದ್ರ ಬಾಬು ಅವರನ್ನು ಗುರುವಾರ ಕರೆಸಿಕೊಂಡ ಅಧಿಕಾರಿಗಳು, ಆರ್ಥಿಕ ವ್ಯವಹಾರದ ಲೆಕ್ಕಪತ್ರಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದರು. ಎರಡೂ ಮೆಡಿಕಲ್ ಕಾಲೇಜಿನ ಆಡಳಿತ ಕಚೇರಿ, ಎಂಜಿನಿಯರಿಂಗ್ ಕಾಲೇಜಿನ ಲೆಕ್ಕಾಧಿಕಾರಿಗಳ ಶಾಖೆ, ಪ್ರಾಂಶುಪಾಲರ ಕಚೇರಿ ಸೇರಿದಂತೆ ವಿವಿಧ ಬ್ಲಾಕ್ ಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿ, ಮಧ್ಯಾಹ್ನ ತೆರಳಿದರು.

ವಿದ್ಯಾರ್ಥಿಗಳಿಗೆ ಐಡಿ ಸಂಕಷ್ಟ:

ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ದಾಳಿ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಕಡ್ಡಾಯವಾಗಿ ಐಡಿ ಕಾರ್ಡ್ ತರಬೇಕಾಗಿದ್ದರಿಂದ ಐಡಿ ಕಾರ್ಡ್ ತರದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದಾಗ ಒಂದಷ್ಟು ಕಾಲ ಗೊಂದಲ ಉಂಟಾಯಿತು.

Read more Articles on