ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಪುಡಿ ನೀಡುವ ಬದಲು ಸುಗಂಧಭರಿತ ಹಾಲು ನೀಡುವ ಕುರಿತಂತೆ ಶಿಕ್ಷಣ ಇಲಾಖೆ ಮತ್ತು ಬಮುಲ್ ಪ್ರಾಥಮಿಕ ಹಂತದ ಚರ್ಚೆ ನಡೆಸಿವೆ.
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಪುಡಿ ನೀಡುವ ಬದಲು ಸುಗಂಧಭರಿತ ಹಾಲು ನೀಡುವ ಕುರಿತಂತೆ ಶಿಕ್ಷಣ ಇಲಾಖೆ ಮತ್ತು ಬಮುಲ್ ಪ್ರಾಥಮಿಕ ಹಂತದ ಚರ್ಚೆ ನಡೆಸಿವೆ. ಈ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಅನುಮೋದನೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ವಿಕಾಸಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಮಂಗಳವಾರ ಈ ಕುರಿತು ಸಭೆ ನಡೆಸಿದರು. ಸಭೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲಿನ ಪುಡಿಯ ಬದಲು ಸುಗಂಧಭರಿತ ಹಾಲು ನೀಡುವ ಕುರಿತು ಡಿ.ಕೆ. ಸುರೇಶ್ ಪ್ರಸ್ತಾವನೆಯಿಟ್ಟಿದ್ದಾರೆ. ಪ್ರಾಯೋಗಿಕವಾಗಿ ಬಮೂಲ್ ವ್ಯಾಪ್ತಿಯ ಬೆಂಗಳೂರು ದಕ್ಷಿಣ (ರಾಮನಗರ), ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಸುಗಂಧಭರಿತ ಹಾಲು ವಿತರಿಸಬಹುದು. ಮಕ್ಕಳಿಗೆ ಇಷ್ಟವಾದರೆ ರಾಜ್ಯವ್ಯಾಪಿ ವಿಸ್ತರಿಸಬಹುದು ಎಂದಿದ್ದಾರೆ. ಅದಕ್ಕೆ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಚರ್ಚಿಸಿ, ಅವರಿಂದ ಅನುಮೋದನೆ ಪಡೆದು ಸುಗಂಧಭರಿತ ಹಾಲು ವಿತರಿಸುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಯಿತು.
ಪ್ರಸ್ತುತ 3 ಜಿಲ್ಲೆಯ ಶಾಲಾ ಮಕ್ಕಳಿಗೆ ನೀಡಲು ಪ್ರತಿನಿತ್ಯ ಅಂದಾಜು 250 ಟನ್ ಹಾಲಿನ ಪುಡಿ ಪೂರೈಕೆಯಾಗುತ್ತಿದೆ. ಅದರಂತೆ ಪ್ರತಿ ಮಗುವಿಗೆ ತಲಾ 200 ಗ್ರಾಂ ಹಾಲಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ನೀಡಲಾಗುತ್ತಿದೆ. ಕೆಲವೆಡೆ ಶುದ್ಧ ಕುಡಿಯುವ ನೀರು ಬಳಕೆಯಾಗದೆ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸ್ಥಿತಿಯಿದೆ. ಅಲ್ಲದೆ, ಹಾಲಿನ ಪುಡಿಯನ್ನು ಹೋಟೆಲ್, ಅಂಗಡಿಗಳಿಗೆ ಮಾರಾಟ ಮಾಡುವ ದೂರುಗಳು ಬಂದಿವೆ. ಹೀಗಾಗಿ ಹಾಲಿನ ಪುಡಿ ನೀಡುವ ಬದಲು ಸುಗಂಧಭರಿತ ಹಾಲು ನೀಡುವುದರಿಂದ ಮಕ್ಕಳು ಸೇವನೆ ಮಾಡಲು ಅನುಕೂಲವಾಗಲಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.
ತೃಪ್ತಿ ಹೆಸರಿನಲ್ಲಿ ಪೂರೈಕೆ:
ಬಮುಲ್ ಈಗಾಗಲೇ ತೃಪ್ತಿ ಹೆಸರಿನಲ್ಲಿ ಸುಗಂಧಭರಿತ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದೇ ಹಾಲನ್ನು ಶಾಲೆಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ 1, 5 ಅಥವಾ 10 ಲೀ. ಪ್ಯಾಕ್‌ನಲ್ಲಿ ಪೂರೈಕೆ ಮಾಡಬಹುದು. ಅದರಿಂದ ಕಲಬೆರಕೆಗೆ ಅವಕಾಶವೂ ಇರುವುದಿಲ್ಲ. ಅಲ್ಲದೆ, ಹಾಲಿನ ಪುಡಿಗೆ ಪಾವತಿಸುತ್ತಿರುವ ಮೊತ್ತವನ್ನೇ ಸುಗಂಧಭರಿತ ಹಾಲಿಗೆ ಸರ್ಕಾರ ಪಾವತಿಸಿದರೆ ಸಾಕು ಎಂದು ಡಿಕೆಸು ತಿಳಿಸಿದ್ದಾರೆ.