ಜೇನುಸಾಕಾಣಿಕೆಗೆ ಅರಣ್ಯ ಝೇಂಕಾರ, ಮಕ್ಕಳಲ್ಲಿ ಪರಿಸರ ಅರಿವು ಮೂಡಿಸಲು ಸ್ವರ ವರ್ಣ, ಮಕ್ಕಳಿಗೆ ಕಾಡು ಪರಿಚಯಿಸಲು ಮರಳಿ ಮನೆಗೆ, ಅರಣ್ಯ ಬಗ್ಗೆ ಜಾಗೃತಿಗೆ ಕಿಡ್‌ ಫಾರೆಸ್ಟರ್‌ ಶಿಬಿರ ಆಯೋಜನೆ.-ಮ್ಯೂಸಿಯಂ ಮಾದರಿಯಲ್ಲಿ ಸ್ವಯಂ ಕೇಂದ್ರ ಅಭಿವೃದ್ಧಿ-ಲೈಬ್ರರಿ, ಸಂಗೀತ ಉಪಕರಣಗಳು ಇಲ್ಲಿ ಉಂಟು

ವಿನೋದ್ ಕುಮಾರ್ ಬಿ.ನಾಯ್ಕ್

ಕರ್ನಾಟಕ ಅರಣ್ಯ ಇಲಾಖೆಯು ಕಾಡು ಕಾಯುವ ಕಾಯಕದ ಜತೆಗೆ ಕಾಡಂಚಿನ ಗ್ರಾಮಗಳ ಜನರೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಹೊಂದಲು ಆರಂಭಿಸಿದೆ. ಕಾಡಂಚಿನ ಗ್ರಾಮಗಳ ಜನರೇ ನಿಜವಾದ ಕಾಡಿನ ಸಂರಕ್ಷಕರು. ಸ್ಥಳೀಯ ಸಮುದಾಯಗಳ ಸಹಕಾರವಿಲ್ಲವೇ ಅರಣ್ಯ ಸಂರಕ್ಷಣೆ ಅಸಾಧ್ಯ ಎನ್ನುವುದನ್ನು ಮನಗಂಡು ಕಾಡಿನ ಅಕ್ಕಪಕ್ಕದ ಜನರ ಕಲ್ಯಾಣಕ್ಕಾಗಿ ಅನೇಕ ವಿಶಿಷ್ಟ ಹೆಜ್ಜೆಗಳನ್ನು ಇಡಲಾರಂಭಿಸಿದೆ. ಈ ನಿಟ್ಟಿನಲ್ಲಿ

ಅರಣ್ಯ ಇಲಾಖೆಯು ಎಕೊ ಡೆವಲಪ್‌ಮೆಂಟ್‌ ಕಮಿಟಿ ಮತ್ತು ಗ್ರಾಮ ಅರಣ್ಯ ಸಮಿತಿಗಳನ್ನು ಸದೃಢಗೊಳಿಸುತ್ತಿದೆ.

ಎಕೊ ಡೆವಲಪ್‌ಮೆಂಟ್‌ ಕಮಿಟಿಗಳ ಮೂಲಕ ಗ್ರಾಮ ಪಂಚಾಯ್ತಿಗಳ ಜೊತೆ ಕೈ ಜೋಡಿಸಿರುವ ಅರಣ್ಯ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕಾಟೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕುಂಬಾರವಾಡಾ ಎನ್ನುವ ಊರಿನಲ್ಲಿ ಮೌನ ಕ್ರಾಂತಿಗೆ ಮುನ್ನುಡಿ ಬರೆದಿದೆ. ಈ ಗ್ರಾಮದಲ್ಲಿ “ಸ್ವಯಂ-ಪರಿಸರ ಅಭಿವೃದ್ಧಿ ಮತ್ತು ಪ್ರಕೃತಿ ಶಿಕ್ಷಣ ಕೇಂದ್ರ” ಎನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಿ ಕಾಡಂಚಿನ ಗ್ರಾಮಗಳ ಮಕ್ಕಳು ಮತ್ತು ಮಹಿಳೆಯರನ್ನೊಳಗೊಂಡು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಕೆಲಸ ಮಾಡಲಾರಂಭಿಸಿದೆ.

ಸ್ವಯಂ (Saving Wildlife in Association with Young Aspiring Minds- Eco-development and Nature Education Centre) ಎನ್ನುವ ಪರಿಸರ ಅಭಿವೃದ್ಧಿ ಮತ್ತು ಪ್ರಕೃತಿ ಶಿಕ್ಷಣ ಕೇಂದ್ರವನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕಾಟೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಬಾರವಾಡಾ ಗ್ರಾಮದಲ್ಲಿ 2023 ರ ಮಾರ್ಚ್‌ 24 ರಂದು ದಾಂಡೇಲಿ-ಅಣಶಿ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಮೂಲಕ ಸ್ಥಾಪಿಸಲಾಯಿತು. ಸ್ಥಳೀಯರ ಜೊತೆ ಕೈಜೋಡಿಸಿ ಕಾಡಿನ ಸಂರಕ್ಷಣೆ ಮಾಡುವ ಸಂಕಲ್ಪದೊಂದಿಗೆ ಶುರುವಾದ ಈ ಕೇಂದ್ರ ಇದೀಗ ನೂರಾರು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ನವ ಉದ್ಯೋಗಿಗಳನ್ನು ತಲುಪಿದೆ.

