ಸಾರಾಂಶ
ರಾಜ್ಯದ ವಿವಿಧೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಯಾದಗಿರಿ, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಗದಗ ಸೇರಿ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ.
ಬೆಂಗಳೂರು : ರಾಜ್ಯದ ವಿವಿಧೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಯಾದಗಿರಿ, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಗದಗ ಸೇರಿ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ಒಂದೆಡೆ ರೈತರ ಮೋಗದಲ್ಲಿ ಸಂತಸ ಉಂಟಾದರೆ ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ 3 ದಿನಗಳಲ್ಲಿ ಭಾರೀ ಮಳೆ ಸುರಿದಿದ್ದು, ಪ್ರಸ್ತಕ ಬೆಳೆಗೆ ಅನುಕೂಲವಾಗಲಿದೆ. ಇನ್ನೂ ಒಂದು ವಾರ ನಿರಂತರ ಮಳೆಯಾಗುವ ಸಾಧ್ಯತೆಗಳಿವೆ. ವಡಗೇರಾ ತಾಲೂಕಿನ ಬಬಲಾದ ಗ್ರಾಮ ಜಲಾವೃತಗೊಂಡಿದ್ದು, 15ಕ್ಕೂ ಹೆಚ್ಚು ಮನೆಯೊಳಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಅಪಾರ ಪ್ರಮಾಣದ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿಗಳಾಗಿವೆ. ಕೃಷಿ ಜಮೀನುಗಳಲ್ಲಿ ನೀರು ನುಗ್ಗಿ, ಬೆಳೆಗಳು ಹಾನಿಗೊಳಗಾಗಿವೆ.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ 4 ವರ್ಷದ ಬಳಿಕ ಮತ್ತೆ ಭೂಕುಸಿತವಾಗಿದ್ದು, ಯಾವುದೇ ಅನಾಹುತ ನಡೆದಿಲ್ಲ. ಹೊಸಕುಂಬ್ರಿಯ ಬಳಿ ಪದೇಪದೇ ಕುಸಿತವಾಗುತ್ತಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನವರೆಗೆ ಒಟ್ಟು 28 ಮಿ.ಮೀ ಮಳೆ ದಾಖಲಾಗಿದೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭರ್ಜರಿ ಮಳೆಯಾಗಿದೆ.
ಕರಾವಳಿಗೆ 2 ದಿನ ರೆಡ್ ಅಲರ್ಟ್:
ಕರಾವಳಿಯಲ್ಲಿ ಶನಿವಾರ ಸಾಧಾರಣ ಮಳೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ಜು.20 ಮತ್ತು 21ರಂದು ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಿತ್ತು ಹೋದ ಸೇತುವೆ: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದ ಬಳಿ ತಾತ್ಕಾಲಿಕ ಸಂಚಾರಕ್ಕೆ ನಿರ್ಮಿಸಲಾಗಿದ್ದ ಮೇಲ್ಸೆತುವೆ ಮಳೆ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ಕಳೆದ 2 ದಿನಗಳಿಂದ ತಾಲೂಕಿನ ಹಳ್ಳಗಳು ತುಂಬಿ ಹರಿಯುತ್ತಿವೆ. ಭಟಪ್ಪನಹಳ್ಳಿ-ಚಿಕೇನಕೊಪ್ಪ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋದ ಕಾರಣ ಚಿಕೇನಕೊಪ್ಪ ಗ್ರಾಮಸ್ಥರ ಸಂಚಾರಕ್ಕೆ ಅನಾನುಕೂಲವಾಗಿದೆ.