ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ. ಬದಲಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರವೇ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ. ಬದಲಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರವೇ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ ಮೊದಲ ಬಾರಿಗೆ ಈ ಬಾರಿ ಫಲಿತಾಂಶ ದಿನದಂದೇ ವಿದ್ಯಾರ್ಥಿಗಳಿಗೆ ಡಿಜಿಲಾಕರ್ ಮೂಲಕವೂ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಅದರ ಜೊತೆಗೆ ಈ ವರ್ಷದ ಮಟ್ಟಿಗೆ ಮುದ್ರಿತ ಅಂಕಪಟ್ಟಿಯನ್ನೂ ನೀಡಲಾಗುವುದು. ಆದರೆ, ಮುಂದಿನ ಸಾಲಿನಿಂದ ಸಂಪೂರ್ಣ ಡಿಜಿಟಲ್ ಅಂಕಪಟ್ಟಿಯನ್ನು ಮಾತ್ರ ನೀಡಲಾಗುವುದು. ಇದರಿಂದ ಸರ್ಕಾರಕ್ಕೆ ಒಂದಷ್ಟು ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು.
ಎಲ್ಲರಿಗೂ ಧನ್ಯವಾದ
ಐತಿಹಾಸಿಕ ಫಲಿತಾಂಶ ಬರಲು ಕಷ್ಟಪಟ್ಟು ವ್ಯಾಸಂಗ ಮಾಡಿದ ಎಲ್ಲಾ ವಿದ್ಯಾರ್ಥಿಗಳು, ಅವರಿಗೆ ಸಹಕಾರ ನೀಡಿದ ಶಿಕ್ಷಕರು, ಪೊಷಕರು ಹಾಗೂ ನಮ್ಮ ಮಂಡಳಿ ಅಧಿಕಾರಿಗಳು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಫಲಿತಾಂಶ ಇನ್ನಷ್ಟು ಉತ್ತಮಗೊಳ್ಳುತ್ತಾ ಹೋಗುವ ಸಂಪೂರ್ಣ ವಿಶ್ವಾಸವಿದೆ. ಅದಕ್ಕಾಗಿ ನಮ್ಮ ಸರ್ಕಾರ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
