ಸಿಲ್ಕ್‌ ಬೋರ್ಡ್‌ - ಕೆಐಎ ನಡುವಿನ ಮೆಟ್ರೋ ಮಾರ್ಗದಲ್ಲಿ ಗರ್ಡರ್‌ ಅಳವಡಿಕೆ ಯಶಸ್ವಿ

| N/A | Published : Feb 01 2025, 10:40 AM IST

Namma Metro

ಸಾರಾಂಶ

ಕೇಂದ್ರ ರೇಷ್ಮೇ ಮಂಡಳಿ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಡುವಿನ ನಮ್ಮ ಮೆಟ್ರೋ ಮಾರ್ಗಕ್ಕಾಗಿ ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ 65 ಮೀ. ಉದ್ದದ ಸಂಯೋಜಿತ ಗರ್ಡರ್‌ನ್ನು ಸೋಮವಾರ ಯಶಸ್ವಿಯಾಗಿ ಅಳವಡಿಸಲಾಗಿದೆ.

 ಬೆಂಗಳೂರು : ಕೇಂದ್ರ ರೇಷ್ಮೇ ಮಂಡಳಿ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಡುವಿನ ನಮ್ಮ ಮೆಟ್ರೋ ಮಾರ್ಗಕ್ಕಾಗಿ ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ 65 ಮೀ. ಉದ್ದದ ಸಂಯೋಜಿತ ಗರ್ಡರ್‌ನ್ನು ಸೋಮವಾರ ಯಶಸ್ವಿಯಾಗಿ ಅಳವಡಿಸಲಾಗಿದೆ.

ಇಸ್ರೋ ಮತ್ತು ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಗಳ ನಡುವಿನ ರೈನ್‌ ಬೋ ಆಸ್ಪತ್ರೆ ಬಳಿಯ ರೈಲ್ವೆ ಹಳಿಯ ಮೇಲೆ 4 ಉಕ್ಕಿನ ಗರ್ಡರ್‌ ಅಳವಡಿಸಲಾಗಿದೆ. ಈ ಕಾಮಗಾರಿಯು ಹಾಲಿ ಇರುವ ರೈಲ್ವೆ ಮಾರ್ಗ ಹಾಗೂ ಮುಂಬರುವ ಉಪನಗರ ರೈಲು ಯೋಜನೆ ಮಾರ್ಗಗಳ ಮೇಲೆ ಮಾಡಲಾಗಿದೆ. ಗರ್ಡರ್‌ ಅಳವಡಿಸಿರುವಲ್ಲಿ ಕ್ರೇನ್‌ ಮೂಲಕ ಕಾರ್ಯಾಚರಣೆಗೆ ಸ್ಥಳವಿರದ ಕಾರಣ ಎರಡು ಕ್ರೇನ್‌ಗಳನ್ನು ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ನಿಯೋಜಿಸಿ ಕಾಮಗಾರಿ ನಡೆಸಲಾಗಿದೆ.

ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಸಾಮಾನ್ಯವಾಗಿ ಬಿಎಂಆರ್‌ಸಿಎಲ್‌ 28 ಮೀ. ಉದ್ದದ ಗರ್ಡರ್‌ನ್ನು ಬಳಸುತ್ತಿದೆ. ಕೇಂದ್ರ ರೇಷ್ಮೇ ಮಂಡಳಿ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಂ ಮಾರ್ಗದಲ್ಲೂ ಅದೇ ಮಾದರಿಯ ಗರ್ಡರ್‌ ಅಳವಡಿಸಲಾಗುತ್ತಿದೆ. ಆದರೆ, ಮೇಲ್ಸೇತುವೆ, ರೈಲ್ವೆ ಕ್ರಾಸಿಂಗ್‌ಗಳಲ್ಲಿ ಮಾತ್ರ ನಿಗದಿಗಿಂತ ಹೆಚ್ಚಿನ ಉದ್ದದ ಗರ್ಡರ್‌ನ್ನು ಅಳವಡಿಸಲಾಗುತ್ತಿದೆ. ಇದೀಗ ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲೂ ಅದೇ ಮಾದರಿಯ ಗರ್ಡರ್‌ ಅಳವಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಗರ್ಡರ್‌ ಅಳವಡಿಕೆ ಕಾರ್ಯವನ್ನು ಜ. 27ರಿಂದ 30ರವರೆಗೆ ಪ್ರತಿದಿನ ರಾತ್ರಿ 9ರಿಂದ ಮರುದಿನ ಬೆಳಗ್ಗೆ 6ರವರೆಗೆ ನಡೆಸಲಾಗಿದೆ. ಜ. 27ರಂದು 36 ಮೀ. ಉದ್ದದ ಗರ್ಡರ್‌ನ್ನು ಅಳವಡಿಸಲಾಗಿದ್ದು, ಆನಂತರದ ದಿನಗಳಲ್ಲೂ 2ರಿಂದ 4 ಗರ್ಡರ್‌ನ್ನು ಅಳವಡಿಸಲಾಗಿದೆ. ಕಾಮಗಾರಿಗಾಗಿ ಒಟ್ಟು 70 ಮಂದಿಯನ್ನು ಬಳಸಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.