ಶತಮಾನಕ್ಕಿಂತ ಹಳೆಯದಾದ, ಆದರೆ, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ವಸತಿಗೃಹವೊಂದನ್ನು ತನ್ನ ಸುಪರ್ದಿಗೆ ಪಡೆದ ಅರಣ್ಯ ಇಲಾಖೆ ಆ ಕಟ್ಟಡವನ್ನು ಈಗ ಅತ್ಯಂತ ಸುಂದರವಾಗಿ ಮರು ವಿನ್ಯಾಸಗೊಳಿಸದ್ದಲ್ಲದೇ, ಅದರ ಆವರಣವನ್ನು ಮ್ಯೂಸಿಯಂ ಮಾದರಿಯಲ್ಲಿ ಸಿದ್ದಪಡಿಸಿದೆ. ಅಷ್ಟೇ ಅಲ್ಲ, ಅದನ್ನೊಂದು ಸದಾ ಕ್ರಿಯಾಶೀಲ ಕಟ್ಟಡವನ್ನಾಗಿ ಬಳಸಿಕೊಳ್ಳುತ್ತಿದೆ.

ಅಡವಿ ಝೇಂಕಾರ, ನಾರಿನ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ, ಮರಳಿ ಮನೆಗೆ, ಸ್ವರ-ವರ್ಣ ಕಾರ್ಯಕ್ರಮ ಮತ್ತು ಡಿಜಿಟಲ್‌ ಶಿಕ್ಷಣ ಕಾರ್ಯಕ್ರಮಗಳನ್ನು ಇಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಅಡವಿ ಝೇಂಕಾರ ಕಾರ್ಯಕ್ರಮದ ಮೂಲಕ ಸ್ಥಳೀಯರಿಗೆ ಜೇನು ಸಾಕಾಣಿಕೆ ಬಗ್ಗೆ ಅತ್ಯಂತ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಜನರಿಗೆ ಬೇಕಾಗುವ ಜೇನು ಪೆಟ್ಟಿಗೆಗಳು, ಜೇನು ಮಾರಾಟಕ್ಕೆ ಅಗತ್ಯವಾದ ಬ್ರ್ಯಾಂಡಿಂಗ್‌ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಸಹ ಒದಗಿಸಿಕೊಡಲಾಗುತ್ತಿದೆ.

ಕರ್ನಾಟಕ ನಾರು ಅಭಿವೃದ್ಧಿ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸ್ವಯಂ, ಸ್ಥಳೀಯ ಮಹಿಳೆಯರು ನಿತ್ಯದ ಕೂಲಿ ಕೆಲಸಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು, ಸ್ಥಳೀಯವಾಗಿ ತೆಂಗಿನ ನಾರು ಬಳಸಿ ನಾನಾ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಕೇಂದ್ರವನ್ನು ಆರಂಭಿಸಿದೆ. ಮಹಿಳಾ ಸ್ವ ಸಹಾಯ ಸಂಘ ರಚಿಸಿಕೊಂಡು ಈಗಾಗಲೇ ನಾರಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಘಟಕದ ಯಶಸ್ಸಿನಿಂದ ಉತ್ತೇಜನಗೊಂಡು ಇದೀಗ ಕ್ಯಾಸಲ್‌ ರಾಕ್‌ ವಲಯದಲ್ಲೂ ಇದೇ ಮಾದರಿಯ ನಾರಿನ ಉತ್ಪಾದನಾ ಘಟಕವನ್ನು ಆರಂಭಿಸಲಾಗುತ್ತಿದೆ. ಇವೆಲ್ಲದರ ಲಾಭ ನೇರವಾಗಿ ಸ್ಥಳೀಯರಿಗೆ ಸಿಗುತ್ತಿದೆ.

ಮಕ್ಕಳು ಮತ್ತು ಸ್ಥಳೀಯ ಜನರಲ್ಲಿ ಪ್ರಕೃತಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸ್ವರ-ವರ್ಣ ಎನ್ನುವ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ವಾರ ಇಲ್ಲಿ ಚಿತ್ರಕಲೆ ಮತ್ತು ಸಂಗೀತ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಸಂಗೀತ ಮತ್ತು ಚಿತ್ರಕಲೆಯ ಮೂಲಕ ಸ್ಥಳೀಯರಲ್ಲಿ ಹುದುಗಿರುವ ಪ್ರಕೃತಿಯನ್ನು ಆರಾಧಿಸುವ ಮನೋಭಾವವನ್ನು ಇನ್ನಷ್ಟು ಉದ್ದೀಪನಗೊಳಿಸಲಾಗುತ್ತಿದೆ. ಪ್ರತಿ ವರ್ಷ ಒಂದು ನೂರು ಮಕ್ಕಳು ಮತ್ತು ವಯಸ್ಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದುವರೆಗೂ ಸುಮಾರು 400 ಜನರಿಗೆ ಇಲ್ಲಿ ಸಂಗೀತ ಮತ್ತು ಚಿತ್ರಕಲೆ ತರಬೇತಿ ನೀಡಲಾಗಿದೆ.

