ಬೆಂಗಳೂರಿಗೆ ಬರಲಿದೆ ಹಾರುವ ಎಲೆಕ್ಟ್ರಿಕ್‌ ಟ್ಯಾಕ್ಸಿ - ಬೆಂಗಳೂರಿಂದ ಏರ್‌ಪೋರ್ಟ್‌ಗೆ ಐದೇ ನಿಮಿಷ

| Published : Oct 18 2024, 12:21 PM IST / Updated: Oct 18 2024, 12:22 PM IST

saudi to buy 100 air taxis
ಬೆಂಗಳೂರಿಗೆ ಬರಲಿದೆ ಹಾರುವ ಎಲೆಕ್ಟ್ರಿಕ್‌ ಟ್ಯಾಕ್ಸಿ - ಬೆಂಗಳೂರಿಂದ ಏರ್‌ಪೋರ್ಟ್‌ಗೆ ಐದೇ ನಿಮಿಷ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಸಂಚಾರ ದಟ್ಟಣೆಯಿಂದ ನರಳುತ್ತಿರುವ ಬೆಂಗಳೂರಿನ ಜನರು ನಗರದಿಂದ 40 ಕಿ.ಮೀ. ದೂರದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಇನ್ನು ಯಾತನೆ ಪಡಬೇಕಿಲ್ಲ.

ನವದೆಹಲಿ : ತೀವ್ರ ಸಂಚಾರ ದಟ್ಟಣೆಯಿಂದ ನರಳುತ್ತಿರುವ ಬೆಂಗಳೂರಿನ ಜನರು ನಗರದಿಂದ 40 ಕಿ.ಮೀ. ದೂರದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಇನ್ನು ಯಾತನೆ ಪಡಬೇಕಿಲ್ಲ. ಕೇವಲ ಐದು ನಿಮಿಷದಲ್ಲಿ ಜನರನ್ನು ಏರ್‌ಪೋರ್ಟ್‌ಗೆ ಮುಟ್ಟಿಸುವ ಎಲೆಕ್ಟ್ರಿಕ್‌ ಫ್ಲೈಯಿಂಗ್‌ ಟ್ಯಾಕ್ಸಿಯನ್ನು ಆರಂಭಿಸುವ ಪ್ರಯತ್ನವೊಂದು ಆರಂಭವಾಗಿದೆ.

ಈ ಎಲೆಕ್ಟ್ರಿಕ್‌ ಫ್ಲೈಯಿಂಗ್‌ ಟ್ಯಾಕ್ಸಿಯಲ್ಲಿ ಕುಳಿತರೆ ಇಂದಿರಾ ನಗರದಿಂದ ಏರ್‌ಪೋರ್ಟ್‌ಗೆ 5 ನಿಮಿಷದಲ್ಲಿ ತಲುಪಬಹುದು. ಜಗದ್ವಿಖ್ಯಾತ ಐಟಿ ಕಂಪನಿಗಳನ್ನು ಹೊಂದಿರುವ ಎಲೆಕ್ಟ್ರಾನಿಕ್‌ ಸಿಟಿಯಿಂದ 19 ನಿಮಿಷದಲ್ಲಿ ಸೇರಿಕೊಳ್ಳಬಹುದು. ಈ ಯಾನಕ್ಕೆ 1700 ರು. ಪಾವತಿಸಿದರೆ ಸಾಕು!

ಬೆಂಗಳೂರಿನಲ್ಲಿ ಮೊದಲ ಎಲೆಕ್ಟ್ರಿಕ್‌ ಫ್ಲೈಯಿಂಗ್ ಟ್ಯಾಕ್ಸಿ ಆರಂಭಿಸುವ ಸಂಬಂಧ ಬೆಂಗಳೂರಿನ ಸರಳಾ ಏವಿಯೇಷನ್‌ ಕಂಪನಿಯು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜತೆ ಕಳೆದ ತಿಂಗಳು ಒಡಂಬಡಿಕೆಗೆ ಸಹಿ ಹಾಕಿದೆ. ಏಳು ಆಸನಗಳನ್ನು ಹೊಂದಿರುವ ಟ್ಯಾಕ್ಸಿಗಳು ಇವಾಗಿದ್ದು, ತ್ವರಿತಗತಿಯ ಶುದ್ಧ ಹಾಗೂ ಪರಿಣಾಮಕಾರಿ ಸಾರಿಗೆ ವಿಧಾನವಾಗಿವೆ.

ಇದೀಗ ಒಡಂಬಡಿಕೆಗೆ ಎರಡೂ ಸಂಸ್ಥೆಗಳು ಸಹಿ ಹಾಕಿದ್ದರೂ ಎಲೆಕ್ಟ್ರಿಕ್‌ ಫ್ಲೈಯಿಂಗ್ ಟ್ಯಾಕ್ಸಿ ಬೆಂಗಳೂರಿನಲ್ಲಿ ಹಾರಾಟ ಆರಂಭಿಸಲು 2ರಿಂದ 3 ವರ್ಷಗಳಾದರೂ ಬೇಕಾಗುತ್ತವೆ. ಸರ್ಕಾರದಿಂದ ಸಾಕಷ್ಟು ಅನುಮತಿಗಳನ್ನು ಪಡೆಯಬೇಕಾಗಿರುವುದು ಇದಕ್ಕೆ ಕಾರಣ.

ಬೆಂಗಳೂರು ಮಾತ್ರವಲ್ಲದೇ ಸಂಚಾರ ದಟ್ಟಣೆಯಿಂದ ಕೂಡಿರುವ ಮುಂಬೈ, ದೆಹಲಿ, ಪುಣೆಯಲ್ಲಿ ಎಲೆಕ್ಟ್ರಿಕ್‌ ಫ್ಲೈಯಿಂಗ್‌ ಟ್ಯಾಕ್ಸಿ ಆರಂಭಿಸುವುದು ಸರಳಾ ಏವಿಯೇಷನ್‌ ಉದ್ದೇಶವಾಗಿದೆ.

ಉದ್ಯಮಿಗಳು ಏರ್‌ಪೋರ್ಟ್‌ ತಲುಪಲು ವಿಳಂಬವಾಗುತ್ತಿದ್ದ ಕಾರಣ ಕಂಪನಿಯೊಂದು ಈ ಹಿಂದೆ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್‌ ಸೇವೆ ಆರಂಭಿಸಿತ್ತು. ಅದಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್‌ ಫ್ಲೈಯಿಂಗ್‌ ಟ್ಯಾಕ್ಸಿ ಅಗ್ಗವಿದೆ.