ನಾಳೆ, ನಾಡಿದ್ದು ಹಾಲು ಮಾರಾಟ ಬಂದ್‌

| N/A | Published : Jul 22 2025, 09:12 AM IST

milk

ಸಾರಾಂಶ

ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್‌ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್

ಬೆಂಗಳೂರು : ಯುಪಿಐ ಮೂಲಕ ಮಿತಿಗಿಂತ ಹೆಚ್ಚಿನ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್‌ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ ಮಾಡಲಾಗುವುದು. ಜು.25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಮಾತನಾಡಿ, ಎಲ್ಲ ಸಣ್ಣ ವ್ಯಾಪಾರಿ, ಅಂಗಡಿಗಳ ಮಾಲೀಕರು ಜು.23, 24ರಂದು ಹಾಲು, ಬೇಕರಿ ಉತ್ಪನ್ನ, ಬೀಡಿ, ಸಿಗರೇಟು ಮಾರಾಟ ಬಂದ್ ಮಾಡಲಿದ್ದಾರೆ. ಕಾರ್ಮಿಕರೂ ಕೂಡ ಕಪ್ಪುಪಟ್ಟಿ ಧರಿಸಿ ಹಾಲು, ಕಾಫಿ, ಚಹಾ, ಬೇಕರಿ ಉತ್ಪನ್ನ ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ ಎಂದರು.

‘ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿರುವ ಹಿಂದೆ ರಾಜ್ಯ, ಕೇಂದ್ರ ಸರ್ಕಾರದ ಪಾತ್ರವಿದೆ. ಡಿಜಿಟಲ್ ವಹಿವಾಟಿನ ಯಶಸ್ಸಿಗೆ ಕಾರಣರಾದ ಸಣ್ಣ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗುತ್ತಿದೆ. ಹಣ್ಣು, ತರಕಾರಿ, ಹೂವಿನ ಮಾರಾಟ ಮಾಡುವವರಿಗೆ ತೆರಿಗೆ ನೋಟಿಸ್ ನೀಡಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿ ನೋಟಿಸ್ ನೀಡಲಾಗಿದೆ. ರಾಜ್ಯದ ಬಿಜೆಪಿಗರಿಗೆ ಸಣ್ಣ ವ್ಯಾಪಾರಿಗಳ ಮೇಲೆ ಗೌರವ ಇದ್ದರೆ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ತಮಗೆ ಬೇಡ ಎಂದು ಹೇಳಿಸಲಿ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರಿಂದ ಆನ್‍ಲೈನ್ ಮೂಲಕ ಬಾಡಿಗೆ ಪಡೆಯುತ್ತಿದ್ದು, ಭವಿಷ್ಯದಲ್ಲಿ ನಮಗೂ ತೆರಿಗೆ ಪಾವತಿಸುವಂತೆ ನೋಟಿಸ್ ನೀಡುವ ಆತಂಕವಿದೆ. ಹೀಗಾಗಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ ಎಂದರು.

Read more Articles on