30 ಲಕ್ಷ ರು. ಮೇಲ್ಪಟ್ಟ ಆಸ್ತಿ ಖರೀದಿಗೆ ಐಟಿಗೆ ವಿವರ ಸಲ್ಲಿಕೆ ಕಡ್ಡಾಯ

| N/A | Published : May 17 2025, 06:16 AM IST

ITR Forms
30 ಲಕ್ಷ ರು. ಮೇಲ್ಪಟ್ಟ ಆಸ್ತಿ ಖರೀದಿಗೆ ಐಟಿಗೆ ವಿವರ ಸಲ್ಲಿಕೆ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

30 ಲಕ್ಷ ರು. ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸ್ಥಿರಾಸ್ತಿ ನೋಂದಣಿ ವೇಳೆ ಖರೀದಿದಾರರು ಹಾಗೂ ಮಾರಾಟಗಾರರ ಪಾನ್‌ ಸಂಖ್ಯೆ ಸೇರಿ ಸಂಪೂರ್ಣ ವಿವರಗಳನ್ನು ಪ್ರತ್ಯೇಕ ನಮೂನೆಯಲ್ಲಿ ಸಹಿ ಸಹಿತ ಪಡೆದು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು

ಶ್ರೀಕಾಂತ್ ಎನ್. ಗೌಡಸಂದ್ರ

 ಬೆಂಗಳೂರು : ರಾಜ್ಯದಲ್ಲಿ ಇನ್ನು ಮುಂದೆ 30 ಲಕ್ಷ ರು. ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸ್ಥಿರಾಸ್ತಿ ನೋಂದಣಿ ವೇಳೆ ಖರೀದಿದಾರರು ಹಾಗೂ ಮಾರಾಟಗಾರರ ಪಾನ್‌ ಸಂಖ್ಯೆ ಸೇರಿ ಸಂಪೂರ್ಣ ವಿವರಗಳನ್ನು ಪ್ರತ್ಯೇಕ ನಮೂನೆಯಲ್ಲಿ ಸಹಿ ಸಹಿತ ಪಡೆದು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ಸಲ್ಲಿಸದಿದ್ದರೆ, ಅಂಥ ಆಸ್ತಿ ದಸ್ತಾವೇಜು ನೋಂದಣಿಯೇ ಆಗುವುದಿಲ್ಲ!

ಬೇನಾಮಿ ಆಸ್ತಿ ವಹಿವಾಟು ನಿಯಂತ್ರಣ ಕಾರ್ಯದಲ್ಲಿ ಆದಾಯ ಇಲಾಖೆಗೆ ನೆರವಾಗಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇಂತಹದೊಂದು ಸುತ್ತೋಲೆ ಹೊರಡಿಸಿದೆ.

ಇಷ್ಟೇ ಅಲ್ಲ, ಈ ರೀತಿ ಖರೀದಿದಾರ ಹಾಗೂ ಮಾರಾಟಗಾರನಿಂದ ಪಡೆದ ಆಸ್ತಿ ವಿವರ, ಪಾನ್‌ ಸಂಖ್ಯೆ, ಫಾರ್ಮ್-60 ಸ್ವೀಕೃತಿ, ಆಧಾರ್‌ ಸಂಖ್ಯೆ, ತಂದೆ ಹೆಸರು, ವಿಳಾಸ ಸೇರಿ ಸ್ವ-ವಿವರದ ಪ್ರಮಾಣಪತ್ರವನ್ನು ಆಸ್ತಿಯ ದಸ್ತಾವೇಜು ಹಾಳೆಯ ಜತೆಯೇ ಸ್ಕ್ಯಾನ್‌ ಮಾಡಬೇಕು. ಈ ಸ್ಕ್ಯಾನ್‌ ಮಾಡಿದ ಹಾಳೆಯನ್ನು ಅಡಕದ ರೂಪದಲ್ಲಿ ಆಸ್ತಿ ದಸ್ತಾವೇಜು ಹಾಳೆಗಳ ಜತೆ ಕಾವೇರಿ-2 ತಂತ್ರಾಂಶಕ್ಕೆ ಅಪ್ಲೋಡ್‌ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ತನ್ಮೂಲಕ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಸ್ತಿ ವಹಿವಾಟು ಹಾಗೂ ವಹಿವಾಟು ನಡೆಸಿದವರ ಸಂಪೂರ್ಣ ವಿವರಗಳನ್ನು ಪಡೆಯಲು ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ.

