ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಸಲಹೆ-ಸೂಚನೆಗಳ ಬಗ್ಗೆ ನಗರ ಪೊಲೀಸರು ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದ್ದಾರೆ.

ಬೆಂಗಳೂರು : ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಸಲಹೆ-ಸೂಚನೆಗಳ ಬಗ್ಗೆ ನಗರ ಪೊಲೀಸರು ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದ್ದಾರೆ.

ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್‌ ಆದೇಶದನ್ವಯ ಸರ್ಕಾರವು ಸಮಯ ನಿಗದಿಪಡಿಸಿದ್ದು, ನಿಗದಿತ ಅವಧಿ ಮೀರಿ ಪಟಾಕಿ ಸಿಡಿಸಿದಲ್ಲಿ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಬಿ.ಎನ್.ಎಸ್, ಸ್ಪೋಟಕ ಕಾಯ್ದೆ, ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಇತರೆ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿಗಳನ್ನು ಸಿಡಿಸುವವರ ವಿರುದ್ಧ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.

ಸಲಹೆ-ಸೂಚನೆಗಳು:

ಹಸಿರು ಪಟಾಕಿಗಳನ್ನು ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಬೇಕು,.ಸಾರ್ವಜನಿಕ ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳಗಳು. ವೃದ್ಧಾಶ್ರಮ, ಶಿಶುಪಾಲನಾ ಕೇಂದ್ರಗಳ ಸುತ್ತಮುತ್ತ ಪಟಾಕಿಗಳನ್ನು ಸಿಡಿಸಬಾರದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕಗಳನ್ನುಧರಿಸಬೇಕು. ಅಗ್ನಿ ನಂದಿಸುವ ನೀರು, ಮರಳು, ಬೆಂಕಿ ನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು.

ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಕ್ಕೆ ಸಂಪರ್ಕಿಸಬೇಕು

ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಕ್ಕೆ ಸಂಪರ್ಕಿಸಬೇಕು.ನೆರೆ-ಹೊರೆಯಲ್ಲಿರುವ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಂಭವವಿರುವುದರಿಂದ ಈ ವಿಷಯವನ್ನು ಮನಗಂಡು ಕಡಿಮೆ ಶಬ್ದ ಬರುವ ಹಸಿರು ಪಟಾಕಿಗಳನ್ನೇ ಹಚ್ಚಬೇಕು

ಹಸಿರು ಪಟಾಕಿಗಳನ್ನು ಖರೀದಿಸುವಾಗ ಅದರ ಮೇಲಿರುವ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಂಡು ಖರೀದಿ ಮಾಡಬೇಕು,ಅಕ್ರಮವಾಗಿ ಪಟಾಕಿಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆಮಾಡಿ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ.