ಬೆಂಗಳೂರು-ಮಧುರೈ ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಗೌರ್ನರ್‌ ಗೆಹಲೋತ್‌ ಸ್ವಾಗತ

| Published : Sep 01 2024, 07:52 AM IST

ernakulam bengaluru vande bharat train

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್ ಮೂಲಕ ಚಾಲನೆ ನೀಡಿದ ಬೆಂಗಳೂರು-ಮಧುರೈ ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸ್ವಾಗತಿಸಿದರು.

ಬೆಂಗಳೂರು  :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್ ಮೂಲಕ ಚಾಲನೆ ನೀಡಿದ ಬೆಂಗಳೂರು-ಮಧುರೈ ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸ್ವಾಗತಿಸಿದರು.

ಈ ವೇಳೆ ಮಾತನಾಡಿ, ಮಧುರೈ-ಬೆಂಗಳೂರು ನಡುವೆ ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ತ್ವರಿತ ಮತ್ತು ಅನುಕೂಲಕರ ಪ್ರಯಾಣ ಒದಗಿಸುತ್ತದೆ. ಈ ಸೇವೆಯು ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಮತ್ತು ಐಟಿ ಹಬ್ ಮತ್ತು ಸಿಲಿಕಾನ್ ಸಿಟಿಗೆ ಅನುಕೂಲವಾಗಲಿದೆ ಎಂದರು. ಸಂಸದರಾದ ಪಿ.ಸಿ ಮೋಹನ್, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕರಾಗಿ ಯೋಗೇಶ್‌ ಮೋಹನ್‌ ಇದ್ದರು.

ರೈಲಿನ ಸಂಚಾರ ಮಾರ್ಗ 

ಮಧುರೈ ಜಂಕ್ಷನ್ ನಿಲ್ದಾಣದಿಂದ ಹೊರಟ ರೈಲು ದಿಂಡಿಗಲ್- ತಿರುಚ್ಚಿ-ಕರೂರು-ನಾಮಕ್ಕಲ್-ಸೇಲಂ-ಕೆ.ಆರ್.ಪುರ ಮಾರ್ಗವಾಗಿ ಬೆಂಗಳೂರು ಕಂಟೋನ್ಮಂಟ್ ರೈಲು ನಿಲ್ದಾಣ ತಲುಪಿದೆ. ಈ ಹೊಸ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಮಧುರೈ- ಬೆಂಗಳೂರು, ಬೆಂಗಳೂರು-ಮಧುರೈ ನಡುವೆ ಸಂಚರಿಸಲಿದೆ. ಬೆಳಗ್ಗೆ 5.15 ಕ್ಕೆ ಮಧುರೈ ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು (ಸಂಖ್ಯೆ 20671) ದಿಂಡಿಗಲ್- ತಿರುಚ್ಚಿ-ಕರೂರು-ನಾಮಕ್ಕಲ್-ಸೇಲಂ-ಕೆ.ಆರ್.ಪುರ ಮಾರ್ಗವಾಗಿ ಬೆಂಗಳೂರು ದಂಡು ರೈಲು ನಿಲ್ದಾಣವನ್ನು ಅದೇ ದಿನ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಮಧುರೈ- ಬೆಂಗಳೂರು ಟಿಕೆಟ್ ದರ ₹ 1,575 ನಿಗದಿಸಲಾಗಿದೆ.

ಮಂಗಳವಾರ ಹೊರತುಪಡಿಸಿ ವಾರದ 6 ದಿನ ಮಧ್ಯಾಹ್ನ 1.30ಕ್ಕೆ ಬೆಂಗಳೂರು ಕಂಟೋನ್ಮಂಟ್ ರೈಲು ನಿಲ್ದಾಣದಿಂದ ಹೊರಡುವ ರೈಲು (20672) ಅದೇ ದಿನ ರಾತ್ರಿ 9.45ಕ್ಕೆ ಮಧುರೈ ತಲುಪಲಿದೆ.