ಏನಿದು ಸುತ್ತೋಲೆ?:

ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಕೆ.ಎ.ದಯಾನಂದ್ ಅವರು ಮೇ 16 ರಂದು ಶುಕ್ರವಾರ ಎಲ್ಲಾ ಜಿಲ್ಲಾ ನೋಂದಣಾಧಿಕಾರಿ ಹಾಗೂ ಉಪ ನೋಂದಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ, 30 ಲಕ್ಷಕ್ಕೂ ಹೆಚ್ಚು ಮೌಲ್ಯ ಹೊಂದಿರುವ ಸ್ಥಿರಾಸ್ತಿಯ ಮಾರಾಟ ಹಾಗೂ ಖರೀದಿ ವಹಿವಾಟುಗಳ ಮಾಹಿತಿಯನ್ನು ಉಪ ನೋಂದಣಾಧಿಕಾರಿಗಳು ವರ್ಷಾಂತ್ಯದಲ್ಲಿ 61ಎ ನಮೂನೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಹೀಗಾಗಿ ಇನ್ನು ಮುಂದೆ ಈ ಸುತ್ತೋಲೆ ಜತೆಗೆ ನೀಡಿರುವ ಅನುಬಂಧದಲ್ಲಿ ತಿಳಿಸಿರುವ ಮಾಹಿತಿಯನ್ನು ಅರ್ಜಿದಾರರಿಂದ ಅವರ ಸಹಿಯೊಂದಿಗೆ ಪಡೆಯಬೇಕು. ಜತೆಗೆ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಸ್ವಯಂ ದೃಢೀಕರಣ ಪಡೆದು ದಸ್ತಾವೇಜು ಹಾಳೆ ಜತೆ ಅಡಕಗಳಾಗಿ ಸ್ಕ್ಯಾನ್‌ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ದಸ್ತಾವೇಜನ್ನು ಸಂಬಂಧಪಟ್ಟ ಪಕ್ಷಕಾರರಿಗೆ ಹಸ್ತಾಂತರಿಸಬಾರದು ಎಂದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಜತೆಗೆ ಅಡಕಗಳನ್ನು ಸ್ಕ್ಯಾನ್‌ ಮಾಡಲು ಹೆಚ್ಚುವರಿ ಶುಲ್ಕ ಪಡೆಯಬಾರದು. ಈ ಕ್ರಮದಲ್ಲಿ ಯಾವುದೇ ಲೋಪದೋಷ ಉಂಟಾದರೂ ಸಂಬಂಧಿಸಿದ ಅಧಿಕಾರಿಗಳೇ ವೈಯಕ್ತಿಕವಾಗಿ ಜವಾಬ್ದಾರಿ ಆಗುತ್ತಾರೆ ಎಂದು ಕೆ.ಎ.ದಯಾನಂದ್‌ ಎಚ್ಚರಿಕೆ ನೀಡಿದ್ದಾರೆ.

ನೋಂದಣಿ ತಡೆ ನಿರ್ಧಾರವಷ್ಟೇ ಹೊಸತು!

ಆದಾಯ ತೆರಿಗೆ ಇಲಾಖೆಯು ಬೇನಾಮಿ ಆಸ್ತಿ ವಹಿವಾಟು ನಿಯಂತ್ರಣಕ್ಕಾಗಿ ರಾಜ್ಯದ ಆಸ್ತಿಗಳ ನೋಂದಣಿ ಮೇಲೆ ಕಣ್ಣಿಟ್ಟಿರುತ್ತದೆ. 30 ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿ ಖರೀದಿ, ಮಾರಾಟ ವೇಳೆ ಮಾರಾಟಗಾರ, ಖರೀದಿದಾರರ ಪಾನ್‌ ಸಂಖ್ಯೆ ಸೇರಿ ಕೆಲ ವಿವರಗಳನ್ನು ಪಡೆದು ವರ್ಷಾಂತ್ಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು ಎಂಬ ನಿಯಮ ಹಿಂದೆಯೇ ಮಾಡಲಾಗಿತ್ತು.

