ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರದಿಂದ ಮುಖ್ಯ ಪರೀಕ್ಷೆಗಳು ನಡೆಯಲಿದ್ದು, ಸುಮಾರು 6,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಬೆಂಗಳೂರು : ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರದಿಂದ ಮುಖ್ಯ ಪರೀಕ್ಷೆಗಳು ನಡೆಯಲಿದ್ದು, ಸುಮಾರು 6,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಬೆಂಗಳೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ. ಕಡಿಮೆ ವಿದ್ಯಾರ್ಥಿಗಳು ಇರುವ ಕಾರಣ ಎರಡೇ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಶನಿವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಅರ್ಹತಾದಾಯಕ ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳ ಪರೀಕ್ಷೆ ನಡೆಯಲಿವೆ. ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯನ್ನು ತಪಾಸಣೆಗೆ ಒಳಪಡಿಸಿ ಒಳಗೆ ಬಿಡಲಾಗುತ್ತದೆ. ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಸರಳವಾದ ವಸ್ತ್ರಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ.

ಪರೀಕ್ಷೆ ಹಿಂದಿನ ದಿನವೂ ಅರ್ಜಿ ಸ್ವೀಕಾರ!:

ಹೈಕೋರ್ಟ್ ಆದೇಶದ ಮೇಲೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದುಕೊಂಡು ಕೆಪಿಎಸ್‌ಸಿ ಕಚೇರಿಗೆ ಅರ್ಜಿ ನೀಡಲು ಮತ್ತು ಹಾಲ್‌ಟಿಕೆಟ್ ಪಡೆದುಕೊಳ್ಳಲು ಬಂದಿದ್ದ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಮಳೆಯಲ್ಲಿ ಪರದಾಡಿದರು.

ಕೋರ್ಟ್‌ನಿಂದ ಅನುಮತಿ ಪಡೆದಿರುವ 185 ಅಭ್ಯರ್ಥಿಗಳಿಗೆ ಮೇ 2ರ ಮಧ್ಯಾಹ್ನ 3 ಗಂಟೆವರೆಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದ ಕೆಪಿಎಸ್‌ಸಿ, ಬಳಿಕ ಹಾಲ್‌ ಟಿಕೆಟ್ ವಿತರಣೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ಅನೇಕ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆದುಕೊಳ್ಳಲು ಕೆಪಿಎಸ್‌ಸಿ ಕಚೇರಿಗೆ ತೆರಳಿದ್ದರು.

ಅದರ ಜೊತೆಗೆ ಕೆಲವು ವಿದ್ಯಾರ್ಥಿಗಳಿಗೆ ಶುಕ್ರವಾರವೂ ಕೋರ್ಟ್ ಅನುಮತಿ ದೊರೆತ ಕಾರಣ ಅವರು ಕೂಡ ಅರ್ಜಿ ಸಲ್ಲಿಸಿ ಹಾಲ್‌ ಟಿಕೆಟ್ ಪಡೆಯಲು ಬಂದಿದ್ದರು. ತಡರಾತ್ರಿವರೆಗೂ ಕೆಪಿಎಸ್‌ಸಿ ಕಚೇರಿಯಲ್ಲಿ ಅಭ್ಯರ್ಥಿಗಳು ಕಾದು ನಿಂತಿದ್ದರು.

ತೀವ್ರ ಅಸಮಾಧಾನ: ಕೆಎಎಸ್ ನೇಮಕಾತಿ ಮುಖ್ಯ ಪರೀಕ್ಷೆಯ ಹಿಂದಿನ ದಿನ ಅಭ್ಯರ್ಥಿಗಳು ಮನೆಯಲ್ಲಿ ಕುಳಿತುಕೊಂಡು ಓದಬೇಕಾಗಿತ್ತು. ಆದರೆ, ಕೆಪಿಎಸ್‌ಸಿಯ ಬೇಜವಾಬ್ದಾರಿಯಿಂದ ಹಾಲ್‌ ಟಿಕೆಟ್‌ ಪಡೆದುಕೊಳ್ಳಲು ಹಿಂದಿನ ದಿನವೂ ಅಲೆದಾಡುವ ದುಸ್ಥಿತಿ ಬಂದಿದೆ. ಪರೀಕ್ಷೆ ಮುಂದೂಡುವಂತೆ ಕೆಪಿಎಸ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಅವರು ನಿಗದಿಯಂತೆ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.