ಚಿಕ್ಕಮಗಳೂರುರೈತರು ಹೊಸ ಒತ್ತುವರಿ ಮಾಡಬಾರದು. ಆದರೆ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ, ನೋಟಿಸ್ ನೀಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.

ಬಾಳೆಹೊನ್ನೂರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆ ವಿರೋಧಿಸಿ ನಡೆದ ರೈತರ ಸಭೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರೈತರು ಹೊಸ ಒತ್ತುವರಿ ಮಾಡಬಾರದು. ಆದರೆ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ, ನೋಟಿಸ್ ನೀಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.ಬಾಳೆಹೊನ್ನೂರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆ ವಿರೋಧಿಸಿ ಶನಿವಾರ ನಡೆದ ರೈತರ ಸಭೆ ಉದ್ಘಾಟಿಸಿ ಮಾತನಾಡಿದರು, ಬಾಳೆಹೊನ್ನೂರಿನೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಇಲ್ಲಿಗೆ ಬಂದ ತಕ್ಷಣ ರಂಭಾಪುರಿ ಪೀಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.ಮಲೆನಾಡಿನ ಜನ ಹಲವು ಸಮಸ್ಯೆ ಎದುರಿಸುತ್ತಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ಸ್ಥಳೀಯ ವಾಸ್ತವಾಂಶ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕೇರಳ ಮಾದರಿ ಸೇರಿದಂತೆ ವಿವಿಧ ಸಲಹೆ ಬಂದಿದೆ. ಉನ್ನತ ಮಟ್ಟದ ಸಮಿತಿಯಲ್ಲೂ ಚರ್ಚಿಸಲಾಗುವುದು ಎಂದು ಹೇಳಿದರು.ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ಹಕ್ಕು ಸೇರಿದಂತೆ ಹಲವು ಅರ್ಜಿಗಳು ಬಾಕಿ ಉಳಿದಿವೆ. ಕಂದಾಯ ಮತ್ತು ಅರಣ್ಯ ಇಲಾಖೆ ವ್ಯಾಪ್ತಿ ಸಮಸ್ಯೆ ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಕಾಯ್ದೆ ತಿದ್ದುಪಡಿ ಕುರಿತು ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರವಾಗಿ ನಿಲ್ಲುತ್ತೇನೆ ಎಂದರು.ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಕುರಿತು ಗ್ರೌಂಡ್‌ ಟ್ರೂತ್‌ ಸರ್ವೆ ನಡೆಯುತ್ತಿದೆ. ಬರಗಾಲದ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಮಳೆಗಾಗಿ ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವಂತೆ ಶಾಸಕ ಟಿ.ಡಿ.ರಾಜೇಗೌಡರಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ತಾವೂ ಕಿಗ್ಗಾಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.ಉದ್ಯೋಗ, ಉದ್ಯಮ ಮತ್ತು ಕೈಗಾರಿಕೆಗಳ ಕೊರತೆ ನೀಗಿಸಿ ಬಂಡವಾಳ ಆಕರ್ಷಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ರೂಪಿಸಲಾಗಿದೆ. ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ ಮತ್ತು ವಲಸೆ ತಡೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಜನರ ಅಹವಾಲು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಲ್ಲಿ 2 ದಿನ ಕಾರ್ಯಕ್ರಮ ನಡೆಸಬೇಕು. ಶಾಸಕರು ಗ್ರಾಪಂ ಮಟ್ಟದಲ್ಲಿ ಅಹವಾಲು ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದ 20 ಸಾವಿರ ಚದರ ಕಿ.ಮೀ.ಗೂ ಅಧಿಕ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ವ್ಯಾಪ್ತಿಯಲ್ಲಿದೆ. ಇದರಲ್ಲಿ 16 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಳಿದ ಸುಮಾರು 4 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 1,400ಕ್ಕೂ ಹೆಚ್ಚು ಹಳ್ಳಿಗಳಿವೆ. ಈ ಹಿಂದೆ ಹೊರಡಿಸಿದ್ದ ಆರು ಅಧಿಸೂಚನೆಗಳನ್ನು ತಿರಸ್ಕರಿಸಲಾಗಿದೆ. ಇದೀಗ 7ನೇ ಅಧಿಸೂಚನೆ ಬಂದಿದೆ. ಇದೇ ಅಂತಿಮ ಅಧಿಸೂಚನೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ರೈತರು ಹಾಗೂ ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಭದ್ರಾ ಅಭಯಾರಣ್ಯ, ಭದ್ರಾ ಜಲಾಶಯ ಸೇರಿದಂತೆ ವಿವಿಧ ಯೋಜನೆಗಳಿಗೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇದುವರೆಗೆ ಪರ್ಯಾಯ ಭೂಮಿ ನೀಡಲು ಸಾಧ್ಯವಾಗಿಲ್ಲ. ಇದೀಗ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿನ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ ಎಂದರು.ಶಾಸಕಿ ನಯನಾ ಮೊಟಮ್ಮ ಮಾತನಾಡಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಕಾಫಿ ತೋಟಗಳಿವೆ. ಇತ್ತೀಚಿನ ವರ್ಷ ಗಳಲ್ಲಿ ಅರಣ್ಯ ಇಲಾಖೆ ನಿಯಮಗಳು, ಮಾನವ–ವನ್ಯಜೀವಿ ಸಂಘರ್ಷ ಸೇರಿದಂತೆ ಹಲವು ಕಾರಣಗಳಿಂದ ಕಾಫಿ ಬೆಳೆ ಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಕಸ್ತೂರಿರಂಗನ್ ವರದಿ ಮಲೆನಾಡಿನ ಜನರ ಬದುಕಿನ ಮೇಲೆ ಮತ್ತೊಂದು ಆತಂಕ ತಂದಿದೆ. ವರದಿ ಯಥಾವತ್ತಾಗಿ ಜಾರಿಯಾದರೆ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕಾಡು ಮತ್ತು ನಾಡನ್ನು ವೈಜ್ಞಾನಿಕವಾಗಿ ಪ್ರತ್ಯೇಕಿಸುವ ಅಗತ್ಯವಿದೆ. ಕೇರಳದಲ್ಲಿ ವೈಜ್ಞಾನಿಕ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿದ ಪರಿಣಾಮ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯಿಂದ ಹೊರಗಿಡಲು ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕ ದಲ್ಲೂ ತಜ್ಞರ ಸಮಿತಿ ಮೂಲಕ ವೈಜ್ಞಾನಿಕ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಬೇಕು. ಇದರಿಂದ ರಾಜ್ಯದ ಸಂಸದರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿದೆ ಎಂದರು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಕೆ.ಎಸ್. ಆನಂದ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ, ಎಚ್.ಪಿ.ಮಂಜೇಗೌಡ, ಡಾ.ಕೆ.ಪಿ. ಅಂಶುಮಂತ್, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮತ್ತಿತರರು ಇದ್ದರು... ಬಾಕ್ಸ್......