ಆದರೆ, ನೋಂದಣಾಧಿಕಾರಿಗಳು ಇದನ್ನು ಪಾಲನೆ ಮಾಡುತ್ತಿರಲಿಲ್ಲ. ನೋಂದಣಾಧಿಕಾರಿಗಳು ನೀಡುತ್ತಿದ್ದ ಪಾನ್‌ ವಿವರ ಸೇರಿ ವಿವಿಧ ಮಾಹಿತಿಯಲ್ಲಿ ನೈಜತೆಯೇ ಇರುತ್ತಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆ ನಮ್ಮ ಜತೆ ಸಹಕರಿಸುತ್ತಿಲ್ಲ ಎಂದು ಐಟಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿ ಕಂದಾಯ ಇಲಾಖೆ ಈ ಹಠಾತ್‌ ಕ್ರಮ ಕೈಗೊಂಡಿದ್ದು, ಸ್ವಯಂ ದೃಢೀಕರಣದ ಜತೆ ಸಹಿ ಪಡೆದು ವಿವರಗಳನ್ನು ಪಡೆಯಲು ಮುಂದಾಗಿದೆ.

ಐಟಿ ಇಲಾಖೆಗೆ ವಸ್ತುನಿಷ್ಠ ಮಾಹಿತಿ ನೀಡಲು ಈ ಕ್ರಮ: ಕೆ.ಎ.ದಯಾನಂದ್

ಆದಾಯ ತೆರಿಗೆ ಕಾಯ್ದೆ-1961ರ ಕಲಂ 285 ಬಿಎ(1) ರ ಅನ್ವಯ ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ವಹಿವಾಟಿನ ವೇಳೆ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕು ಎಂಬ ನಿಯಮ ಮೊದಲಿನಿಂದಲೂ ಇದೆ. ಆದರೆ ನಮ್ಮ ನೋಂದಣಾಧಿಕಾರಿಗಳು ಖರೀದಿದಾರ, ಮಾರಾಟಗಾರ ನೀಡುತ್ತಿದ್ದ ಮಾಹಿತಿಯನ್ನು ಪರಾಮರ್ಶೆ ಮಾಡದೆ ಯಾವುದೋ ಹಾಳೆಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ವರ್ಷಾಂತ್ಯಕ್ಕೆ ನಮೂನೆ-61ಎ ರಲ್ಲಿ ಐಟಿ ಇಲಾಖೆಗೆ ಸಲ್ಲಿಸುತ್ತಿದ್ದರು.

ಆದರೆ, ಬಹುತೇಕ ವೇಳೆ ಪಾನ್‌ ಸಂಖ್ಯೆ ಸೇರಿ ಹಲವು ವಿವರಗಳು ನಕಲಿ ಆಗಿರುತ್ತವೆ. ಇದನ್ನು ತಪ್ಪಿಸಿ ಐಟಿ ಇಲಾಖೆಗೆ ಸರಿಯಾದ ಮಾಹಿತಿ ಒದಗಿಸಲು ನಾನೇ ನಮೂನೆ ಸಿದ್ಧಪಡಿಸಿ ಅದರಲ್ಲಿ ಎಲ್ಲಾ ವಿವರಗಳನ್ನು ಪಡೆದು ಮಾರಾಟಗಾರ, ಖರೀದಿದಾರನಿಂದ ಸ್ವಯಂ ದೃಢೀಕರಣಕ್ಕಾಗಿ ಸಹಿ ಪಡೆಯಲು ಸೂಚಿಸಿದ್ದೇನೆ. ಇದನ್ನು ಮಾಡದಿದ್ದರೆ ಅವರಿಗೆ ನೋಂದಣಿ ದಸ್ತಾವೇಜು ನೀಡುವುದಿಲ್ಲ ಎಂದು ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತ ಕೆ.ಎ.ದಯಾನಂದ್‌ ಸ್ಪಷ್ಟಪಡಿಸಿದರು.

