ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ಜಿಲ್ಲೆಯ 15 ಒಬಿಸಿ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದ ಜತೆಗೆ ನೀಟ್‌, ಸಿಇಟಿ, ಜೆಇಇ ಪರೀಕ್ಷಾ ಪೂರ್ವ ತರಬೇತಿ ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ಜಿಲ್ಲೆಯ 15 ಒಬಿಸಿ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದ ಜತೆಗೆ ನೀಟ್‌, ಸಿಇಟಿ, ಜೆಇಇ ಪರೀಕ್ಷಾ ಪೂರ್ವ ತರಬೇತಿ ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಈ ಯೋಜನೆ ಪ್ರಾರಂಭಿಸಲಾಗುತ್ತಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, 10ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಪ್ರತಿ ಜಿಲ್ಲೆಗೆ 15 ಮಂದಿಯಂತೆ ಆಯ್ಕೆ ಮಾಡಲಾಗುತ್ತದೆ. ಒಟ್ಟು 500 ಮಂದಿಗೆ 15 ಕೋಟಿ ರು. ವೆಚ್ಚದಲ್ಲಿ 2 ವರ್ಷ ವಸತಿ ಸಹಿತ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಶಿಕ್ಷಣದ ಜತೆಗೆ ನೀಟ್‌, ಜೆಇಇ ಪರೀಕ್ಷಾ ಪೂರ್ವ ತರಬೇತಿ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಇತರೆ ತೀರ್ಮಾನಗಳು:

ರಾಯಚೂರು ಜಿಲ್ಲೆ ರಾಯಚೂರು ಮತ್ತು ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಡಿ ಬರುವ ವಿತರಣಾ ಕಾಲುವೆ 102 ಹಾಗೂ 102-ಎ ಅಚ್ಚುಕಟ್ಟು ಪ್ರದೇಶದಲ್ಲಿ 8,320 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 182 ಕೋಟಿ ರು. ವೆಚ್ಚದ ಮಟಮಾರಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಾರವಾರ ಬಂದರಿನ ತೈಲ ಸೋರಿಕೆ ತುರ್ತು ನಿರ್ವಹಣಾ ಯೋಜನೆ ಅನ್ವಯ 13 ಕೋಟಿ ರು. ವೆಚ್ಚದಲ್ಲಿ ತೈಲ ಸೋರಿಕೆ ಪ್ರತಿಕ್ರಿಯೆ ಉಪಕರಣಗಳನ್ನು ಖರೀದಿ ಮಾಡುವುದು.

ಜತೆಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 100 ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಕೋರಮಂಡಲ್‌ ಶುಗರ್ಸ್‌ ಲಿಮಿಟೆಡ್‌ ಅವರಿಗೆ ಮಂಜೂರಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ 100 ಎಕರೆ ಜಮೀನನ್ನು ಚಾಮುಂಡೇಶ್ವರಿ ಶುಗರ್ಸ್‌ ಲಿಮಿಟೆಡ್‌ ಸಮೂಹದ ಹೇಮಗಿರಿ ಶುಗರ್ಸ್‌ ಹಾಗೂ ರಿನ್ಯೂವೇಬಲ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮಾರಾಟ ಮಾಡಲು ಒಪ್ಪಿಗೆ ನೀಡಲಾಯಿತು.

ಮನೆ ಕೆಲಸಗಾರರ ಕಲ್ಯಾಣಕ್ಕೆ ಬಿಲ್‌ ಚರ್ಚೆ:

ಮನೆ ಕೆಲಸ ಮಾಡುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಟಿಪ್ಪಣಿ, ಭದ್ರತೆ ಮತ್ತು ಕಲ್ಯಾಣ ವಿಧೇಯಕಕ್ಕೆ ಇನ್ನೂ ಹೆಚ್ಚಿನ ವಿವರ ಬಯಸಿ ಮುಂದೂಡಲಾಗಿದೆ.

ಐಎಎಸ್‌ ಬಡ್ತಿ ವಿಷಯ ಮುಂದೂಡಿಕೆ

ಎನ್‌.ಸುಶೀಲಮ್ಮ, ಚನ್ನಪ್ಪ, ಸೀಮಾನಾಯಕ್‌, ಎಚ್.ಆರ್‌.ಶಿವಕುಮಾರ್‌ ಅವರಿಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ನೀಡುವ ಬಗ್ಗೆ ಚರ್ಚಿಸಲಾಯಿತು. ಕೆಲ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ನಡೆಸಲು ವಿಷಯ ಮುಂದೂಡಲಾಗಿದೆ.