ರಾಜ್ಯದ ನಾಲ್ವರು ಹೈಕೋರ್ಟ್‌ ನ್ಯಾಯಾಧೀಶರ ವರ್ಗಾವಣೆ

| N/A | Published : May 02 2025, 11:05 AM IST

karnataka highcourt

ಸಾರಾಂಶ

ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಸೇರಿ ನಾಲ್ವರು ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ವರ್ಗಾಯಿಸಿ ಕೇಂದ್ರ ಸರ್ಕಾರ  ಆದೇಶ

 ಬೆಂಗಳೂರು :  ವಕೀಲರ ತೀವ್ರ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್‌ ಕೊಲಿಜಿಯಂ ತೀರ್ಮಾನದಂತೆ ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಸೇರಿ ನಾಲ್ವರು ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ವರ್ಗಾಯಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸಿನಂತೆ, ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌ ಅವರನ್ನು ಒಡಿಶಾ, ನ್ಯಾ.ಕೆ.ನಟರಾಜನ್‌ ಅವರನ್ನು ಕೇರಳ, ನ್ಯಾ.ಎನ್‌.ಎಸ್‌.ಸಂಜಯ್‌ ಗೌಡ ಅವರನ್ನು ಗುಜರಾತ್‌ ಮತ್ತು ನ್ಯಾ.ಹೇಮಂತ್‌ ಚಂದನಗೌಡರ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾಯಿಸಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್‌ನ ಈ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ಸುಪ್ರೀಂ ಕೋರ್ಟ್‌ ಏ.15 ಮತ್ತು ಏ.19ರಂದು ಶಿಫಾರಸು ಮಾಡಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಮತ್ತು ಬೆಂಗಳೂರು ವಕೀಲರ ಸಂಘ, ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದವು. ಜತೆಗೆ ಕೇಂದ್ರ ಸಚಿವರು ಮತ್ತು ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿ ವರ್ಗಾವಣೆ ತಡೆಹಿಡಿಯಲು ಕೋರಿದ್ದವು.