ಹಾಸನ ಲೈಂಗಿಕ ದೌರ್ಜನ್ಯ: ನಾಳೆ ಬೃಹತ್‌ ಪ್ರತಿಭಟನೆ

| Published : Apr 28 2024, 08:35 AM IST

mobile track 3.jpg

ಸಾರಾಂಶ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಏ.29ರಂದು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ತಿಳಿಸಿದೆ.

ಹಾಸನ :  ಇಡೀ ನಾಗರಿಕ ಸಮಾಜವೇ ಬೆಚ್ಚಿಬೀಳುವಂತ ಘಟನೆ ಹಾಸನದಲ್ಲಿ ನಡೆದಿದ್ದು, ಪೆನ್‌ಡ್ರೈವ್ ಮುಖಾಂತರ ಮಹಿಳೆಯರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಿ ವಾಟ್ಸ್‌ ಆಪ್ ಮೂಲಕ ವ್ಯಾಪಕವಾಗಿ ಹರಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಏ.29ರಂದು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ತಿಳಿಸಿದೆ.

‘ಹಾಸನ ಜಿಲ್ಲೆಯ ಪ್ರಭಾವಿ ವ್ಯಕ್ತಿಯೊಬ್ಬರು ನೂರಾರು ಮಹಿಳೆಯರನ್ನು ಅಕ್ರಮವಾಗಿ ಲೈಂಗಿಕವಾಗಿ ಬಳಸಿಕೊಂಡು ಅವರ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆ ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಬದುಕು ಛಿದ್ರಗೊಂಡಿದೆ. ಆದರೆ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅವರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುವ ಪ್ರಭಾವಿ ವ್ಯಕ್ಯಿ ಹಾಗೂ ಮಹಿಳೆಯರ ಖಾಸಗಿ ಲೈಂಗಿಕ ದೃಶ್ಯಗಳನ್ನು ಸಾರ್ವಜನಿಕವಾಗಿ ಹರಡುತ್ತಿರವ ವ್ಯಕ್ತಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಇಂತಹ ವಿಕ್ಷಿಪ್ತ ಮತ್ತು ವಿಕೃತ ಲೈಂಗಿಕ ಅಕ್ರಮದಿಂದಾಗಿ ಹಾಸನ ಜಿಲ್ಲೆಯ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಜಿಲ್ಲೆಯ ಪ್ರಭಾವಿ ವ್ಯಕ್ತಿ ಮತ್ತು ಆ ದೃಶಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿ ಮಹಿಳೆಯರ ಖಾಸಗಿ ಬದುಕಿಗೆ ದಕ್ಕೆ ತಂದಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಬೆಳಿಗ್ಗೆ 11ಕ್ಕೆ ದಲಿತ, ರೈತ, ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಮತ್ತು ವ್ಯಕ್ತಿಗಳ ಐಕ್ಯ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.