ಸಾರಾಂಶ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಸಾಲ ಮರುಪಾವತಿಗಾಗಿ ಮನೆ ಜಪ್ತಿ ಮಾಡಿದ್ದರಿಂದ ಮನನೊಂದ ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ
ಲಕ್ಷ್ಮೇಶ್ವರ(ಗದಗ): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬೆನ್ನಲ್ಲೆ ಸೋಮವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಗಾಗಿ ಮನೆ ಜಪ್ತಿ ಮಾಡಿದ್ದರಿಂದ ಮನನೊಂದ ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರವಿ ಅವರು ಪಟ್ಟಣದ ಕೆನರಾ ಬ್ಯಾಂಕಿನಲ್ಲಿ 2017ರಲ್ಲಿ ₹3 ಲಕ್ಷ ಗೃಹಸಾಲ ಪಡೆದಿದ್ದರು. ಅದರಲ್ಲಿ ₹2 ಲಕ್ಷ ಮರುಪಾವತಿಸಿ, ಅಷ್ಟಕ್ಕೆ ನಿಲ್ಲಿಸಿದ್ದಾರೆ. ಸೋಮವಾರ ಬ್ಯಾಂಕಿನವರು ಮನೆಯಲ್ಲಿದ್ದವರನ್ನು ಹೊರ ಹಾಕಿ ಜಪ್ತಿ ಮಾಡಿದ್ದಾರೆ.
ಲಕ್ಷ್ಮೇಶ್ವರದ ರಂಭಾಪುರಿ ಪ್ಲಾಟ್ ನಿವಾಸಿ ರವಿ ಶಿವಾನಂದ ಹೆಬ್ಬಾಳ ಆತ್ಮಹತ್ಯೆಗೆ ಯತ್ನಿಸಿದ ಯುವಕ. ರವಿ ಅವರು ಪಟ್ಟಣದ ಕೆನರಾ ಬ್ಯಾಂಕಿನಲ್ಲಿ 2017ರಲ್ಲಿ ₹3 ಲಕ್ಷ ಗೃಹಸಾಲ ಪಡೆದಿದ್ದರು. ಅದರಲ್ಲಿ ₹2 ಲಕ್ಷ ಮರುಪಾವತಿಸಿ, ಅಷ್ಟಕ್ಕೆ ನಿಲ್ಲಿಸಿದ್ದಾರೆ. ಆದರೆ ಬ್ಯಾಂಕಿನವರು ಬಾಕಿ ಉಳಿದ ಸಾಲ ಮರುಪಾವತಿಗೆ ಒತ್ತಡ ಹಾಕುತ್ತಲೇ ಇದ್ದರು. ಕಷ್ಟದಲ್ಲಿದ್ದೇವೆ, ಕಾಲವಕಾಶ ನೀಡುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಸೋಮವಾರ ಬ್ಯಾಂಕಿನವರು ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ ಮನೆಗೆ ಬಂದು ಮನೆಯಲ್ಲಿದ್ದವರನ್ನು ಹೊರ ಹಾಕಿ ಜಪ್ತಿ ಮಾಡಿದ್ದಾರೆ. ಇದರಿಂದ ಮನನೊಂದ ರವಿ ಹೆಬ್ಬಾಳ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್‌ಗೆ ದಾಖಲಿಸಲಾಗಿದೆ.
ಮನೆ ಜಪ್ತಿ, ಹೆಚ್ಚಿನ ಹಣಕ್ಕಾಗಿ ಮೈಕ್ರೋ ಫೈನಾನ್ಸ್ ಬೇಡಿಕೆ
ಕೊಳ್ಳೇಗಾಲ : ಸಾಲ ಕಟ್ಟಿಲ್ಲವೆಂದು ಮೈಕ್ರೋ ಫೈನಾನ್ಸ್ ವ್ಯಕ್ತಿಯೋರ್ವನ ಮನೆ ಜಪ್ತಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ನಡೆದಿದೆ.