ಮರಳಿ ಮನೆಗೆ ಎನ್ನುವ ಯೋಜನೆಯಂತೂ ಅತ್ಯಂತ ವಿಶಿಷ್ಟವಾಗಿದೆ. ಅಕ್ಕಪಕ್ಕದ ತಾಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ವಾರಾಂತ್ಯ, ಮಾಸಾಂತ್ಯ ಅಥವಾ ರಜಾ ದಿನಗಳಲ್ಲಿ ಅವರಿಗೆ ಉಚಿತವಾಗಿ ವಾಹನಗಳಲ್ಲಿ ಮನೆಗೆ ಕರೆದುಕೊಂಡು ಬರಲಾಗುತ್ತದೆ. ಹಾಸ್ಟೆಲ್‌ ವಾತಾವರಣದಿಂದ ಮನೆಗೆ ಬರುವ ಮಕ್ಕಳು ಭಾವನಾತ್ಮಕವಾಗಿ ಮನೆಯವರೊಂದಿಗೆ ಉತ್ತಮ ಸಮಯ ಕಳೆದು ಮರಳಿ ಶಾಲೆಗೆ ಹೋದಮೇಲೆ ಇನ್ನಷ್ಟು ಉತ್ಸಾಹಭರಿತ ಹಾಗೂ ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತಾರೆ. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಮಣಿಪಾಲ್‌ ಫೌಂಡೇಶನ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸ್ವಯಂ ಸಂಸ್ಥೆಯು, 9 ಮತ್ತು 10ನೇ ತರಗತಿಯಿಂದ ಹಿಡಿದು ವೃತ್ತಿಪರ ಕೋರ್ಸುಗಳ ತರಬೇತಿಯವರೆಗೆ ಎಲ್ಲ ಹೆಚ್ಚುವರಿ ಕ್ಲಾಸುಗಳನ್ನು ಡಿಜಿಟಿಲ್‌ ಮೂಲಕ ನೀಡಲಾರಂಭಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಡಿಜಿಟಲ್‌ ತಂತಜ್ಞಾನದ ಅರಿವಿನ ಕಂದಕವನ್ನು ಕಡಿಮೆ ಮಾಡುತ್ತಿದೆ. ಇದಲ್ಲದೇ, ಕಿಡ್‌ ಫಾರೆಸ್ಟರ್‌ ಎನ್ನುವ ಹೊಸ ಪ್ರಕೃತಿ ಶಿಬಿರವನ್ನೂ ಪ್ರತಿ ವರ್ಷ ಆಯೋಜಿಸುತ್ತಿದ್ದು, ಆ ಮೂಲಕ ನಗರ ಪ್ರದೇಶಗಳ ಮಕ್ಕಳಿಗೆ ಪರಿಸರ ಶಿಕ್ಷಣವನ್ನು ನೀಡಲಾಗುತ್ತಿದೆ.

ಅತ್ಯಾಧುನಿಕ ಲೈಬ್ರರಿ ಸಹ ಇದೆ

ಸ್ವಯಂ ಕೇಂದ್ರದಲ್ಲಿ ಸಂಗೀತ ಉಪಕರಣಗಳು ಮಾತ್ರವಲ್ಲ, ಅತ್ಯಾಧುನಿಕ ಲೈಬ್ರರಿ ಸಹ ಇದೆ. ಇಲ್ಲಿ ಮಕ್ಕಳಷ್ಟೇ ಅಲ್ಲ, ಊರಿನ ಹಿರಿಯರು, ಉದ್ಯೋಗಿಗಳು ಸಹ ಬಂದು ಜ್ಞಾನಾರ್ಜನೆ ಮಾಡಿಕೊಳ್ಳಬಹುದು. ಕೆಲವೇ ವರ್ಷಗಳಲ್ಲಿ ಅತಿ ಕ್ರಿಯಾಶೀಲ ಕೇಂದ್ರವಾಗಿ ಹೊರಹೊಮ್ಮಿರುವ ಸ್ವಯಂ, ತನ್ನಲ್ಲಿಗೆ ಬರುವ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡುವ ಮುನ್ನ ತಾನೂ ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಅತ್ಯುತ್ತಮ ಮಾದರಿಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಇಲ್ಲಿ ಅಳವಡಿಸಿಕೊಂಡಿದೆ. ಆದ್ದರಿಂದಲೇ ಇದು ಅತ್ಯಂತ ಫಲಪ್ರದವಾದ ಯೋಜನೆ ಮತ್ತು ಕೇಂದ್ರವಾಗಿ ಹೊರಹೊಮ್ಮಿದೆ.