ಅನುಬಂಧದಲ್ಲಿ ಕೇಳಿರುವ ವಿವರಗಳೇನು?

ಐಟಿ ಇಲಾಖೆಗೆ ನೀಡಲು ಸಿದ್ಧಪಡಿಸಿರುವ ಅನುಬಂಧದ ನಮೂನೆಯಲ್ಲಿ ಆಸ್ತಿ ವರದಿ ಸಂಖ್ಯೆ, ವರದಿ ಕ್ರಮ ಸಂಖ್ಯೆ ನಮೂದಿಸಬೇಕು. ಜತೆಗೆ ಆಸ್ತಿ ವಹಿವಾಟು ವಿವರಗಳಲ್ಲಿ ವಹಿವಾಟು ನಡೆದ ದಿನಾಂಕ, ಆಸ್ತಿ ವಹಿವಾಟಿನ ರೀತಿ (ಖರೀದಿ, ದಾನ ವಿಕ್ರಯ, ಉಡುಗೊರೆ), ವಹಿವಾಟಿನ ಮೊತ್ತ, ಆಸ್ತಿ ಮಾದರಿ, ಆಸ್ತಿಯು ನಗರ ವ್ಯಾಪ್ತಿಯಲ್ಲಿದೆಯೇ? ಎಂಬ ಬಗೆಗಿನ ಸಂಪೂರ್ಣ ವಿವರ ನೀಡಬೇಕು.

ವೈಯಕ್ತಿಕ ವಿವರಗಳ ಪೈಕಿ ಮಾರಾಟಗಾರ ಹಾಗೂ ಖರೀದಿದಾರ (ಪ್ರತ್ಯೇಕವಾಗಿ) ವ್ಯಕ್ತಿಯ ಹೆಸರು, ಲಿಂಗ, ತಂದೆಯ ಹೆಸರು, ಆಧಾರ್‌ ಸಂಖ್ಯೆ, ಪಾನ್‌ ಸಂಖ್ಯೆ, ನಮೂನೆ-60 ಸ್ವೀಕೃತಿ ಪ್ರತಿ, ಜನ್ಮದಿನಾಂಕ, ಮೊಬೈಲ್‌ ಸಂಖ್ಯೆ, ಇ-ಮೇಲ್‌ ವಿಳಾಸ ನಮೂದಿಸಬೇಕು. ಬಳಿಕ ಕೆಳ ಭಾಗದಲ್ಲಿ ಇಬ್ಬರೂ ಸಹಿ ಹಾಕಿ ದೃಢೀಕರಿಸಬೇಕು.

ಈ ಆದೇಶಕ್ಕೆ ಕಾರಣ ಏನು?

- ಈವರೆಗೆ ಆಸ್ತಿ ಖರೀದಿ ವೇಳೆ ಕಪ್ಪುಹಣ ಬಿಳಿ ಮಾಡಿಕೊಳ್ಳುವ ದಂಧೆ ನಡೆಯುತ್ತಿತ್ತು

- ಬೇನಾಮಿ ಆಸ್ತಿ ವಹಿವಾಟಿಂದ ಖರೀದಿದಾರರು, ಮಾರಾಟಗಾರರು ವಂಚಿಸುತ್ತಿದ್ದರು

- ಈ ವಂಚನೆಗೆ ಇನ್ನು ಬ್ರೇಕ್‌ । ಬೇನಾಮಿ ಆಸ್ತಿಗಳ ವಹಿವಾಟು ಮೇಲೆ ಕಣ್ಣಿಡಲು ತಂತ್ರ

- ಆದಾಯ ತೆರಿಗೆ ಇಲಾಖೆಗೆ ನೆರವಾಗಲು ಈ ಉಪಕ್ರಮ, ಇದರಿಂದ ಅಕ್ರಮಕ್ಕೆ ಅಂಕುಶ

Read more Articles on