ಸಾರಾಂಶ
ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಂಡಿರುವ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಚಾಲನೆ ನೀಡಿದರು.
ರಾಯಚೂರು : ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಂಡಿರುವ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಚಾಲನೆ ನೀಡಿದರು.
ಇಲ್ಲಿನ ಸ್ಥಳೀಯ ತಾಯಿ ಮತ್ತು ಮಕ್ಕಳ ಸರ್ಕಾರಿ (ಹಳೆಯ ಜಿಲ್ಲಾಸ್ಪತ್ರೆ ಆವರಣ) ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಾತೃತ್ವ ಸುರಕ್ಷಾ ಅಭಿಯಾನವನ್ನು ಸಚಿವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ದಿನೇಶ್, ರಾಯಚೂರಿನಿಂದಲೇ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗುವುದು. ಗ್ರಾಮೀಣದ ಜನತೆಗೆ ಉತ್ತಮ ವೈದ್ಯಕೀಯ ಸೌಕರ್ಯ ಸಿಗುವ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸಲಿದೆ. ಅಗತ್ಯ ತಕ್ಕಂತೆ ಸವಲತ್ತುಗಳನ್ನು ಒದಗಿಸಿ ಮಿನಿ ಜಿಲ್ಲಾಸ್ಪತ್ರೆಗಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ ಎಂದರು.ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಪ್ರಯತ್ನದ ಭಾಗವಾಗಿ ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಆಶಾ ಕಾರ್ಯಕರ್ತೆಯರಿಗೆ ಬರುವ ಏಪ್ರಿಲ್ ನಿಂದ ಕನಿಷ್ಠ ₹10000 ಗೌರವಧವನ್ನು ಗ್ಯಾರಂಟಿಯಾಗಿ ಒದಗಿಸಲಾಗುವುದು ಎಂದರು. ಈ ವೇಳೆ ಸಚಿವ ಎನ್‌ಎಸ್ ಬೋಸರಾಜು ಸಹ ಇದ್ದರು.
ಏನಿದು ಯೋಜನೆ?
ಪ್ರತಿ ತಿಂಗಳು 2 ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ಕೈಗೊಂಡು, ಅಗತ್ಯವಾದ ಪೌಷ್ಠಿಕಾಂಶದ ಆಹಾರ, ಆರೋಗ್ಯ ಸೇವೆಯನ್ನು ಒದಗಿಸಿಕೊಡಲಾಗುತ್ತದೆ. ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ ಸ್ತ್ರೀರೋಗ ವೈದ್ಯರಿಂದ ಗರ್ಭಿಣಿಯರಿಗೆ 2ನೇ ಅಥವಾ 3ನೇ ತ್ರೈಮಾಸಿಕದಲ್ಲಿ ಕನಿಷ್ಠ 1 ತಪಾಸಣೆ ನಡೆಸಲಾಗುತ್ತದೆ. ತಾಲೂಕು ಆಸ್ಪತ್ರೆಗಳು ಸಹ 24 ಗಂಟೆಯೂ ಕಾರ್ಯನಿರ್ವಹಿಸಿ ಉತ್ತಮ ಸೇವೆ ನೀಡಲಿವೆ.
ಹೊಸ ಪಿಎಚ್‌ಸಿ, ಸಿಎಚ್‌ಸಿ ಪ್ರಾರಂಭ
ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರಲಾಗುತ್ತದೆ. ಆ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಿಂದ ಸುಮಾರು 900 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಇದರನ್ವಯ ರಾಯಚೂರು ಜಿಲ್ಲೆಗೆ 8 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿಯಲ್ಲಿ ನಗರ ಆರೋಗ್ಯ ಕೇಂದ್ರ, ರಾಯಚೂರು ನಗರದಲ್ಲಿ ಸಮುದಾ ಯ ಆರೋಗ್ಯ ಕೇಂದ್ರ ಅಲ್ಲದೇ ಜಿಲ್ಲೆಯ ಯಾವುದಾದರು ತಾಲೂಕಿನಲ್ಲಿ ಉಪವಿಭಾಗದ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.