ಚೆಲುವರಾಜು 2017ರಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ₹7 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು ಸಾಲದ ಕಂತುಗಳನ್ನು ನಿಯಮಿತವಾಗಿ ಮರುಪಾವತಿ ಮಾಡುತ್ತಿದ್ದರು. ಆದರೆ, ಅವರಿಗೆ ಮತ್ತಷ್ಟು ಸಾಲವನ್ನು ಒದಗಿಸಿದ ಕಂಪನಿಯು, ಕೋವಿಡ್ ವೇಳೆ ಹಣ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ, ₹14 ಲಕ್ಷ ಪಾವತಿಸುವಂತೆ ಕಿರುಕುಳ ನೀಡಿದೆ ಎನ್ನಲಾಗಿದೆ.
₹10 ಲಕ್ಷ ಸಾಲಕ್ಕೆ ₹11.50 ಲಕ್ಷ ಪಾವತಿಸಿದ್ದರೂ, ಹೆಚ್ಚಾಗಿ ಬಡ್ಡಿ ಸೇರಿಸಿದ್ದಾರೆ. ಚೆಲುವರಾಜು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಪಾವತಿಸಲು ಸಾಧ್ಯವಾಗದ ಕಾರಣ, ಚೆಲುವರಾಜು ಮನೆಯನ್ನು ಸೋಮವಾರ ಜಪ್ತಿ ಮಾಡಿದ್ದಾರೆ. ಚಲುವರಾಜು ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಒಂದು ವರ್ಷದಿಂದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮಸ್ಥರ ಹೆಸರಲ್ಲಿ ಫೈನಾನ್ಸಿಂದ ₹35 ಲಕ್ಷ ಪಡೆದ ದಂಪತಿ ಪರಾರಿ!
ಮಧುಗಿರಿ: ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮಸ್ಥರ ಹೆಸರಿನಲ್ಲಿ ₹35 ಲಕ್ಷ ಸಾಲ ಪಡೆದಿದ್ದ ದಂಪತಿ ಪರಾರಿ ಆಗಿರುವ ಘಟನೆ ವರದಿಯಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ ಮತ್ತು ಪತ್ನಿ ರತ್ನಮ್ಮ ವಂಚಿಸಿದವರು. ಈ ದಂಪತಿ ವಿವಿಧ ಸಂಘಗಳ 35 ಸದಸ್ಯರನ್ನು ನಂಬಿಸಿ ಅವರ ಹೆಸರಿನಲ್ಲಿ 10ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದಿದ್ದಾರೆ. ಹಣ ಫಲಾನುಭವಿಗಳಿಗೆ ಕೊಡದೇ, ತಾವೇ ಸಾಲ ಕಟ್ಟುವುದಾಗಿ ಪುಸಲಾಯಿಸಿದ್ದಾರೆ. ನಂತರ ಹಣದ ಸಮೇತ ಪರಾರಿಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದಂಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಾಪ ಮತ್ತು ರತ್ನಮ್ಮ ಗ್ರಾಮದಲ್ಲಿ ಸುಮಾರು 35 ಜನರ ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆ ಪಡೆದು 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ₹50 ಸಾವಿರದಿಂದ ₹2 ಲಕ್ಷದ ವರೆಗೆ ಸಾಲ ಮಂಜೂರು ಮಾಡಿಸಿದ್ದರು. ಆದರೆ, ಜನರಿಗೆ ಬಿಡುಗಡೆಯಾದ ಸುಮಾರು ₹35 ಲಕ್ಷಕ್ಕೂ ಅಧಿಕ ಹಣ ದಂಪತಿ ಪಡೆದು ವಂಚಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ದಂಪತಿ ಮೈಕ್ರೋ ಫೈನಾನ್ಸ್ ಕಂಪನಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಪ್ರತಾಪ ಮೂಲತಃ ಬೆಂಗಳೂರಿನವರು. ದೊಡ್ಡಹೊಸಹಳ್ಳಿಯಲ್ಲಿ ರತ್ನಮ್ಮನನ್ನು ವಿವಾಹವಾಗಿ ಕಳೆದ 12 ವರ್ಷಗಳಿಂದ ಗ್ರಾಮದ್ಲಲೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಈಗ ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿವೆ. ಸಿಬ್ಬಂದಿ ಸಾಲ ಮರುಪಾವತಿಗೆ ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಕೊಡಿಗೇನಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈತನಕ ಕ್ರಮ ಕೈಗೊಂಡಿಲ್ಲವೆಂದು ಮೋಸದ ಬಲೆಗೆ ಸಿಕ್ಕಿರುವ ಜನರು ಆರೋಪಿಸಿದ್ದಾರೆ. ಮೋಸಕ್ಕೆ ಒಳಗಾಗಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮದ ರಂಗಮ್ಮ, ಸಾವಿತ್ರಮ್ಮ , ನರಸಮ್ಮ, ಕೋಟೆಮ್ಮ, ಸಿದ್ದಗಂಗಮ್ಮ, ರತ್ನಮ್ಮ, ರಂಗಮ್ಮ, ಕೋಮಲ, ಲಕ್ಷ್ಮೀದೇವಮ್ಮ, ಮಂಜುಳಾ, ವೀರನಾಗಮ್ಮ, ಮಂಜುಳಮ್ಮ ಸೇರಿ ಇತರರು ಕೊಡಿಗೇನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,
ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ಕೇಸ್ - ಡಿಸಿಗಳಿಗೆ ಸಚಿವ ಕೃಷ್ಣಬೈರೇಗೌಡ ನಿರ್ದೇಶನ
ಬೆಂಗಳೂರು : ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಅಕ್ರಮಗಳು ಕಂಡು ಬಂದರೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಸಾಮಾನ್ಯರಿಗೆ ಬರೊಬ್ಬರಿ 59 ಸಾವಿರ ಕೋಟಿ ರು. ಸಾಲ ನೀಡಿವೆ. ತಮ್ಮ ವಹಿವಾಟು ಹೆಚ್ಚಳ ಮಾಡಿಕೊಳ್ಳುವ ಸಲುವಾಗಿ ಆರ್‌ಬಿಐ ನಿಯಮ ಉಲ್ಲಂಘಿಸಿ ಸಾಲ ನೀಡುತ್ತಿವೆ. ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮರ್ಥ್ಯ ಪರಿಗಣಿಸುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಬ್ಬ ವ್ಯಕ್ತಿಗೆ ಸ್ವಸಹಾಯ ಗುಂಪುಗಳ ಮೂಲಕ ಅಥವಾ ನೇರವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ₹2 ಲಕ್ಷಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್‌ಬಿಐ ನಿಯಮಾವಳಿಯೇ ಇದೆ. ಇದನ್ನು ಯಾರೂ ಅನುಸರಿಸುತ್ತಿಲ್ಲ. ಒಬ್ಬ ವ್ಯಕ್ತಿಗೆ ₹5-6 ಲಕ್ಷ ಸಾಲ ನೀಡಲಾಗುತ್ತಿದೆ. ಈ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ. ಸಾಲ ಮರುಪಾವತಿ ಮಾಡದಿದ್ದರೆ ಮೈಕ್ರೋ ಫೈನಾನ್ಸ್ ಕಂಪನಿಗಳ ಅಸ್ತಿತ್ವಕ್ಕೂ ತೊಂದರೆಯಾಗಲಿದೆ ಎಂದು ಹೇಳಿದರು.
