ಧಾರವಾಡ:
ಧಾರವಾಡ ನಗರ, ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಗುಡುಗು ಮಿಂಚಿನೊಂದಿಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಕೆಲ ಕಾಲ ಸುರಿದ ಮಳೆ ತಂಪೆರದಿದೆ. ಕೆಲವೆಡೆ ಬಿರುಗಾಳಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾದರೆ, ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಧಾರವಾಡ ನಗರದ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇದರಿಂದ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದು ಜನರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು. ಮಳೆಯೊಂದಿಗೆ ಬಿರುಗಾಳಿ ಬೀಸಿದ ಪರಿಣಾಮ ಹಣ್ಣು, ತರಕಾರಿ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸಿದ್ದಾರೆ. ಹುಬ್ಬಳ್ಳಿಯಲ್ಲಿ 6 ಗಂಟೆ ಶುರುವಾದ ಮಳೆ ಹದಿನೈದು ನಿಮಿಷ ರಭಸದಿಂದ ಸುರಿದ್ದ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಇನ್ನೂ ಅಳ್ನಾವರದಲ್ಲಿ ಬಿರುಗಾಳಿಗೆ ಮರಗಳು ಧರೆಗುರುಳಿದಿದ್ದರೆ ಪಟ್ಟಣದ ಬಸವರಾಜ ಹಾನಗಲ್ ಎಂಬುವರ ಮನೆ ಮೇಲ್ಚಾವಣಿ ಹಾರುಗೋಗಿದೆ.
ಕಬ್ಬಿಗೆ ವರ-ಮಾವಿಗೆ ಶಾಪ:ಹಲವು ದಿನಗಳಿಂದ ಮಳೆ ಇಲ್ಲದೆ ಒಣಗಲು ಆರಂಭಿಸಿದ್ದ ಕಬ್ಬಿನ ಬೆಳೆಗೆ ಮಂಗಳವಾರ ಸುರಿದ ಮಳೆ ಅನುಕೂಲವಾಗಿದೆ. ಬಿರು ಬೇಸಿಗೆಯಿಂದ ಅಂತರ್ಜಲ ಕುಸಿತವಾದ ಪರಿಣಾಮ ಕಬ್ಬಿನ ಬೆಳೆ ಸಂರಕ್ಷಿಸಿಕೊಳ್ಳಲು ಪರದಾಡುತ್ತಿದ್ದು ರೈತರು ಮಳೆ ಸುರಿದ ಪರಿಣಾಮ ಸಂತಸಗೊಂಡಿದ್ದಾರೆ. ಆದರೆ, ಬಿರುಗಾಳಿಯಿಂದ ಮಾವಿನ ಹಣ್ಣುಗಳು ಉದುರಿದ ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೊದಲೇ ಹವಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಮಂಗಳವಾರ ಸುರಿದ ಮಳೆಯಿಂದ ನಲುಗಿದ್ದಾರೆ.
ದಲ್ಲಾಳಿಗಳ ಕಣ್ಣೀರು:
ಆರಂಭದಲ್ಲಿ ಮಾವಿನ ಹೂವು ನೋಡಿ ಗುತ್ತಿಗೆ ಪಡೆದಿದ್ದ ದಲ್ಲಾಳಿಗಳು ಇಳುವರಿ ಕುಸಿತದಿಂದ ಹಾಕಿದ ಬಂಡವಾಳವೂ ಬರುವುದಿಲ್ಲವೆಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಇದೀಗ ಪದೇ ಪದೇ ಬಿರುಗಾಳಿ ಬೀಸುತ್ತಿರುವ ಪರಿಣಾಮ ಮಾವಿನ ಹಣ್ಣು ನೆಲಕ್ಕುರುಳಿದ ಪರಿಣಾಮ ಕಣ್ಣೀರು ಸುರಿಸುತ್ತಿದ್ದಾರೆ.
ಹಳಿ ಮೇಲೆ ಬಿದ್ದ ಮರ:ಅಳ್ನಾವರ-ಬೆಳಗಾವಿ ಮಾರ್ಗದಲ್ಲಿ ಅಳ್ನಾವರ ರೈಲು ನಿಲ್ದಾಣದಿಂದ 1 ಕಿ.ಮೀ ಅಂತರದಲ್ಲಿ ಭಾರೀ ಗಾತ್ರದ ಮರವೊಂದು ರೈಲು ಹಳಿಯ ಮೇಲೆ ಉರುಳಿದ ಪರಿಣಾಮ ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತವಾಯಿತು. ಸಂಜೆ 5.30ರ ಬಳಿಕ ಮರ ತೆರವುಗೊಳಿಸಿದ ಬಳಿಕ ರೈಲು ಸಂಚಾರ ಸರಾಗವಾಗಿ ಮುಂದುವರಿಯಿತು.