ಸಾರಾಂಶ
ಕೊರೋನಾ ಭೀತಿ, ಎಚ್ಎಂಪಿವಿ ವೈರಸ್ ಭೀತಿಯ ಬೆನ್ನಲ್ಲೇ ರಾಜ್ಯದಲ್ಲಿ ವರ್ಷದ ಮೊದಲ ಮಂಕಿ ಪಾಕ್ಸ್ (ಎಂಪಾಕ್ಸ್) ಸೋಂಕು ಪ್ರಕರಣ ದೃಢಪಟ್ಟಿದ್ದು, ಆತಂಕ ಮೂಡಿಸಿದೆ.
ಬೆಂಗಳೂರು : ಕೊರೋನಾ ಭೀತಿ, ಎಚ್ಎಂಪಿವಿ ವೈರಸ್ ಭೀತಿಯ ಬೆನ್ನಲ್ಲೇ ರಾಜ್ಯದಲ್ಲಿ ವರ್ಷದ ಮೊದಲ ಮಂಕಿ ಪಾಕ್ಸ್ (ಎಂಪಾಕ್ಸ್) ಸೋಂಕು ಪ್ರಕರಣ ದೃಢಪಟ್ಟಿದ್ದು, ಆತಂಕ ಮೂಡಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಮೂಲದ, 40 ವರ್ಷ ವಯಸ್ಸಿನ ದುಬೈ ಪ್ರವಾಸ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಎಂಪಾಕ್ಸ್ ದೃಢಪಟ್ಟಿದೆ. ಇದು ಗಂಭೀರ ಸೋಂಕು ಏನಲ್ಲ. ಆದರೆ ಸೋಂಕು ಹರಡುವಿಕೆ ಬಗ್ಗೆ ಎಚ್ಚರ ಅಗತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 19 ವರ್ಷದಿಂದ ದುಬೈನಲ್ಲಿ ನೆಲೆಸಿದ್ದ ವ್ಯಕ್ತಿ ಜ.17ರಂದು ಮಂಗಳೂರಿಗೆ ಆಗಮಿಸಿದ್ದರು. ಬಂದಾಗಲೇ ದದ್ದುಗಳು ಹಾಗೂ ಎರಡು ದಿನಗಳ ಜ್ವರದ ಹಿನ್ನೆಲೆ ಹೊಂದಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಕೂಡಲೇ ಐಸೊಲೇಟ್ ಮಾಡಿ ಚಿಕಿತ್ಸೆ ನೀಡಲಾಯಿತು. ಜತೆಗೆ ಮಂಕಿ ಪಾಕ್ಸ್ (ಎಂಪಾಕ್ಸ್) ಪರೀಕ್ಷೆಗೆ ಮಾದರಿಯನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಪುಣೆಯ ಎನ್‌ಐವಿಗೆ ಕಳುಹಿಸಲಾಗಿತ್ತು. ಜ.22 ರಂದು ಎನ್‌ಐವಿ ಪುಣೆಯು ಎಂಪಾಕ್ಸ್ ಖಚಿತಪಡಿಸಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಗಂಭೀರ ಲಕ್ಷಣಗಳು ಕಂಡು ಬಂದಿಲ್ಲ. ಶೀಘ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಸಹಜವಾಗಿ ಎಂಪಾಕ್ಸ್ ತನ್ನಿಂತಾನೇ ಗುಣವಾಗುವ ಕಾಯಿಲೆ. ರೋಗ ನಿರೋಧಕ ಶಕ್ತಿ ಕುಂದಿರುವ ರೋಗಿಗಳು ಅಥವಾ ದೀರ್ಘಕಾಲೀನ ಅನಾರೋಗ್ಯ ಹೊಂದಿರುವವರು ಮಾತ್ರ ಹೆಚ್ಚುವರಿ ಎಚ್ಚರಿಕೆ ಪಾಲಿಸಬೇಕು. ಜ್ವರ, ಮೈಕೈ ನೋವಿಗೆ ಚಿಕಿತ್ಸೆ ಹಾಗೂ ದದ್ದುಗಳಿಗೆ ಆ್ಯಂಟಿಬಯೋಟಿಕ್ ಪಡೆದು ಸೂಕ್ತ ಪ್ರಮಾಣದ ನೀರು ಹಾಗೂ ಪೌಷ್ಟಿಕ ಆಹಾರ, ವಿಶ್ರಾಂತಿ ಪಡೆದರೆ ಸಾಕಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ವ್ಯಕ್ತಿಯನ್ನು ಬರ ಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ 36 ವರ್ಷದ ಸೋಂಕಿತನ ಪತ್ನಿಯನ್ನು ಪ್ರಾಥಮಿಕ ಸಂಪರ್ಕಿತೆಯನ್ನಾಗಿ ಗುರುತಿಸಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ:
