ಮನೆಯ ಮುಂದೆ ಆಟೋ ಬಂದರೂ ಕಸ ಹಾಕದಿದ್ದರೆ ದಂಡ ವಸೂಲಿ

| N/A | Published : Aug 07 2025, 06:28 AM IST

BBMP latest news today photo
ಮನೆಯ ಮುಂದೆ ಆಟೋ ಬಂದರೂ ಕಸ ಹಾಕದಿದ್ದರೆ ದಂಡ ವಸೂಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಮುಂದೆ ಪ್ರತಿದಿನ ಬೆಳಗ್ಗೆ ಮನೆ ಮುಂದೆ ಬರುವ ಬಿಬಿಎಂಪಿಯ ಆಟೋಕ್ಕೆ ಕಸ ನೀಡದಿದ್ದರೆ ನೋಟಿಸ್‌ನೊಂದಿಗೆ ದಂಡ ವಿಧಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಚಿಂತನೆ ನಡೆಸಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಇನ್ನು ಮುಂದೆ ಪ್ರತಿದಿನ ಬೆಳಗ್ಗೆ ಮನೆ ಮುಂದೆ ಬರುವ ಬಿಬಿಎಂಪಿಯ ಆಟೋಕ್ಕೆ ಕಸ ನೀಡದಿದ್ದರೆ ನೋಟಿಸ್‌ನೊಂದಿಗೆ ದಂಡ ವಿಧಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಚಿಂತನೆ ನಡೆಸಿದೆ.

ಇತ್ತೀಚಿಗೆ ಕೇಂದ್ರ ಸರ್ಕಾರದಿಂದ ನಡೆಸಲಾದ ಸ್ವಚ್ಛ ಸರ್ವೇಕ್ಷಣದ ವರದಿಯಲ್ಲಿ ರಾಜಧಾನಿ ಬೆಂಗಳೂರು ದೇಶದ 4ನೇ ಕಲುಷಿತ ನಗರವನ್ನಾಗಿ ಘೋಷಿಸಿರುವುದು ರಾಜ್ಯಕ್ಕೆ ಭಾರೀ ಮುಜುಗರ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಜು.29 ರಂದು ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ಬಿಬಿಎಂಪಿಯಿಂದ ಕಸ ಸಂಗ್ರಹಿಸಲು ವಾಹನ ಹೋದರೂ ಕಸ ನೀಡದೇ ಇದ್ದರೆ ಅಂತಹ ಮಾಲೀಕರನ್ನು ಬೇರೆಡೆ ಕಸ ಎಸೆಯುತ್ತಾರೆ ಎಂದು ಪರಿಗಣಿಸಲಾಗುವುದು. ಸಾರ್ವಜನಿಕರು ನಿಯಮ ಪ್ರಕಾರ ಹಸಿ, ಒಣ ತ್ಯಾಜ್ಯ ವಿಂಗಡಿಸಿ ನೀಡದಿದ್ದರೆ ಅಂತಹ ಮನೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ, ಅಗತ್ಯವಿದ್ದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವ ಹಾಟ್‌ಸ್ಪಾಟ್‌ ಗುರುತಿಸಬೇಕು. ಮಾರ್ಷಲ್‌ಗಳನ್ನು ನಿಯೋಜಿಸಿ ತಡೆಗಟ್ಟುವ ಕೆಲಸ ಮಾಡಬೇಕು. ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಲಯ ಆಯುಕ್ತರಿಗೆ ಜವಾಬ್ದಾರಿ:

ನಗರದಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಗುತ್ತಿಗೆದಾರರ ಮೂಲಕ ವಿಂಗಡಣೆ, ವಿಲೇವಾರಿ, ಸಂಗ್ರಹ ಮಾಡುವ ಜವಾಬ್ದಾರಿಯನ್ನು ಆಯಾ ವಲಯ ಆಯುಕ್ತರಿಗೆ ನೀಡಬೇಕು/ ಪರಿಸರ ಎಂಜಿನಿಯರ್‌ ಹಾಗೂ ನೈರ್ಮಲ್ಯ ಇನ್ಸ್‌ಪೆಕ್ಟರ್‌ಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಹೆಚ್ಚಿನ ಉಪಕರಣ ಹಾಗೂ ಮಾನವ ಸಂಪನ್ಮೂಲ ಪಡೆಯಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.

ಕಟ್ಟಡ ತ್ಯಾಜ್ಯ ವಿಲೇವಾರಿಗೆ ಮೊದಲೇ ಹಣ ವಸೂಲಿ:

ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಲು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿಯೇ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಮಾಲೀಕರಿಂದ ಹಣ/ಶುಲ್ಕ ವಸೂಲಿ ಮಾಡಲು ಸೂಚಿಸಲಾಗಿದೆ.ತ್ಯಾಜ್ಯವನ್ನು ನಿರ್ದಿಷ್ಟ ಕ್ವಾರಿಗೆ ವಿಲೇವಾರಿ ಮಾಡಲು ಸೂಚಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ. ಕಟ್ಟಡ ತ್ಯಾಜ್ಯ ವಿಲೇವಾರಿ ಬಗ್ಗೆ ಸ್ಥಳೀಯ ಎಂಜಿನಿಯರ್‌ ಹಾಗೂ ಕಂದಾಯ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಸದ ಸಮಸ್ಯೆ ಪರಿಹಾರಕ್ಕೆ ಕ್ರಮ:

ನಗರದಲ್ಲಿ 3025 ಮೆಟ್ರಿಕ್‌ ಟನ್‌ ಪ್ರತಿ ದಿನ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಪೈಕಿ 2,180 ಮೆಟ್ರಿಕ್‌ ಟನ್‌ ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಇನ್ನೂಳಿದ 850 ಮೆಟ್ರಿಕ್‌ ಟನ್‌ ಸಂಸ್ಕರಣೆ ಆಗುತ್ತಿಲ್ಲ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುವ ವಾರ್ಡ್‌ನಲ್ಲಿ ಸಂಸ್ಕರಣೆ ಘಟಕ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಇನ್ನೂ 1925 ಮೆಟ್ರಿಕ್‌ ಟನ್‌ ಒಣ ತ್ಯಾಜ್ಯ ಸಂಗ್ರಹಣೆ ಉತ್ಪತ್ತಿಯಾಗುತ್ತಿದ್ದು, 1200 ಮೆಟ್ರಿಕ್‌ ಟನ್‌ ಸಂಸ್ಕರಣೆ ಆಗುತ್ತಿದೆ. 725 ಮೆಟ್ರಿಕ್‌ ಟನ್‌ ಸಂಸ್ಕರಣೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ಇಲ್ಲದ ವಾರ್ಡ್‌ನಲ್ಲಿ ಕೇಂದ್ರ ಸ್ಥಾಪಿಸಬೇಕು. ಒಣ ತ್ಯಾಜ್ಯ ಸಂಗ್ರಹಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

Read more Articles on