ಸಾರಾಂಶ
ಪಾಕಿಸ್ತಾನದ ಮೂಗು ಕುಯ್ಯುತ್ತೇವೆ ಎಂದು ಹೋಗಿ ಅಮೆರಿಕ ಮಾತು ಕೇಳಿ ಮತ್ತೊಮ್ಮೆ ನಮ್ಮ ಮೇಲೆ ದುಸ್ಸಾಹಸ ಮಾಡಲು ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ.
ಬೆಂಗಳೂರು : ಪಾಕಿಸ್ತಾನದ ಮೂಗು ಕುಯ್ಯುತ್ತೇವೆ ಎಂದು ಹೋಗಿ ಅಮೆರಿಕ ಮಾತು ಕೇಳಿ ಮತ್ತೊಮ್ಮೆ ನಮ್ಮ ಮೇಲೆ ದುಸ್ಸಾಹಸ ಮಾಡಲು ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ನಾವು ನಮ್ಮ ದೇಶಕ್ಕಾಗಿ ಆರಂಭಿಸಿದ ಕದನದ ಉದ್ದೇಶ ಈಡೇರಿದೆಯೇ ಎಂಬುದರ ಬಗ್ಗೆ ಜನರಿಗೆ ಕೇಂದ್ರ ಸರ್ಕಾರ ಉತ್ತರ ಕೊಡಲಿ ಎಂದು ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಹೇಳಿದ ಕೂಡಲೇ ಶಾಲೆಯಲ್ಲಿ ಮೇಷ್ಟ್ರ ಎದುರು ಮಂಡಿಯೂರಿದಂತೆ ದೊಡ್ಡಣ್ಣನ ಮಾತು ಕೇಳಿದ್ದೀರಿ. ಅವರನ್ನು ಕೇಳಿ ಕದನ ಆರಂಭ ಮಾಡಿದ್ದೇವಾ? ಅವರಿಗಾಗಿ ಕದನ ಮಾಡಿದ್ದೇವಾ? ಅಥವಾ ದೇಶದ ಸಾರ್ವಭೌಮತ್ವಕ್ಕಾಗಿ ಕದನ ಆರಂಭ ಮಾಡಿದ್ದೇವಾ ಎಂದು ಉತ್ತರಿಸಿ ಎಂದು ಕಿಡಿಕಾರಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರನ್ನು ಯಾರೇ ಪ್ರಶ್ನೆ ಮಾಡಿದರೂ ದೇಶ ವಿರೋಧಿ ಎಂದು ಬಿಂಬಿಸಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಾರೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸಲಾಗದೆ ಪಲಾಯನವಾದ ಮಾಡುತ್ತಿದ್ದಾರೆ. ಅಮೆರಿಕದವರು ನಾವು ಮಧ್ಯಪ್ರವೇಶ ಮಾಡಿ ಭಾರತವನ್ನು ಕದನದಿಂದ ಹಿಂದೆ ಸರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನದವರು ನಾವೇ ಗೆದ್ದಿದ್ದೇವೆ ಎಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಾಗಾದರೆ ನಮ್ಮ ಉದ್ದೇಶ ಈಡೇರಿದೆಯೇ ಎಂದು ಪ್ರಶ್ನಿಸಿದರು.
ಭಾರತದ ಆಂತರಿಕ ವಿಚಾರದಲ್ಲಿ ಮೂಗಿ ತೂರಿಸದ ಹಾಗೆ ಹಾಗೂ ಮತ್ತೊಮ್ಮೆ ಭಯೋತ್ಪಾದನೆ ಕೃತ್ಯ ಎಸಗುವ ಸಾಹಸ ಮಾಡದಂತೆ ಬುದ್ಧಿ ಕಲಿಸಲು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಪಾಕಿಸ್ತಾನದ ಮೂಗು ಕುಯ್ಯುತ್ತೇವೆ ಎಂದು ಹೇಳಿ ಹೋಗಿ ಈಗ ಅವರು ಮತ್ತೊಮ್ಮೆ ತಲೆ, ಬಾಯಿ, ಬೆರಳು ಎಲ್ಲವನ್ನೂ ನಮ್ಮಲ್ಲಿ ತೂರಿಸಲು, ಮತ್ತೊಮ್ಮೆ ದುಸ್ಸಾಹಸ ಮಾಡಲು ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಕೃಷ್ಣ ಬೈರೇಗೌಡ ಆರೋಪ ಮಾಡಿದರು.
ಕಾಶ್ಮೀರ ವಿಚಾರದಲ್ಲಿ ಚರ್ಚೆಯೇನಿದೆ?:
ಈವರೆಗೆ ಅಖಂಡ ಭಾರತದ ಬಗ್ಗೆ ಮಾತನಾಡಿದ್ದೇವೆ. ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ ಎಂದು ಹೇಳಿದ್ದೇವೆ. ಇಂದು ಅಮೆರಿಕ ಅಧ್ಯಕ್ಷ ಕಾಶ್ಮೀರ ವಿಚಾರದಲ್ಲೂ ಎರಡು ರಾಷ್ಟ್ರಗಳ ನಡುವೆ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಬೇರೊಬ್ಬರು ಚರ್ಚೆ ಮಾಡುವುದು ಏನಿದೆ? ಏನು ಚರ್ಚೆ ಮಾಡಲು ಹೊರಟಿದ್ದೀರಿ? ಭಾರತದ ಅಂಗವೇ ಅಥವಾ ಅಲ್ಲವೇ ಎಂದು ಚರ್ಚಿಸಲು ಹೊರಟಿದ್ದೀರಾ? ಅಮೆರಿಕ ಅಧ್ಯಕ್ಷರ ಹೇಳಿಕೆಗಳಿಗೆ ಈವರೆಗೆ ಯಾಕೆ ನಮ್ಮ ಕೇಂದ್ರ ಸರ್ಕಾರ ವಿರೋಧ ಮಾಡಿಲ್ಲ? ನಮ್ಮನ್ನು ಏನೇ ದೂಷಣೆ ಮಾಡಲಿ. ಆದರೆ ದೇಶದ ಜನರಿಗೆ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಕೃಷ್ಣ ಬೈರೇಗೌಡ ಆಗ್ರಹಿಸಿದರು.
ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಭಾರತೀಯ ಸೇನೆ ಕಾರ್ಯಾಚರಣೆ ಬಗ್ಗೆ ನಾವ್ಯಾರೂ ಮಾತಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಕಾಂಗ್ರೆಸ್‌ನ ಪ್ರತಿಬಿಂಬ. ನಾವು ಯಾವತ್ತಿಗೂ ಸೇನೆಗೆ ಬೆಂಬಲ ನೀಡಿದ್ದೇವೆ. ಇದು ಚರ್ಚೆಯ ವಿಷಯವೇ ಅಲ್ಲ. ಯಾರೋ ಹೇಳುತ್ತಾರೆ ಎಂದು ಚರ್ಚೆ ಮಾಡುವುದು ತಪ್ಪು ಎಂದು ಕೃಷ್ಣ ಬೈರೇಗೌಡ ಹೇಳಿದರು.