ರಾಜ್ಯದ 7 ಜಿಲ್ಲೆಗಳಲ್ಲಿ ಗುರುವಾರ ಮಳೆಯ ರೌದ್ರಾವತಾರ ತಾಳಿದ್ದು, ಮಳೆ ಹಾಗೂ ಸಿಡಿಲ ಅಬ್ಬರಕ್ಕೆ ಇಬ್ಬರು ಮೃತರಾಗಿದ್ದಾರೆ. ಇವರಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಒಬ್ಬ ಕುರಿಗಾಹಿ ಮೃತಪಟ್ಟಿದ್ದಾನೆ.
ಬೆಂಗಳೂರು : ರಾಜ್ಯದ 7 ಜಿಲ್ಲೆಗಳಲ್ಲಿ ಗುರುವಾರ ಮಳೆಯ ರೌದ್ರಾವತಾರ ತಾಳಿದ್ದು, ಮಳೆ ಹಾಗೂ ಸಿಡಿಲ ಅಬ್ಬರಕ್ಕೆ ಇಬ್ಬರು ಮೃತರಾಗಿದ್ದಾರೆ. ಇವರಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಒಬ್ಬ ಕುರಿಗಾಹಿ ಮೃತಪಟ್ಟಿದ್ದಾನೆ. ಸೇತುವೆ ಕಾಮಗಾರಿ ವೇಳೆ ಸಿಡಿಲು ಬಡಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.
ಇನ್ನು ಮಂಗಳೂರು ನಗರ ಮಳೆ ನೀರಿನಲ್ಲಿ ತೊಯ್ದು ಹೋಗಿದ್ದು, ವಿಮಾನ ಕಾರ್ಯಾಚರಣೆ ಅಡಚಣೆ ಆಗಿದೆ. ಉಡುಪಿ, ಯಾದಗಿರಿ, ಹಾವೇರಿ, ಕೊಡಗು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆ ಸುರಿದಿದೆ. ಕಂಬಗಳು, ಮರಗಳು ಮುರಿದು ಬಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಮುಂದಿನ 3 ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಮಳೆ ಮುನ್ಸೂಚನೆ ನೀಡಲಾಗಿದೆ.
ಇಬ್ಬರು ಬಲಿ:
ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಹಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮರಡಿ ಗ್ರಾಮದ ನಿವಾಸಿ ಅಜಯ್ ದುಂಡಪ್ಪ ಬಿ.ಗವನಾಳ (19) ಮೃತಪಟ್ಟಿದ್ದಾರೆ. ಕುರಿಗಳೊಂದಿಗೆ ವಲಸೆ ಬಂದಿದ್ದ ದುಂಡಪ್ಪ ಕುಟುಂಬವು ಮುದಹದಡಿ ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಮಳೆ ಆರಂಭವಾದಾಗ ಅಜಯ್ ರಕ್ಷಣೆ ಪಡೆಯಲು ಮರದಡಿ ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಉಡುಪಿ ಜಿಲ್ಲೆ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ದುರಸ್ತಿ ವೇಳೆ ಸಿಡಿಲು ಬಡಿದು ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತಪಟ್ಟಿದ್ದಾರೆ. ಲವಜೋತ್ ಸಿಂಗ್(28) ಗಾಯಗೊಂಡಿದ್ದಾರೆ.
ಇನ್ನು ಯಾದಗಿರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ಯಾದಗಿರಿ, ಶಹಾಪುರ ಹಾಗೂ ಸಗರದಲ್ಲಿ ಜನಜೀವನ ಅಸ್ತವ್ಯಸ್ತ ಆಯಿತು. ಕಚ್ಚಾ ಮನೆಗಳಲ್ಲಿನ ಟಿನ್ ಶೆಡ್‌ಗಳು ಹಾರಿಹೋದರೆ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಜಲಾವೃತದ ಭೀತಿ ಎದುರಾಗಿತ್ತು.
ಮರ ತೆರವು ಮಾಡಿದ ಎನ್‌ಸಿಸಿ:
ಕೊಡಗು ಜಿಲ್ಲೆಯ ವಿರಾಜಪೇಟೆ–ಮೂರ್ನಾಡು ಮುಖ್ಯ ರಸ್ತೆಗೆ ಮರ ಬಿದ್ದು ಅರ್ಧ ಗಂಟೆ ವಾಹನ ಸಂಚಾರ ನಿಂತಿತ್ತು. ತರಬೇತಿ ಮುಗಿಸಿ ಬರುತ್ತಿದ್ದ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕದ ಕೆಡೆಟ್‌ಗಳು ಬಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಮಳೆಗೆ ಮಂಗಳೂರು ಸುಸ್ತು:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಆಯಕಟ್ಟಿನ ಸ್ಥಳಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 2-3 ಅಡಿ ನೀರು ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಯ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೂ ತೊಂದರೆ ಉಂಟಾಗಿತ್ತು. ಬೆಂಗಳೂರಿನಿಂದ ಆಗಮಿಸಿದ ಎರಡು ವಿಮಾನಗಳು ವಾತಾವರಣ ವೈಪರೀತ್ಯದಿಂದ ತಡವಾಗಿ ಇಳಿದವು.
- ಉಡುಪಿ, ಯಾದಗಿರಿ, ಹಾವೇರಿ, ಕೊಡಗು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ವಿವಿಧೆಡೆ ಮಳೆ
- ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಹಿ ಅಜಯ್ ದುಂಡಪ್ಪ ಬಿ.ಗವನಾಳ ಸಿಡಿಲಿಗೆ ಬಲಿ
- ಉಡುಪಿ ಜಿಲ್ಲೆ ಕುಂದಾಪುರ ಬಳಿ ಸೇತುವೆ ದುರಸ್ತಿ ವೇಳೆ ಸಿಡಿಲು ಬಡಿದು ಪಂಜಾಬ್ ಕಾರ್ಮಿಕ ಸಾವು
- ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೂ ತೊಂದರೆ, 2 ವಿಮಾನಗಳು ವಿಳಂಬ
- ಮಂಗಳೂರು, ಕೊಡಗಿನ ಅನೇಕ ಕಡೆ ಮಳೆಯಿಂದ ಜನಜೀವನ ಏರುಪೇರು