ಉನ್ನತ ಮಟ್ಟದ ಸಮಿತಿ ರಚಿಸಿ

ಪರಿಸರ ಸೂಕ್ಷ್ಮ ಕರಡು ಅಧಿಸೂಚನೆ ಸಮಸ್ಯೆಯಿಂದ ರೈತರನ್ನು ರಕ್ಷಿಸಲು ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಉತ್ಕೃಷ್ಟ ವಾದ ಸಮಿತಿ ರಚನೆ ಮಾಡಿ ಅವರಿಂದ ವರದಿ ಪಡೆಯಬೇಕು. ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದಲ್ಲಿ ರಾಜ್ಯದ ರೈತರನ್ನು ಉಳಿಸಲು ಸಾಧ್ಯವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಿಎಂಗೆ ಸಲಹೆ ನೀಡಿದರು.

ವರದಿ ತಯಾರಿಸಲು ಅರ್ಹರಾದ ತಜ್ಞರನ್ನೇ ನಿಯೋಜಿಸಬೇಕು. ಕಾಡು ಹಾಗೂ ನಾಡನ್ನು ಪ್ರತ್ಯೇಕವಾಗಿ ವರ್ಗೀಕರಿಸ ಬೇಕು. ಅದನ್ನು ಬಿಟ್ಟು ಕೇವಲ ಪರಿಸರಕ್ಕೆ ಸಂಬಂಧಿಸಿದ ವರದಿ ನೀಡಿದರೂ ಜನರಿಗೆ ಸಮಸ್ಯೆಯಾಗಲಿದೆ. ವೈಜ್ಞಾನಿಕ ವರದಿ ಕೇಂದ್ರಕ್ಕೆ ಸಲ್ಲಿಕೆಯಾದಲ್ಲಿ ರಾಜ್ಯದಿಂದ ಆಯ್ಕೆಯಾದ ಸಂಸದರು ಈ ಬಗ್ಗೆ ಸಂಸತ್ ನಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತುವುದಾಗಿ ತಿಳಿಸಿದರು....ಬಾಕ್ಸ್.....

ಅಧಿಕಾರ ತ್ಯಾಗಕ್ಕೂ ಸಿದ್ಧ

ಕಸ್ತೂರಿ ರಂಗನ್ ವರದಿ ಯಥಾವತ್‌ ಜಾರಿಯಾದಲ್ಲಿ ಮಲೆನಾಡಿನ ಜನರ ಬದುಕು ದುಸ್ತರವಾಗಲಿದೆ. ಒಂದು ವೇಳೆ ಇಂಥ ಸ್ಥಿತಿ ಬಂದಿದ್ದೆ ಆದಲ್ಲಿ ತಾವು ಅಧಿಕಾರ ತ್ಯಾಗಕ್ಕೂ ಸಿದ್ಧರಿರುವುದಾಗಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ಮಲೆನಾಡಿನ ಜನರ ಸಮಸ್ಯೆ ಪರಿಹರಿಸುವ ಸಂಬಂಧ ಸಿಎಂ ದೆಹಲಿಯಲ್ಲಿ ರಾಜ್ಯದ ಸಂಸದರು ಹಾಗೂ ತಜ್ಞರ ಸಭೆ ನಡೆಸಬೇಕು. ಜೊತೆಗೆ ಮಲೆನಾಡು ಭಾಗದ ಸಂಸದರು ಸಂಸತ್ತಿನಲ್ಲಿ ಇಲ್ಲಿನ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.