ವಾರದೊಳಗೆ ಸಭೆ ನಡೆಸಿ: ಹೀಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್‌ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆ ಪಾಲನೆಗೆ ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನು ನಿಗ್ರಹಿಸಲು ಸೂಚಿಸಬೇಕು ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ರಾಜ್ಯ ಸರ್ಕಾರವೇ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‌ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇದನ್ನು ಇದೇ ರೀತಿ ಬಿಟ್ಟರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಸರ್ಕಾರ ಮಾಡಿದ ಪಾಪದಿಂದ ಜನರು ಬಲಿ: ಅಶೋಕ್ ಟೀಕೆ
ರಾಜ್ಯ ಸರ್ಕಾರ ಸಾಲ ನೀಡದಿರುವುದರಿಂದ ಜನತೆ ಮೈಕ್ರೋ ಫೈನಾನ್ಸ್ ಮೊರೆ ಹೋಗಿದ್ದು, ಸರ್ಕಾರ ಮಾಡಿದ ಪಾಪದಿಂದ ಜನ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಾಡಿದ ಪಾಪದಿಂದಾಗಿ ಜನ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರ್ಕಾರವೇ ಸಾಲ ನೀಡಿದ್ದರೆ ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೈಕ್ರೋ ಫೈನಾನ್ಸ್‌ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಕಾಂಗ್ರೆಸ್ ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಬಿಜೆಪಿ ಸರ್ಕಾರ ಈ ಹಿಂದೆ ಸಾಲ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ನಿಗಮಗಳ ಮೂಲಕ ಸಾಲ ನೀಡದ ಕಾರಣ ಜನ ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳ ಮೊರೆ ಹೋಗಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಪ್ರತಿ ಬಜೆಟ್‌ನಲ್ಲೂ ಅನುದಾನ ಶೇ.20 ರಷ್ಟು ಹೆಚ್ಚಾಗಬೇಕು. ಬಿಜೆಪಿ ಸರ್ಕಾರ ಪ್ರತಿ ಇಲಾಖೆಗೆ ನೀಡುತ್ತಿದ್ದ ಅನುದಾನಕ್ಕಿಂತ ಕಾಂಗ್ರೆಸ್ ಸರ್ಕಾರ ಕಡಿಮೆ ಅನುದಾನ ನೀಡುತ್ತಿದೆ. ಅಲ್ಲದೆ, ನಿಗಮ-ಮಂಡಳಿ ಅನುದಾನಕ್ಕೂ ಕತ್ತರಿ ಹಾಕಿದೆ. ಇಲಾಖೆ ಮತ್ತು ನಿಗಮಗಳಿಗೆ ಹಣದ ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್‌ಗಳು ನೀಡುತ್ತಿವೆ ಎಂದು ಕಿಡಿಕಾರಿದರು.
ಮೈಕ್ರೋ ಫೈನಾನ್ಸ್‌ನಲ್ಲಿ 10 ಜನರ ಗುಂಪು ರಚಿಸಿ, ಪ್ರತಿಯೊಬ್ಬರಿಗೂ 50 ಸಾವಿರ ರು. ಸಾಲ ನೀಡುತ್ತಾರೆ. ಒಬ್ಬರಿಗೆ ಉಳಿದವರು ಶೂರಿಟಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. 50 ಸಾವಿರ ರು. ಸಾಲ ಪಡೆದರೆ 67 ಸಾವಿರ ರೂ. ವಾಪಸ್ ನೀಡಬೇಕು. ಎರಡು ತಿಂಗಳು ಕಟ್ಟಲಿಲ್ಲವೆಂದರೆ ರೌಡಿಗಳು ಮನೆಗೆ ಹೋಗಿ ಗಲಾಟೆ ಮಾಡುತ್ತಾರೆ. ಅನೇಕ ಹಳ್ಳಿಗಳಲ್ಲಿ ಜನ ಮನೆ ಬಿಟ್ಟು ವಲಸೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಹೇಳಿದ್ದು ನಿಜವಾಗಿದೆ: ಕೋಟೆ ಲೂಟಿಯಾದ ನಂತರ ಬಾಗಿಲು ಹಾಕಿದರು ಎಂಬಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನೋಟಿಸ್ ಕೊಡದೆ ಜನರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಇಂಥ ಸಮಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪೊಲೀಸರು ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ಸಾಲ ಮನ್ನಾ ಬಗ್ಗೆ ಹೇಳಿದ್ದರಿಂದ ಡಿಸಿಸಿ ಬ್ಯಾಂಕ್‌ಗಳಿಗೆ ನಷ್ಟವಾಗಿದೆ. ಇದೀಗ ಸಾಲ ಪಡೆದವರು ಕಾಂಗ್ರೆಸ್ ಸರ್ಕಾರವನ್ನು ನಂಬಿಕೊಂಡು ಕೂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತಾರೆಂದು ಪ್ರಧಾನಿ ಮೋದಿ ಹೇಳಿದ್ದು ಈಗ ನಿಜವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಹಣ ಕೊಡಬೇಕಿದೆ. ಇದರ ಜೊತೆಗೆ ಬೆಂಗಳೂರಿಗೆ ಅನುದಾನ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಈಗ ಮೈಕ್ರೋ ಫೈನಾನ್ಸ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗುತ್ತಿದೆ. ಎಲ್ಲವನ್ನೂ ಪ್ರಧಾನಿ ಮೋದಿ ಮಾಡುವುದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಯಾವ ಕಾರಣಕ್ಕಾಗಿ ಅಧಿಕಾರದಲ್ಲಿದೆ? ಎಂದು ಟೀಕಿಸಿದರು.
