ಸಾರಾಂಶ
ಯಾವ ಜಿಲ್ಲೆಗಳಲ್ಲಿ ಘೋಷಿತ ಗೋಶಾಲೆಗಳು ಸ್ಥಾಪನೆ ಆಗಿಲ್ಲವೋ, ಅಲ್ಲಿ ಅವುಗಳನ್ನು ನಿರ್ಮಿಸುವ ಪ್ರಸ್ತಾಪ ಕೈಬಿಡಲು ಚಿಂತಿಸುತ್ತಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು: ರಾಜ್ಯದಲ್ಲಿ ಹೊಸ ಗೋಶಾಲೆ ನಿರ್ಮಿಸುವ ರಾಜ್ಯ ಬಿಜೆಪಿ ಸರ್ಕಾರದ 2022-23ನೇ ಸಾಲಿನ ಬಜೆಟ್ ಘೋಷಣೆಯಲ್ಲಿ ಕೊಂಚ ಮಾರ್ಪಾಡು ಮಾಡಲು ಹೊರಟಿರುವ ಸಿದ್ದರಾಮಯ್ಯ ಸರ್ಕಾರ, ಯಾವ ಜಿಲ್ಲೆಗಳಲ್ಲಿ ಘೋಷಿತ ಗೋಶಾಲೆಗಳು ಸ್ಥಾಪನೆ ಆಗಿಲ್ಲವೋ, ಅಲ್ಲಿ ಅವುಗಳನ್ನು ನಿರ್ಮಿಸುವ ಪ್ರಸ್ತಾಪ ಕೈಬಿಡಲು ಚಿಂತಿಸುತ್ತಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಹಿಂದಿನ ಬಿಜೆಪಿ ಸರ್ಕಾರದ ಬಜೆಟ್ ಹಲವು ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಘೋಷಣೆ ಮಾಡಿತ್ತು. ಆದರೆ ಅದು ಘೋಷಣೆ ಮಾಡಿದ ಅನೇಕ ಕಡೆ ಅವುಗಳ ಸ್ಥಾಪನೆ ಆಗಿಲ್ಲ. ಹೀಗಾಗಿ ಎಲ್ಲೆಲ್ಲಿ ಸ್ಥಾಪನೆ ಆಗಿಲ್ಲವೋ ಅಲ್ಲಿನ ಹೊಸ ಗೋಶಾಲೆಗಳ ನಿರ್ಮಾಣ ಕೈಬಿಡಲಾಗುತ್ತದೆ. ಅದರ ಬದಲಿಗೆ ಅವುಗಳಿಗೆ ಮೀಸಲಾಗಿದ್ದ ನಿಧಿಯಲ್ಲಿ ಉಳಿಯಲಿರುವ 10.5 ಕೋಟಿ ರು. ಅನುದಾನವನ್ನು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 14 ಜಿಲ್ಲೆಗಳ ಗೋಶಾಲೆಗಳ ಬಲವರ್ಧನೆಗೆ ಬಳಸಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ 2025ನೇ ಸಾಲಿನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ವೈಟ್‌ಟ್ಯಾಪಿಂಗ್ ಟೆಂಡರ್ ರದ್ದು:
ಇದೇ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದ 3ನೇ ಹಂತದ ಆಯ್ದ ರಸ್ತೆಗಳ ವೈಟ್ ಟ್ಯಾಪಿಂಗ್ ರಸ್ತೆಗಳ 2 ರಿಂದ 6ರವರೆಗಿನ ನಾಲ್ಕು ಪ್ಯಾಕೇಜ್‌ಗಳ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶಗಳನ್ನು ಹಿಂಪಡೆಯಲು ಹಾಗೂ ಕರೆದಿರುವ ಟೆಂಡರ್‌ಗಳನ್ನು ರದ್ದು ಮಾಡಲು ನಿರ್ಧರಿಸುವ ಸಾಧ್ಯತೆಯಿದೆ.
2018-19ನೇ ಸಾಲಿನಲ್ಲಿ ಒಟ್ಟು 1,172 ಕೋಟಿ ರು. ವೆಚ್ಚದಲ್ಲಿ 3 ಹಂತದಲ್ಲಿ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಈ ಪೈಕಿ ಮೂರನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 422 ಕೋಟಿ ರು. ಕಾಮಗಾರಿಗಳ ಆಯ್ದ ಪ್ಯಾಕೇಜ್‌ಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
5,000 ಕೋಟಿ ರು. ಸಾಲಕ್ಕೆ ಅವಕಾಶ:
ಇನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿಯನ್ನು 500 ಕೋಟಿ ರು.ಗಳಿಂದ 5,000 ಕೋಟಿ ರು.ಗಳಿಗೆ ಹೆಚ್ಚಳ ಮಾಡಲು ಸಂಪುಟ ಸಭೆ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.