ಸಾರ್ವಜನಿಕರು ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸುಲಭವಾಗಿ ಸೋಂಕು ಹರಡುವುದಿಲ್ಲ. ಸೋಂಕಿತರ ತುಂಬಾ ಹತ್ತಿರದ ಸಂಪರ್ಕಿತರಿಗೆ ಮಾತ್ರ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಜ್ವರ, ದದ್ದುಗಳು, ಗಂಟಲು ನೋವಿನಂತಹ ಲಕ್ಷಣಗಳು ಇದ್ದರೆ ಹಾಗೂ ಹೈರಿಸ್ಕ್ ದೇಶಗಳಿಗೆ ಪ್ರಯಾಣಿಸಿದ ಹಿನ್ನೆಲೆ ಉಳ್ಳವರು ಹಾಗೂ ಎಂಪಾಕ್ಸ್ ಸೋಂಕಿತರ ಸಂಪರ್ಕಿತರು ಪರೀಕ್ಷೆಗೆ ಒಳಪಡಬೇಕು. ಉಳಿದವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ದೇಶದಲ್ಲಿ ಈ ಸೋಂಕು ಹೆಚ್ಚಾಗಿ ಇಲ್ಲದ ಕಾರಣ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಯಾವುದೇ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಏನಿದು ಎಂಪಾಕ್ಸ್?
ಎಂಪಾಕ್ಸ್ ಎಂಬುದು ಸಾಂಕ್ರಾಮಿಕ ಕಾಯಿಲೆ. ಸಿಡುಬು ಉಂಟು ಮಾಡುವ ಅರ್ಥೋಪಾಕ್ಸ್ ಕುಟುಂಬಕ್ಕೆ ಸೇರಿದ ಮಂಕಿಪಾಕ್ಸ್ ವೈರಸ್. ಪ್ರಾಣಾಪಾಯ ಉಂಟು ಮಾಡುವ ಗಂಭೀರ ಕಾಯಿಲೆಯಲ್ಲ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳ ಹಾಗೂ ದೀರ್ಘಕಾಲೀನ ಅನಾರೋಗ್ಯ ಪೀಡಿತರು ಎಚ್ಚರವಹಿಸಬೇಕು.
ಹೇಗೆ ಹರಡುತ್ತದೆ?
ಸೋಂಕಿತರ ನಿಕಟ ಸಂಪರ್ಕದಲ್ಲಿರುವವರಿಗೆ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಮುಖ್ಯವಾಗಿ ಸೋಂಕಿತರನ್ನು ಮುಟ್ಟುವುದು. ಅವರೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದು. ಜತೆಗೆ ಸೋಂಕಿತನ ಹತ್ತಿರ ನಿಂತಿದ್ದರೆ ಅವರ ಉಸಿರಿನ ಮೂಲಕವೂ ಬರುವ ಸಾಧ್ಯತೆಯಿರುತ್ತದೆ. ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳನ್ನು ಹೊಂದಿರುವವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಜತೆಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸೋಂಕಿತರ ಕುಟುಂಬಕ್ಕೆ ತಗಲುವ ಸಂಭವವಿರುತ್ತದೆ.
ಚಿಕಿತ್ಸೆಯೇನು?
ಮುಖ್ಯವಾಗಿ ದದ್ದುಗಳು ಹಾಗೂ ನೋವನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಲಾಗುತ್ತದೆ. ಆರಂಭದಲ್ಲೇ ಪತ್ತೆಯಾದರೆ ಲಕ್ಷಣಗಳು ಕಡಿಮೆ ಇರುತ್ತದೆ. ಹೀಗಾಗಿ ಬೇಗ ಗುಣಪಡಿಸಬಹುದು. ದದ್ದುಗಳು ಹೆಚ್ಚಾಗಿದ್ದರೆ ಆ್ಯಂಟಿಬಯೋಟಿಕ್ ಬಳಕೆ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.