ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌: 8 ಮಂದಿ ಸೆರೆ - ಖಾಸಗಿ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ದಂಧೆ

| Published : Dec 03 2024, 10:48 AM IST

Telangana Inter supplementary exams timetable
ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌: 8 ಮಂದಿ ಸೆರೆ - ಖಾಸಗಿ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ದಂಧೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ದಂಧೆ ಆರೋಪ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಗುತ್ತಿಗೆ ನೌಕರ ಸೇರಿದ ಎಂಟು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟ್‌ ಬ್ಲಾಕಿಂಗ್‌ ದಂಧೆ ಆರೋಪ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಗುತ್ತಿಗೆ ನೌಕರ ಸೇರಿದ ಎಂಟು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಕೆಇಎ ಹೊರಗುತ್ತಿಗೆ ನೌಕರ, ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ನೌಕರರು ಹಾಗೂ ಮಧ್ಯವರ್ತಿಗಳು ಸೇರಿದ್ದಾರೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು 10 ದಿನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಜೆ.ಗದ್ಯಾಲ್‌ ಈ ಸೀಟ್ ಬ್ಲಾಕಿಂಗ್‌ ದಂಧೆ ಸಂಬಂಧ ನ.13ರಂದು ದೂರು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್‌ ಕಾಲೇಜುಗಳಾದ ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ನಗರದ ಹೊರವಲಯದ ಅಕ್ಕುಪೇಟೆ ವಿಲೇಜ್‌ನ ಆಕಾಶ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜು, ಬೆಳ್ಳಂದೂರಿನ ನ್ಯೂ ಹಾರಿಜಾನ್‌ ಎಂಜಿನಿಯರಿಂಗ್‌ ಕಾಲೇಜು ಹಾಗೂ ಇತರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಸೀಟ್‌ ಬ್ಲಾಕಿಂಗ್ ದಂಧೆ: ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆ ಸಂಬಂಧ ಒಂದನೇ, ಎರಡನೇ ಮತ್ತು ಎರಡನೇ ಮುಂದುವರಿದ ಸುತ್ತಿನ ಕೌನ್ಸೆಲಿಂಗ್‌ ಬಳಿಕ ಉಳಿಕೆಯಾಗುವ ಸರ್ಕಾರಿ ಕೋಟಾದ ಸೀಟುಗಳನ್ನು ಕಾಲೇಜುಗಳಿಗೆ ಹಸ್ತಾಂತರಿಸಲಾಗುತ್ತದೆ. ಈ ಬಾರಿ ಎರಡನೇ ಮುಂದುವರೆದ ಸುತ್ತಿನಲ್ಲಿ ಸರ್ಕಾರಿ ಕೋಟಾದಡಿ 2,625 ಮಂದಿ ಸೀಟು ಪಡೆದು ಬಳಿಕ ಕಾಲೇಜಿಗೆ ಪ್ರವೇಶಾತಿ ಪಡೆದಿರಲಿಲ್ಲ.

ಕಾಲೇಜಿಗೆ ಸೇರ್ಪಡೆಯಾಗದಿರುವ ಬಗ್ಗೆ ಕಾರಣ ಕೇಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದ ನೋಟಿಸ್‌ಗೆ ವಿದ್ಯಾರ್ಥಿಗಳು ಸಮಂಜಸ ಉತ್ತರ ನೀಡಿಲ್ಲ. ಅಂದರೆ, ಕೆಲ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಸರ್ಕಾರಿ ಕೋಟಾದ ಸೀಟು ಅಗತ್ಯವಿಲ್ಲದ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಉದ್ದೇಶಪೂರ್ವಕವಾಗಿ ಮುಂದಿನ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾ ಸೀಟುಗಳು ಸಿಗದಂತೆ ವಂಚಿಸಿವೆ.

ಈ ಮೂಲಕ ಉಳಿಕೆ ಸರ್ಕಾರಿ ಕೋಟಾದ ಸೀಟುಗಳನ್ನು ಆಡಳಿತ ಮಂಡಳಿ ಸೀಟುಗಳಾಗಿ ಪರಿವರ್ತಿಸಿಕೊಂಡು ಬಳಿಕ ಹೆಚ್ಚಿನ ಶುಲ್ಕ ಪಡೆದು ಕಡಿಮೆ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ನೀಡುತ್ತಿವೆ. ಈ ಮೂಲಕ ಆರ್ಥಿಕ ಲಾಭ ಮಾಡಿಕೊಳ್ಳುತ್ತಿವೆ ಎಂದು ಸಾರ್ವಜನಿಕರು ಪರೀಕ್ಷಾ ಪ್ರಾಧಿಕಾರಕ್ಕೆ ಮೌಖಿಕವಾಗಿ ದೂರು ನೀಡಿದ್ದಾರೆ.

ಲಾಗಿನ್‌ ಪಡೆದು ಕೋರ್ಸ್‌ ಆಯ್ಕೆ

ಕೆಲ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನವರು, ಮಧ್ಯವರ್ತಿಗಳು ಹಾಗೂ ಇತರರು ಸರ್ಕಾರಿ ಕೋಟಾ ಸೀಟು ಅಗತ್ಯ ಇಲ್ಲದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರ ಹೆಸರಿನ ಲಾಗಿನ್‌ ಪಾಸ್‌ ವರ್ಡ್‌, ಸೀಕ್ರೆಟ್‌ ಕೀ ಪಡೆದು ಕೋರ್ಸ್‌ ಆಯ್ಕೆ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿತ್ತು.