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲರೂ ಸಮಾನ ಎಂಬ ಭಾವನೆ ಬೆಳೆಯುತ್ತದೆ. ಬೇರೆ ದೇಶಗಳಲ್ಲಿ ಎಲ್ಲ ನಾಗರಿಕರು ಒಂದೇ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಭಾರತದಲ್ಲೂ ಹಿಂದೂಗಳಿಗೆ ಇರುವ ಕಾನೂನು ಎಲ್ಲ ಧರ್ಮೀಯರಿಗೆ ಅನ್ವಯವಾಗಬೇಕು ಎಂದು ತಿಳಿಸಿದರು.
ಮೈಕ್ರೋಫೈನಾನ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ
ನೋಂದಾಯಿತ ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ನಿಯಮಾವಳಿ (ಗೈಡ್‌ಲೈನ್)ಗೆ ಒಳಪಡುತ್ತವೆ. ರಾಜ್ಯ ಸರ್ಕಾರ ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಯಮ ಜಾರಿಗೆ ತರಬೇಕು. ಇದಕ್ಕಾಗಿ ಸಮಿತಿ ರಚಿಸಿ ಪ್ರಾಮಾಣಿಕ ಅಧಿಕಾರಿಗಳ ನೇಮಿಸಿ ಮೇಲ್ವಿಚಾರಣೆ ಮಾಡಬೇಕು. ಪೊಲೀಸರಿಗೆ ಅಧಿಕಾರ ಕೊಟ್ಟು ಅದರಲ್ಲಿ ಭ್ರಷ್ಟಾಚಾರ ಮಾಡಬಾರದು ಎಂದು ಅವರು ಒತ್ತಾಯಿಸಿದರು.
ಆರ್‌ಬಿಐ ನಿಯಮಾವಳಿಯಲ್ಲಿ ಎಷ್ಟು ಪ್ರತಿಶತ ಬಡ್ಡಿ ಹಾಕಬೇಕು ಎಂಬುದೂ ಇದೆ. ನೋಂದಣಿಯಾಗದ ಅಕ್ರಮ ಫೈನಾನ್ಸ್ ಸಾಕಷ್ಟು ಇವೆ. ಇದರಲ್ಲಿ ಭ್ರಷ್ಟಾಚಾರ ಆಗ್ತಿದೆ. ಕೆಲ ಫೈನಾನ್ಸ್ ಕಂಪನಿಗಳು ಪೊಲೀಸರ ರಕ್ಷಣೆ ಪಡೆದು ತೊಂದರೆ ಕೊಡುತ್ತಿವೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ, ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ಆರೋಪಿಸಿದರು.----
‘ಅಧಿಕಾರದಲ್ಲಿ ಸಿಎಂ ಸಿದ್ದು ಮುಂದುವರಿಕೆ ಅನೈತಿಕ’
ಏನಾದರು ಮಾಡಿ ಮುಡಾ ಹಗರಣ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್‌ಗೆ ಹೋದರು. ಆದರೆ, ರಾಜ್ಯಪಾಲರ ನಡೆಯನ್ನು ಹೈಕೋರ್ಟ್ ತೆಗೆದು ಹಾಕಿಲ್ಲ. ಹೈಕೋರ್ಟ್ ಸಿಎಂ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಹೇಳಿದ ಮೇಲೂ ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರಿದಿರುವುದೇ ಅನೈತಿಕ.
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ.