ಒಂದೂವರೆ ತಿಂಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನಕಲಿ ಔಷಧ ಮಾರಾಟ ಜಾಲದ ಪ್ರಮುಖ ಆರೋಪಿ ಪ್ರಶಾಂತ್ ಸೋಮವಾರ ರಾಜ್ಯಕ್ಕೆ ಮರಳುತ್ತಿದ್ದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.

ಬೆಂಗಳೂರು : ಒಂದೂವರೆ ತಿಂಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನಕಲಿ ಔಷಧ ಮಾರಾಟ ಜಾಲದ ಪ್ರಮುಖ ಆರೋಪಿ ಪ್ರಶಾಂತ್ ಸೋಮವಾರ ರಾಜ್ಯಕ್ಕೆ ಮರಳುತ್ತಿದ್ದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.

ಅಜರ್‌ಬೈಜಾನ್ ದೇಶದಿಂದ ನಸುಕಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಶಾಂತ್‌ನನ್ನು ಎಸ್‌ಐಟಿ ಮುಖ್ಯಸ್ಥ ಹಾಗೂ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ಉಸ್ತುವಾರಿಯಲ್ಲಿ ಡಿವೈಎಸ್ಪಿ ಅಂಜನ್‌ ಕುಮಾರ್ ತಂಡ ಬಂಧಿಸಿದೆ. ಬಳಿಕ ಮಾಗಡಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ ಎಸ್‌ಐಟಿ, ಹೆಚ್ಚಿನ ತನಿಖೆಗೆ 10 ದಿನಗಳು ವಶಕ್ಕೆ ಪಡೆದಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ನಕಲಿ ಔಷಧ ಮಾರಾಟ ಜಾಲ ಬೆಳಕಿಗೆ ಬಂದ ನಂತರ ಪ್ರಶಾಂತ್ ತಲೆಮರೆಸಿಕೊಂಡಿದ್ದ. ಅಜರ್‌ಬೈಜಾನ್‌ ದೇಶದಲ್ಲಿ ಆತ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್‌ಐಟಿ ಅಧಿಕಾರಿಗಳು, ಆರೋಪಿ ಸೆರೆಗೆ ನಡೆಸಿದ ತಂತ್ರಗಾರಿಕೆ ಯಶಸ್ಸು ಕಂಡಿದೆ.

ಔಷಧ ಖರೀದಿಗೆ ಅಜರ್‌ಬೈಜಾನ್‌ಗೆ:

ಬೆಂಗಳೂರು ಹೊರವಲಯದ ತಾವರೆಕೆರೆ ಸಮೀಪ ಪ್ರಶಾಂತ್‌ಗೆ ಸೇರಿದ ಔಷಧ ಮಾರಾಟ ಏಜೆನ್ಸಿಯ ಘಟಕದ ಮೇಲೆ ದಾಳಿ ನಡೆದಿತ್ತು. ಈ ದಾಳಿ ನಡೆಯುವ ಎರಡು ದಿನಗಳ ಮುನ್ನ ಔಷಧ ಖರೀದಿಗೆ ಅಜರ್‌ ಬೈಜಾನ್ ದೇಶಕ್ಕೆ ಪ್ರಶಾಂತ್ ಪ್ರಯಾಣಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಔಷಧ ಸಾಗಾಣಿಕೆ ಮಾಡುವಾಗ ಆ ದೇಶದ ವಿಮಾನ ನಿಲ್ದಾಣದಲ್ಲಿ ಆತ ಕಸ್ಟಮ್ಸ್ ಬಲೆಗೆ ಬಿದ್ದಿದ್ದ. ಅಷ್ಟರಲ್ಲಿ ತನ್ನ ಏಜೆನ್ಸಿ ಮೇಲೆ ದಾಳಿ ನಡೆದಿರುವುದನ್ನು ತಿಳಿದು ಪ್ರಶಾಂತ್ ಏನೇನೋ ಕಾರಣ ಕೊಟ್ಟು ವಿದೇಶದಲ್ಲೇ ನೆಲೆಗೊಳ್ಳಲು ಯತ್ನಿಸಿದ್ದ. ಅಷ್ಟರಲ್ಲಿ ಅಜರ್ ಬೈಜಾನ್‌ನಲ್ಲಿ ಆತನ ಇರುವಿಕೆ ಬಗ್ಗೆ ಎಸ್‌ಐಟಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಒಂದೂವರೆ ತಿಂಗಳ ಸತತ ಪ್ರಯತ್ನದ ಮೂಲಕ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ ಎಂದು ತಿಳಿದು ಬಂದಿದೆ.

ಹೇಗಿತ್ತು ಎಸ್‌ಐಟಿ ಆಪರೇಷನ್‌?:

ಅಜರ್ ಬೈಜಾನ್‌ ದೇಶದಲ್ಲಿ ಸರಕು ಸಾಗಾಣಿಕೆ ಹಾಗೂ ವೀಸಾ ಅವಧಿ ಮುಗಿದ ಕಾರಣ ಪ್ರಶಾಂತ್ ಮೇಲೆ ಎಫ್‌ಐಆರ್ ದಾಖಲಾಗಿ ಅಲ್ಲಿನ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇತ್ತು. ಹಾಗೊಂದು ವೇಳೆ ಎಫ್‌ಐರ್ ದಾಖಲಾಗಿದ್ದರೆ ಆತ ಗಡೀಪಾರು ಆಗುವವರೆಗೆ ಎಸ್‌ಐಟಿ ಕಾಯಬೇಕಿತ್ತು. ಹೀಗಾಗಿ ತಮ್ಮ ತನಿಖೆ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿದ ಎಸ್‌ಐಟಿ ಮುಖ್ಯಸ್ಥ ವಂಶಿಕೃಷ್ಣ ಅವರು, ಅಜರ್ ಬೈಜಾನ್‌ ದೇಶದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ನಕಲಿ ಔಷಧ ಮಾರಾಟ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ನಕಲಿ ಔಷಧ ಪೂರೈಕೆ ಕೃತ್ಯವು ಗಂಭೀರವಾಗಿದ್ದು, ಅಸಂಖ್ಯಾತ ಜನರ ಜೀವಕ್ಕೆ ಪ್ರಶಾಂತ್‌ ಕುತ್ತು ತಂದಿದ್ದಾನೆ ಎಂದು ವಂಶಿಕೃಷ್ಣ ಮನವರಿಕೆ ಮಾಡಿದ್ದು ಫಲ ನೀಡಿತು. ಎಸ್‌ಐಟಿ ಮನವಿ ಪುರಸ್ಕರಿಸಿದ ಅಜರ್ ಬೈಜಾನ್ ದೇಶದ ಕಸ್ಟಮ್ಸ್ ಇಲಾಖೆ, ಬೆಂಗಳೂರಿಗೆ ಮರಳಲು ಪ್ರಶಾಂತ್‌ಗೆ ಶುಕ್ರವಾರ ಗೇಟ್ ಪಾಸ್ ಕೊಟ್ಟಿತ್ತು. ಈ ಮಾಹಿತಿ ತಿಳಿದ ಕೂಡಲೇ ಆರೋಪಿಯ ಬಂಧನಕ್ಕೆ ವಿಮಾನ ನಿಲ್ದಾಣದಲ್ಲೇ ಬೀಡು ಬಿಟ್ಟು ಸಿದ್ಧವಾಗಿದ್ದ ಎಸ್‌ಐಟಿ ತಂಡ ಸೋಮವಾರ ನಸುಕಿನಲ್ಲಿ ಆತನನ್ನು ಬಂಧಿಸಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪದ ಸಿ.ಕೆ. ತಾಂಡ್ಯ ಗ್ರಾಮದ ತೋಟ ಮನೆಯಲ್ಲಿ ನಕಲಿ ಔಷಧ ಮಾರಾಟ ಜಾಲದ ಘಟಕದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ದಾಳಿ ವೇಳೆ ಪ್ರಶಾಂತ್ ವ್ಯವಹಾರಿಕ ಪಾಲುದಾರ ವೆಂಕಟೇಶ್ ಚೌಧರಿ ಸೇರಿದಂತೆ ನಾಲ್ವರ ಬಂಧನವಾಗಿತ್ತು. ಬಳಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಮೇರೆಗೆ ಚಾಮರಾಜಪೇಟೆಯಲ್ಲಿ ಔಷಧ ಮಾರಾಟ ಏಜೆನ್ಸಿ ಮಾಲಿಕ ವೀರೇಶ್ ಕುಮಾರ್ ಜೈನ್‌ನನ್ನು ಎಸ್‌ಐಟಿ ಸೆರೆ ಹಿಡಿದಿತ್ತು. ಇದುವರೆಗೆ ಈ ನಕಲಿ ಔಷಧ ದಂಧೆ ಸಂಬಂಧ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಶಿವಮೊಗ್ಗ ಜಿಲ್ಲೆಯ ಪ್ರಶಾಂತ್

ದಶಕಗಳಿಂದ ಔಷಧ ಮಾರಾಟ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಶಾಂತ್ ತೊಡಗಿದ್ದು, ಈ ಮೊದಲು ಪ್ರತಿಷ್ಠಿತ ಕಂಪನಿಗಳ ಮಾರಾಟದ ಪ್ರತಿನಿಧಿಯಾಗಿದ್ದ. ನಂತರ ತನ್ನದೇ ಔಷಧ ಮಾರಾಟ ಏಜೆನ್ಸಿಯನ್ನು ಪ್ರಶಾಂತ್ ಶುರು ಮಾಡಿದ್ದ. ಇದಕ್ಕೆ ಆತನ ಸ್ನೇಹಿತ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಸೂರು ಗ್ರಾಮದ ವೆಂಕಟೇಶ್ ಸಾಥ್ ಕೊಟ್ಟಿದ್ದ. ಹಣದಾಸೆಗೆ ನಕಲಿ ಔಷಧ ಮಾರಾಟ ದಂಧೆಗಿಳಿದಿದ್ದ ಎಂದು ತಿಳಿದು ಬಂದಿದೆ.

- ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ನಕಲಿ ಔಷಧ ಮಾರಾಟ ದಂಧೆ ಪತ್ತೆಯಾಗಿತ್ತು

- ದಶಕ ಕಾಲ ಔಷಧ ಮಾರಾಟ ಕ್ಷೇತ್ರದಲ್ಲಿದ್ದ ಶಿವಮೊಗ್ಗದ ಪ್ರಶಾಂತ್‌ ಆ ದಂಧೆಯ ಪ್ರಮುಖ ಆರೋಪಿ

- ಪೊಲೀಸರು ಘಟಕದ ಮೇಲೆ ದಾಳಿ ನಡೆಸುವ 2 ದಿನ ಮುನ್ನ ಕಿಂಗ್‌ಪಿನ್‌ ಅಜರ್‌ಬೈಜಾನ್‌ಗೆ ತೆರಳಿದ್ದ

- ಅಗ್ಗದ ಔಷಧ ಖರೀದಿಗೆಂದು ಅಜರ್‌ಬೈಜಾನ್‌ಗೆ ಹೋಗಿದ್ದ ಪ್ರಶಾಂತ್‌ಗೆ ಇಲ್ಲಿ ನಡೆದ ದಾಳಿ ಗೊತ್ತಾಗಿತ್ತು

- ಅಲ್ಲೇ ಉಳಿಯಲು ಆತ ಯತ್ನಿಸುತ್ತಿರುವ ಮಾಹಿತಿ ಎಸ್‌ಐಟಿಗೆ ಗೊತ್ತಾಗಿ, ಆ ದೇಶವನ್ನು ಸಂಪರ್ಕಿಸಿತ್ತು

- ವೀಸಾ ಅವಧಿ ಮುಗಿದ ಕಾರಣ ಅಜರ್‌ಬೈಜಾನ್‌ ಪ್ರಶಾಂತ್‌ನನ್ನು ಬಂಧಿಸುವ ಸಾಧ್ಯತೆ ಅಧಿಕವಾಗಿತ್ತು

- ಅಷ್ಟರಲ್ಲಿ ಅಜರ್‌ಬೈಜಾನ್‌ ಜತೆ ಸಂಪರ್ಕ ಸಾಧಿಸಿದ ಎಸ್‌ಐಟಿ ಪ್ರಕರಣದ ಗಂಭೀರತೆಯನ್ನು ವಿವರಿಸಿತು

- ಅಲ್ಲಿನ ಸರ್ಕಾರ ಪ್ರಶಾಂತ್‌ನನ್ನು ಭಾರತಕ್ಕೆ ಕಳುಹಿಸಿತು. ಏರ್‌ಪೋರ್ಟಲ್ಲೇ ಕಾದು ಎಸ್‌ಐಟಿ ಬಂಧಿಸಿತು

==

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ನಕಲಿ ಔಷಧ ಮಾರಾಟ ಜಾಲದ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನ್‌ ದೇಶದಲ್ಲಿ ಬಲೆಗೆ ಬಿದ್ದಿರುವ ಕುರಿತು ‘ಕನ್ನಡಪ್ರಭ’ ಆ.23ರಂದೇ ವರದಿ ಮಾಡಿತ್ತು.