ಸಾರಾಂಶ
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪ
ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ಲೋಕಾಯುಕ್ತ ಪೊಲೀಸರು ಜೂ.2ರಂದು ಬಂಧಿಸಿರುವ ಮಾಜಿ ಹೆಡ್‌ಕಾನ್ಸ್‌ಟೇಬಲ್ ನಿಂಗಪ್ಪನ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಆರೋಪಿ ನಿಂಗಪ್ಪನಿಂದ ಜಪ್ತಿ ಮಾಡಲಾದ ಡೈರಿಯಲ್ಲಿ ಅಬಕಾರಿ, ಬಿಬಿಎಂಪಿ, ಬಿಡಿಎ, ಆರ್‌ಟಿಒ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸುಲಿಗೆ ಮಾಡಿರುವ ಹಣದ ಮಾಹಿತಿ ಹಾಗೂ ಆ ಹಣವನ್ನು ಯಾವ ಅಧಿಕಾರಿಗೆ ಆರೋಪಿ ಎಷ್ಟು ಹಂಚಿಕೆ ಮಾಡಿದ್ದಾನೆ ಇತ್ಯಾದಿ ಮಾಹಿತಿಗಳು ಪತ್ತೆಯಾಗಿವೆ. ಹೀಗಾಗಿ ಆರೋಪಿಗೆ ಹಣ ನೀಡಿದ್ದ ಅಧಿಕಾರಿಗಳು ಹಾಗೂ ಆರೋಪಿಯಿಂದ ಹಣ ಪಡೆದ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಈ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶೀಘ್ರದಲ್ಲೇ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್, ಕ್ರಿಪ್ಟೋದಲ್ಲಿ ಹೂಡಿಕೆ:
ಆರೋಪಿ ನಿಂಗಪ್ಪ ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ವಿವಿಧ ಇಲಾಖೆಗಳ 50ಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಪ್ರತಿ ತಿಂಗಳು ಲಕ್ಷಾಂತರ ರು. ಸುಲಿಗೆ ಮಾಡುತ್ತಿದ್ದ. ಸುಲಿಗೆ ಹಣವನ್ನು ಎಸ್ಪಿಮಟ್ಟದ ಅಧಿಕಾರಿ ಸೇರಿ ಕೆಲ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತಿದ್ದ. ಆ ಅಧಿಕಾರಿಗಳು ಈ ಹಣವನ್ನು ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ, ಬೇನಾಮಿ ಆಸ್ತಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ನಿಂಗಪ್ಪ ವಿಚಾರಣೆ ವೇಳೆ ಆ ಅಧಿಕಾರಿಗಳ ಹೂಡಿಕೆ ಬಗ್ಗೆಯೂ ಬಾಯ್ಬಿಟ್ಟಿದ್ದಾನೆಂದು ಹೇಳಲಾಗಿದೆ.
ಆರೋಪಿಯ ಬೆದರಿಕೆಗೆ ಹೆದರಿ ಹಣ ನೀಡಿರುವ ಸರ್ಕಾರಿ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ಆತ ವಸೂಲಿ ಮಾಡಿದ್ದ ಹಣ ಯಾರಿಗೆ ಹಂಚಿದ್ದ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಸೈಬರ್ ತಜ್ಞರ ನೆರವು:
ಆರೋಪಿಯಿಂದ ಸುಲಿಗೆ ಹಣ ಪಡೆದಿರುವ ಎಸ್ಪಿಮಟ್ಟದ ಅಧಿಕಾರಿ 4 ಕ್ರಿಪ್ಟೋ ವ್ಯಾಲೆಟ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಸೈಬರ್ ತಜ್ಞರ ನೆರವು ಪಡೆಯಲು ತೀರ್ಮಾನಿಸಿದ್ದಾರೆ. ಈ ಕ್ರಿಪ್ಟೋ ಕರೆನ್ಸಿ ಹಾಗೂ ಬಿಟ್ ಕಾಯಿನ್ ವ್ಯವಹಾರದಲ್ಲಿ ತೊಡಗಿರುವ 20ಕ್ಕೂ ಅಧಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗೆ 14 ದಿನ ನ್ಯಾಯಾಂಗ ಬಂಧನ
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಿಂಗಪ್ಪನನ್ನು ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಜೂ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಯಾರು ಈ ನಿಂಗಪ್ಪ?
ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ಆಗಿದ್ದ ಚಿತ್ರದುರ್ಗ ಮೂಲದ ನಿಂಗಪ್ಪ ಅಲಿಯಾಸ್ ಸಾವಂತ್(46)ನನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ 5 ವರ್ಷಗಳ ಹಿಂದೆ ವಜಾಗೊಳಿಸಲಾಗಿತ್ತು. ಬಳಿಕ ಆತ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಸುಲಿಗೆಗೆ ಇಳಿದಿದ್ದ. ಈತನ ವಿರುದ್ಧ ರಾಜ್ಯದ ವಿವಿಧೆಡೆ ದೂರುಗಳು ದಾಖಲಾಗಿವೆ.