ಶಿಕ್ಷಣ ತಜ್ಞ, ಮಾಜಿ ಎಂಎಲ್ಸಿ ಪಿಇಎಸ್‌ ದೊರೆಸ್ವಾಮಿ ನಿಧನ - ಸಣ್ಣ ಶಾಲೆ ಸ್ಥಾಪಿಸಿ ವಿವಿ ಮಟ್ಟಕ್ಕೇರಿಸಿದ್ದ ಸಾಧಕ

| N/A | Published : Mar 07 2025, 11:11 AM IST

MR Doreswamy
ಶಿಕ್ಷಣ ತಜ್ಞ, ಮಾಜಿ ಎಂಎಲ್ಸಿ ಪಿಇಎಸ್‌ ದೊರೆಸ್ವಾಮಿ ನಿಧನ - ಸಣ್ಣ ಶಾಲೆ ಸ್ಥಾಪಿಸಿ ವಿವಿ ಮಟ್ಟಕ್ಕೇರಿಸಿದ್ದ ಸಾಧಕ
Share this Article
  • FB
  • TW
  • Linkdin
  • Email

ಸಾರಾಂಶ

ಪಿಇಎಸ್‌ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ, ಶಿಕ್ಷಣ ತಜ್ಞ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು ಗುರುವಾರ ನಗರದಲ್ಲಿ ನಿಧನರಾದರು.

 ಬೆಂಗಳೂರು : ಪಿಇಎಸ್‌ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ, ಶಿಕ್ಷಣ ತಜ್ಞ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು ಗುರುವಾರ ನಗರದಲ್ಲಿ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಹಲವು ದಿನಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ದೊರೆಸ್ವಾಮಿ ಅವರು ಗುರುವಾರ ಸಂಜೆ 5.30ರ ಸುಮಾರಿಗೆ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪುತ್ರ ಪ್ರೊ.ಜವಾಹರ್‌, ಪುತ್ರಿ ಡಾ.ಡಿ.ರೂಪಾ, ಸೊಸೆ, ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ:

ದೊರೆಸ್ವಾಮಿ ಅವರು ವಿಧಾನ ಪರಿಷತ್‌ ಸದಸ್ಯರಾಗಿ, ಎರಡು ಭಾರಿ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶಿಕ್ಷಕರಾಗಿ, ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ನಿರಂತರ ಸೇವೆ ಸಲ್ಲಿಸಿದ್ದರು.

ದೂರದೃಷ್ಟಿಯ ಚಿಂತನೆ ಹೊಂದಿದ್ದ ಅವರು ಪಿಇಎಸ್‌ ಶಿಕ್ಷಣ ಸಂಸ್ಥೆಯನ್ನು ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಮಟ್ಟಕ್ಕೆ ಕೊಂಡೊಯ್ದ ಅವರು ಜೊತೆಗೆ ತಮ್ಮಲ್ಲಿದ್ದ ಸಾಮಾಜಿಕ ಕಳಕಳಿಯಿಂದಾಗಿ ಪ್ರತಿ ವರ್ಷ ತಮ್ಮ ವಿವಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೋಟ್ಯಂತರ ರು. ವಿದ್ಯಾರ್ಥಿ ವೇತನ ನೀಡುತ್ತಿದ್ದರು. ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಅವರು, ತಮ್ಮ ಸಂಸ್ಥೆಯಿಂದ ಬೆಂಗಳೂರಿನ ವಿವಿಧ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದರು. ರಾಜ್ಯ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿದ್ದಾಗ ಹಲವು ಶಾಸಕರು, ಸಚಿವರು, ಸರ್ಕಾರಿ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಒಂದಷ್ಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಪ್ರಮುಖ ಪಾತ್ರ ವಹಿಸಿದ್ದರು.

ಗಣ್ಯರ ಸಂತಾಪ, ಅಂತಿಮ ನಮನ:

ದೊರೆಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೇರಿದಂತೆ ವಿವಿಧ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಚಲುವರಾಯ ಸ್ವಾಮಿ, ಡಾ.ಎಂ.ಸಿ.ಸುಧಾಕರ್‌, ಶಾಸಕ ಕೃಷ್ಣಪ್ಪ ಮತ್ತಿತರ ಗಣ್ಯರು ಗುರುವಾರ ರಾತ್ರಿ ಮೃತರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮೃತರ ಪುತ್ರ ಪ್ರೊ.ಜವಾಹರ್‌ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ದೊರೆಸ್ವಾಮಿ ಅವರ ನಿಧನ ತಿಳಿಯುತ್ತಿದ್ದಂತೆ ಪಿಇಎಸ್‌ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ

ಪೊಲೀಸ್‌ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರ ನಿಧನಕ್ಕೆ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್‌ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿದೆ. ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಇರುವ ಮೃತರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶುಕ್ರವಾರ ಮಧ್ಯಾಹ್ನದವರೆಗೂ ಅವಕಾಶ ಮಾಡಲಾಗಿದೆ. ನಂತರ ಸಂಜೆ 4.30ಕ್ಕೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.