ಸಾರಾಂಶ
ನಗರದ ರಸ್ತೆ ಗುಂಡಿಗಳ ಬಗ್ಗೆ ನಮ್ಮ ಮನೆಯವರು, ಸ್ನೇಹಿತರು ಸೇರಿ ಎಲ್ಲರೂ ಬೈಯುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆ : ನಗರದ ರಸ್ತೆ ಗುಂಡಿಗಳ ಬಗ್ಗೆ ನಮ್ಮ ಮನೆಯವರು, ಸ್ನೇಹಿತರು ಸೇರಿ ಎಲ್ಲರೂ ಬೈಯುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ನಡೆದ ವಿಶೇಷ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ನಗರದ ರಸ್ತೆ ಗುಂಡಿಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿದರು.
ನಗರದ ರಸ್ತೆಗಳ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಗುರುತಿಸಲಾಗಿರುವ 10 ಸಾವಿರ ರಸ್ತೆ ಗುಂಡಿಗಳ ಪೈಕಿ 5,377 ಗುಂಡಿ ಮುಚ್ಚಲಾಗಿದೆ. ಎಷ್ಟೇ ಗುಂಡಿ ಮುಚ್ಚಿದರೂ ಅದು ತಾತ್ಕಾಲಿಕ ಪರಿಹಾರವಷ್ಟೇ. ಹೀಗಾಗಿ ಹಂತ ಹಂತವಾಗಿ ನಗರದ ರಸ್ತೆಗಳಿಗೆ ವೈಟ್ ಟಾಪಿಂಗ್, ಬ್ಲಾಕ್ ಟಾಪಿಂಗ್ ಸೇರಿ ಬಹುಕಾಲ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.