ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಸಲಹೆ ನೀಡಿದರು

ತಾಲೂಕಿನ ತಂಬ್ರಹಳ್ಳಿಯ ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ನಿಮ್ಮ ಕುಟುಂಬ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ನಿಮ್ಮಲ್ಲಿನ ನಾಯಕತ್ವ ಗುಣಗಳು ಪೂರಕವಾಗುತ್ತವೆ. ಬಾಲ್ಯದಲ್ಲಿಯೇ ನಾಯಕತ್ವ, ಶಿಸ್ತು ಮತ್ತು ಹೊಣೆಗಾರಿಕೆಯ ಗುಣಗಳನ್ನು ಬೆಳೆಸಿಕೊಂಡು ನೀವೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗಿ ಹಾಗೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.

ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಇಂತಹ ಮೌಲ್ಯಾಧಾರಿತ ವಿಷಯಗಳನ್ನು ಅಳವಡಿಸುವುದು ಶ್ಲಾಘನೀಯವಾಗಿದೆ. ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಉಪನ್ಯಾಸ ನೀಡುತ್ತಿರುವುದು ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ನಂತರ ಮಕ್ಕಳಿಗೆ ನಾಯಕತ್ವದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶೇಷ ಚಟುವಟಿಕೆ ಆಯೋಜಿಸಲಾಯಿತು. ಮಕ್ಕಳನ್ನು ನಾಲ್ಕು ತಂಡಗಳಾಗಿ ವಿಭಜಿಸಿ “ಬಲೂನ್ ಪಿರಮಿಡ್” ನಿರ್ಮಿಸುವ ಕಾರ್ಯ ನೀಡಲಾಯಿತು. ಇದರಲ್ಲಿ ಉತ್ತಮ ನಾಯಕತ್ವ ಮತ್ತು ಸಹಕಾರ ಹೊಂದಿದ್ದ ತಂಡಗಳು ಯಶಸ್ವಿಯಾಗಿ ಪಿರಮಿಡ್ ನಿರ್ಮಿಸಲು ಸಾಧ್ಯವಾಯಿತು. ಈ ಮೂಲಕ ತಂಡದ ಕೆಲಸ, ಸಹಕಾರ ಹಾಗೂ ನಾಯಕತ್ವದ ಮಹತ್ವವನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.


ಗ್ರಂಥಾಲಯ ಮೇಲ್ವಿಚಾರಕರಾದ ಟಿ. ಪಾಂಡುರಂಗಪ್ಪ ಮಾತನಾಡಿ, ಶಿಬಿರದಲ್ಲಿ ಪ್ರತಿದಿನ ಸುಮಾರು 45ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.